Advertisement

ತಾಯಿ-ಮಗುವಿನ ಆರೋಗ್ಯ ಸೇವೆಗೆ ಆಸ್ಪತ್ರೆ ಸಿದ್ಧ

04:20 PM Oct 11, 2022 | Team Udayavani |

ಕನಕಪುರ: ತಾಯಿ-ಮಗುವಿನ ಗುಣಮಟ್ಟದ ಆರೋಗ್ಯ ಸೇವೆಗೆ ಸಿದ್ಧಗೊಂಡಿರುವ ಹೈಟೆಕ್‌ ಆಸ್ಪತ್ರೆ ಸೌಲಭ್ಯ ಇನ್ನು ಒಂದೆರಡು ತಿಂಗಳಲ್ಲಿ ಸಾರ್ವಜನಿಕರ ಸೇವೆಗೆ ಸಿಗಲಿದೆ. ಇನೊ³àಸಿಸ್‌ ಸಂಸ್ಥೆಯ ಸಿಎಸ್‌ಆರ್‌ ಅನುದಾನದಲ್ಲಿ ನಗರದ ಮೈಸೂರು ರಸ್ತೆಯ ಹೆದ್ದಾರಿ ಬದಿಯಲ್ಲಿ ತಲೆಯೆತ್ತಿರುವ ತಾಯಿ-ಮಗು ಹೈಟೆಕ್‌ ಆಸ್ಪತ್ರೆ ಕಟ್ಟಡ ಪೂರ್ಣಗೋಂಡಿದ್ದು, ಒಂದು ತಿಂಗಳಲ್ಲಿ ಸರ್ಕಾರಕ್ಕೆ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳುವ ನಿರೀಕ್ಷೆ ಇದೆ.

Advertisement

ತಾಯಿ-ಮಗುವಿನ ಗುಣಮಟ್ಟದ ಆರೋಗ್ಯ ಸೇವೆಗೆ ಅಗತ್ಯವಿರುವ ಯಂತ್ರೋಪಕರಣ ಅಳವಡಿಕೆಯಷ್ಟೇ ಬಾಕಿ ಇದ್ದು, ಇನ್ನು ಎರಡು ತಿಂಗಳಲ್ಲಿ ಹೈಟೆಕ್‌ ಆಸ್ಪತ್ರೆ ಸೇವೆ ಸಾರ್ವಜನಿಕರಿಗೆ ಸಿಗಲಿದೆ. ಸರ್ಕಾರಿ ಆಸ್ಪತ್ರೆ ಎಂದರೆ ಬಡ ಮತ್ತು ಮಧ್ಯಮ ವರ್ಗದ ಜನರಿಗಷ್ಟೇ ಎಂಬ ಮಾತಿಗೆ ತಾಯಿ-ಮಗು ಹೈಟೆಕ್‌ ಆಸ್ಪತ್ರೆ ಅಪವಾದ ಎಂಬಂತಿದೆ. ತಾಲೂಕು ಕೇಂದ್ರದಲ್ಲಿ ಇನ್ಪೋಸಿಸ್‌ ಸುಧಾಮೂರ್ತಿ ಅವರು ನಿರ್ಮಾಣ ಮಾಡಿರುವ ಆಸ್ಪತ್ರೆ ಬಡವರು, ಮಧ್ಯಮ ವರ್ಗದವರಿಗಷ್ಟೆ ಅಲ್ಲ. ಶ್ರೀಮಂತರ ಪಾಲಿಗೂ ವರದಾನವಾಗಿದೆ. ಉಳ್ಳವರಿಗೆ ದುಬಾರಿ ಆರೋಗ್ಯ ಸೇವೆ ನೀಡುವ ಸಿಲಿಕಾನ್‌ ಸಿಟಿಯಲ್ಲಿರುವ ದೊಡ್ಡ ದೊಡ್ಡ ಆಸ್ಪತ್ರೆಗಳಿಗೂ ಸೆಡ್ಡು ಹೊಡೆಯುವ ರೀತಿಯಲ್ಲಿ ಗರ್ಭಿಣಿ, ಬಾಣಂತಿಯರಿಗೆ ಗುಣಮಟ್ಟದ ಆರೋಗ್ಯ ಸೇವೆ ಸಿಗಲಿದೆ ಎಂಬುದು ಅಧಿಕಾರಿಗಳ ಮಾತು.

ಅಗತ್ಯ ವೈದ್ಯರು, ಸಿಬ್ಬಂದಿಗೆ ಸರ್ಕಾರಕ್ಕೆ ವರದಿ: 56 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಈಗಾಗಲೇ ತಾಯಿ-ಮಗು ಹೈಟೆಕ್‌ ಆಸ್ಪತ್ರೆ ಕಾಮಗಾರಿ ಸಂಪೂರ್ಣಗೊಂಡು 6 ತಿಂಗಳು ಕಳೆಯುತ್ತಾ ಬಂದಿದೆ.  ಕಟ್ಟಡಕ್ಕೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಸರ್ಕಾರದಿಂದ ಈಗಾಗಲೇ 1.46 ಕೋಟಿ ರೂ. ವೆಚ್ಚದ ಟೆಂಡರ್‌ ಕರೆದು 800 ಕೆವಿ ಟ್ರಾನ್ಸ್‌ಫಾರ್ಮರ್‌ ಅಳವಡಿಸಿ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ. ಮೂರು ಅಂತಸ್ತಿನಲ್ಲಿ ನಿರ್ಮಾಣವಾಗಿರುವ ಹೈಟೆಕ್‌ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಅಗತ್ಯವಿರುವ ವೈದ್ಯಕೀಯ ಯಂತ್ರೋಪಕರಣ, ಲ್ಯಾಬ್‌ ಸಿಬ್ಬಂದಿ, ಪ್ರಸೂತಿ ತಜ್ಞರು ಸೇರಿದಂತೆ 160ಕ್ಕೂ ಹೆಚ್ಚು ಸಿಬ್ಬಂದಿಗಳ ನೇಮಕ ಮಾಡುವಂತೆ ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.

ಹವಾ ನಿಯಂತ್ರಿತ ಕೊಠಡಿಗಳು: ಆಸ್ಪತ್ರೆಯಲ್ಲಿ 10 ಎಚ್‌ಡಿಯು(ಐಸಿಯು) ಕೊಠಡಿ, ನಾಲ್ಕು ಶಸ್ತ್ರಚಿಕಿತ್ಸೆ ಕೊಠಡಿ, ಒಂದು ಹಾಸಿಗೆ ಇರುವ 8 ಕೊಠಡಿಗಳು, ಎರಡು ಹಾಸಿಗೆಯ ಇರುವ ಎಂಟು ಕೊಠಡಿ, ಹೆರಿಗೆ ತರ ಬೇತಿ ಕೊಠಡಿ, ಆಶಾ ಕಾರ್ಯಕರ್ತೆಯರಿಗೆ, ವೈದ್ಯರು, ಸಿಬ್ಬಂದಿಗೆ ವಿಶ್ರಾಂತಿ ಕೊಠಡಿ ಸೇರಿದಂತೆ ವಿಶಾಲವಾದ ಆಜಾರ ನಿರ್ಮಾಣ ಮಾಡಲಾಗಿದೆ. 122 ಹಾಸಿಗೆ ಸೌಲಭ್ಯವಿದ್ದು, ಸಂಪೂರ್ಣ ಹವಾ ನಿಯಂತ್ರಿತ ಇರಲಿದೆ.

ಲೋಕಾರ್ಪಣೆ ಮಾಡಿ: ಸರ್ಕಾರದಿಂದ 1.64 ಕೋಟಿ ಅಂದಾಜು ವೆಚ್ಚದಲ್ಲಿ ಟೆಂಡರ್‌ ಕರೆದು ಶೇ.70ರಷ್ಟು ಹಾಸಿಗೆ ಮತ್ತು ವೈದ್ಯಕೀಯ ಯಂತ್ರೋಪಕರಣಗಳನ್ನು ಈಗಾಗಲೆ ಆಸ್ಪತ್ರೆಗೆ ಪೂರೈಕೆಯಾಗಿದೆ. ಶೇ.30ರಷ್ಟು ಮಾತ್ರ ಯಂತ್ರೋಪಕರಣ ಬರುವುದು ಬಾಕಿ ಇದೆ. ಸರ್ಕಾರ ಶೀಘ್ರವಾಗಿ ಆಸ್ಪತ್ರೆಗೆ ಬೇಕಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಿ, ಲೋಕಾರ್ಪಣೆ ಮಾಡಿ ಜನರಿಗೆ ಅದರ ಸೌಲಭ್ಯ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ ಆಗಿದೆ.

Advertisement

ಅಧಿಕಾರಿಗಳಿಗೆ ಆಸ್ಪತ್ರೆ ನಿರ್ವಹಣೆ ಚಿಂತೆ: ಹೈಟೆಕ್‌ ಆಗಿ ನಿರ್ಮಾಣವಾಗಿರುವ ತಾಯಿ-ಮಗು ಆಸ್ಪತ್ರೆ ನಿರ್ವಹಣೆಯಲ್ಲೂ ಅಷ್ಟೇ ದುಬಾರಿಯಾಗಲಿದೆ ಅಧಿಕಾರಿಗಳಿಗೆ ನಿರ್ವಹಣೆ ಚಿಂತೆ ಎದುರಾಗಿದೆ. ಸಂಪೂರ್ಣವಾಗಿ ಹವಾ ನಿಯಂತ್ರಿತ ಸೌಲಭ್ಯ ಹೊಂದಿರುವ ತಾಯಿ-ಮಗು ಹೈಟೆಕ್‌ ಆಸ್ಪತ್ರೆ ನೆಲ ಮಹಡಿ ಸೇರಿದಂತೆ ಮೂರು ಅಂತಸ್ತು ನಿರ್ಮಾಣ ಗೊಂಡಿದ್ದು, ರೋಗಿಗಳು ಅನುಕೂಲಕ್ಕೆ ಅಳವಡಿಸಿರುವ ಎರಡು ಲಿಫ್ಟ್ ಸೇರಿದಂತೆ ಯಂತ್ರೋಪಕರಣಗಳಿಗೆ ಬಳಸುವ ವಿದ್ಯುತ್‌ ಶುಲ್ಕ ಹೊರೆಯಾಗಲಿದೆ. ಸುಸರ್ಜಿತವಾಗಿ ನಿರ್ಮಾಣವಾಗಿರುವ ಆಸ್ಪತ್ರೆಯನ್ನು ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಣೆ ಮಾಡಿ ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುವರೇ ಎಂದು ಕಾದು ನೋಡಬೇಕಿದೆ.

ಗರ್ಭಿಣಿಯರಿಗೆ ಉಚಿತ ಸ್ಕ್ಯಾನಿಂಗ್‌ ಸೇವೆ : ಪ್ರಸ್ತುತ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿರುವ ಹೆರಿಗೆ ಆಸ್ಪತ್ರೆಯಲ್ಲಿ ಸುಮಾರು 30 ಹಾಸಿಗೆ ಸೌಲಭ್ಯವಿದ್ದು, ಒಬ್ಬರು ಅನಸ್ತೇಶಿಯ, ಇಬ್ಬರೂ ಪ್ರಸೂತಿ ತಜ್ಞರು ಹಾಗೂ ಸಿಬ್ಬಂದಿಗಳಿದ್ದಾರೆ. ತಿಂಗಳು 140 ರಿಂದ 160 ಗರ್ಭಿಣಿಯರು ಹೆರಿಗೆಗೆ ದಾಖಲಾಗುತ್ತಿರೆ. ಮಗುವಿನ ಬೆಳೆವಣಿಗೆ ಮೇಲೆ ನಿಗಾ ವಹಿಸಲು ಗರ್ಭಿಣಿಯರಿಗೆ ಆರಂಭದಿಂದ ಪ್ರಸವದವರಿಗೂ ಪ್ರತಿ ಎರಡು ತಿಂಗಳಿಗೊಮ್ಮೆ ನಡೆಸುವ ಸ್ಕ್ಯಾನಿಂಗ್‌ ಸೌಲಭ್ಯ ಪ್ರಸ್ತುತ ಹೆರಿಗೆ ಆಸ್ಪತ್ರೆಯಲ್ಲಿ ಲಭ್ಯವಿಲ್ಲ. ಆದರೆ, ನೂತನವಾಗಿ ತಲೆಯೆತ್ತಿರುವ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಉಚಿತ ಸ್ಕ್ಯಾನಿಂಗ್‌ ಸೌಲಭ್ಯ ಸಿಗಲಿದೆ. ಹೈಟೆಕ್‌ ಆಸ್ಪತ್ರೆ ಸೇವೆ ಆರಂಭಗೊಂಡರೆ ತಾಲೂಕಿನ ಜನರಷ್ಟೇ ಅಲ್ಲ, ಜಿಲ್ಲೆ ಮತ್ತು ನೆರೆ ಜಿಲ್ಲೆಯ ಜನರು ಇದರ ಸೌಲಭ್ಯ ಪಡೆಯಲು ಬರುವ ನಿರೀಕ್ಷೆ ಇದೆ ಎಂಬುದು ಆರೋಗ್ಯ ಇಲಾಖೆ ಅಧಿಕಾರಿಗಳ ಅಭಿಪ್ರಾಯ.

ಹೊಸದಾಗಿ ನಿರ್ಮಾಣವಾಗಿರುವ ತಾಯಿ-ಮಗು ಆಸ್ಪತ್ರೆಗೆ ಅಗತ್ಯವಿರುವ ವೈದ್ಯರು ಮತ್ತು ಸಿಬ್ಬಂದಿ ಹಾಗೂ ಯಂತ್ರೋಪಕರಣಗಳಿಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ಶೇ.70ರಷ್ಟು ಯಂತ್ರೋಪಕರಣ ಹಾಸಿಗೆ ಪೂರೈಕೆಯಾಗಿದೆ. ಇನ್ನು ಶೇ.30ರಷ್ಟು ಯಂತ್ರೋಪಕರಣ ಬರುವುದು ಬಾಕಿ ಇದೆ. ಗರ್ಭಿಣಿ ಬಾಣಂತಿಯರಿಗೆ ಗುಣಮಟ್ಟದ ಆರೋಗ್ಯ ಸೇವೆ ಸಿಗಲಿದೆ. – ವಾಸು, ಎಎಂಒ ಸಾರ್ವಜನಿಕ ಆಸ್ಪತ್ರೆ

 

– ಬಾಣಗಹಳ್ಳಿ ಬಿ.ಟಿ.ಉಮೇಶ್‌

Advertisement

Udayavani is now on Telegram. Click here to join our channel and stay updated with the latest news.

Next