ಉಡುಪಿ: ಆರ್ಥಿಕ ಸಂಕಷ್ಟದಿಂದ ಹೊಟೇಲ್ ಉದ್ಯಮ ಚೇತರಿಕೆ ಕಾಣುವಷ್ಟರಲ್ಲಿ ಮತ್ತೆ ಹೊಡೆತ ಬಿದ್ದಿದೆ. ಕೊರೊನಾ ಎರಡನೇ ಅಲೆಯ ಕಾರಣ ವಾರದಿಂದ ಹೊಟೇಲ್‌ಗಳಲ್ಲಿ ಗ್ರಾಹಕರ ಸಂಖ್ಯೆ ತೀವ್ರ ಇಳಿಮುಖವಾಗುತ್ತಿದೆ.
ಕೋವಿಡ್ 2ನೇ ಅಲೆ ನಿಯಂತ್ರಣಕ್ಕೆ ಸರಕಾರ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದ್ದು, ಪಬ್, ಬಾರ್, ಕ್ಲಬ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಆಸನಗಳ ಸಾಮರ್ಥ್ಯದ ಶೇ. 50ನ್ನು ಮೀರುವಂತಿಲ್ಲ ಎಂಬ ನಿಯಮ ಜಾರಿಗೊಳಿಸಿದೆ. ಇದು ಹೊಟೇಲ್ ಉದ್ಯಮಕ್ಕೆ ಮತ್ತೆ ಬಹುದೊಡ್ಡ ಹೊಡೆತವಾಗಿದೆ.
ಪ್ರವಾಸಿಗರ ಸಂಖ್ಯೆ ಇಳಿಕೆ
ರಾಜ್ಯ ಸೇರಿದಂತೆ ಹೊರ ರಾಜ್ಯಗಳಲ್ಲಿ ಸೋಂಕು ಹೆಚ್ಚುತ್ತಿರುವ ಪರಿಣಾಮ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯೂ ಕುಸಿತ ಕಂಡಿದೆ.ಹೊರ ಜಿಲ್ಲೆಗಳಿಂದ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆಯಲ್ಲಿ ಶೇ. 60ರಷ್ಟು, ಹೊರರಾಜ್ಯಗಳ ಪ್ರವಾಸಿಗರ ಸಂಖ್ಯೆಯಲ್ಲಿ ಶೇ. 70ರಷ್ಟು ಕಡಿಮೆಯಾಗಿದೆ ಎನ್ನುತ್ತಾರೆ ಹೊಟೇಲ್ ಮಾಲಕರು.
ಮನೆ ಆಹಾರದತ್ತ ಒಲವು
ಹೆದ್ದಾರಿ ಬದಿ ಸಹಿತ ನಗರದಲ್ಲಿರುವ ಬಹುತೇಕ ಹೊಟೇಲ್‌ಗಳೂ ಪ್ರವಾಸಿಗರನ್ನೇ ನಂಬಿಕೊಂಡಿವೆ. ಆದರೆ ಕೊರೊನಾ ಹೆಚ್ಚುತ್ತಿರುವಂತೆ ಪ್ರವಾಸಿಗರು, ದೂರ ಪ್ರಯಾಣ ಬೆಳೆಸುವವರು ಮನೆಗಳಿಂದ ಹೊರಡುವಾಗಲೇ ಅಗತ್ಯವಿರುವಷ್ಟು ಆಹಾರವನ್ನು ತಯಾರಿಸಿ ಜತೆಗೊಯ್ದು ವಾಹನದ ಒಳಗೇ ಕುಳಿತು ಸೇವಿಸುತ್ತಿದ್ದಾರೆ. ಈ ಎಲ್ಲ ಅಂಶಗಳಿಂದ ಹೊಟೇಲ್ ಮಾಲಕರು ಕಂಗಾಲಾಗಿದ್ದಾರೆ.
Related Articles
ಸಾಲದ ಸುಳಿಯಲ್ಲಿ ಉದ್ದಿಮೆ
ಗ್ರಾಹಕರ ಸುರಕ್ಷೆಗೆ ಆದ್ಯತೆ ನೀಡಲಾಗುತ್ತಿದ್ದರೂ ಗ್ರಾಹಕರು ಹೊಟೇಲ್‌ಗಳತ್ತ ಬರಲು ಹಿಂದೇಟು ಹಾಕುತ್ತಿದ್ದಾರೆ. ಕಳೆದ ವರ್ಷದ ಕೊರೊನಾ ಅಲೆ ಕ್ಷೀಣಿಸುತ್ತಿದ್ದಂತೆ ಹೊಸದಾಗಿ ಹೊಟೇಲ್ ಉದ್ಯಮ ಆರಂಭಿಸಿದ್ದ ಯುವ ಉದ್ಯಮಿಗಳು ಸಾಲದ ಸುಳಿಗೆ ಸಿಲುಕಿದ್ದಾರೆ. ಕಾರ್ಮಿಕರ ವೇತನ, ಬಾಡಿಗೆ, ಸಾಲದ ಇಎಂಐ ಸೇರಿದಂತೆ ಪ್ರತೀ ತಿಂಗಳೂ ದೊಡ್ಡ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಇದರಿಂದಾಗಿ ಹೊಟೇಲ್ ಮುಚ್ಚುವ ಸ್ಥಿತಿ ಅವರಿಗೆ ಎದುರಾಗಿದೆ.
ಸರಕಾರ ಹೊಟೇಲ್ ಮಾಲಕರ ಮನವಿಗೆ ಸ್ಪಂದಿಸದಿರುವುದು ಬೇಸರ ತರಿಸಿದೆ. ಲಾಕ್‌ಡೌನ್ ಅವಧಿಯಲ್ಲಿ ಮುಚ್ಚಲ್ಪಟ್ಟು ಅಪಾರ ಪ್ರಮಾಣದಲ್ಲಿ ನಷ್ಟ ಅನುಭವಿಸಿದ್ದ ಹೊಟೇಲ್ ಉದ್ಯಮ ಈಗ ಮತ್ತೆ ನಷ್ಟದತ್ತ ಮುಖಮಾಡಿದೆ. ಬಾಡಿಗೆ, ವಿದ್ಯುತ್ ಬಿಲ್, ಕಾರ್ಮಿಕರ ವೇತನ ನೀಡಲು ಸಾಧ್ಯವಾಗುತ್ತಿಲ್ಲ. ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿರುವುದು ಬಹು ದೊಡ್ಡ ಹಿನ್ನಡೆಯಾಗಿದೆ.
– ತಲ್ಲೂರು ಶಿವರಾಮ ಶೆಟ್ಟಿ, ಅಧ್ಯಕ್ಷರು, ಜಿಲ್ಲಾ ಹೊಟೇಲ್ ಮಾಲಕರ ಸಂಘ, ಉಡುಪಿ