Advertisement

ಬದಲಾಗುವ ಆಶಾಭಾವನೆ

08:07 AM Jan 01, 2021 | Team Udayavani |

ನಮ್ಮನ್ನೆಲ್ಲಾ ಸರಿ ಮಾಡೋಕೆ ಮತ್ತೂಂದು ಕಾಯಿಲೆ ಬಾರದಿರಲಿ ನಮ್ಮನ್ನು ನಾವೇ ಸರಿಪಡಿಸಿಕೊಳ್ಳೋಣ

Advertisement

ನಮಸ್ತೆ; ನೆಗಡಿ, ಕೆಮ್ಮಿನ ಹೊಡೆತಕ್ಕೆ ಸಕಲ ಮಾನವ ಕೋಟಿ 2020ರಲ್ಲಿ ಮಾತಾಡಿದ್ದೆಲ್ಲ, ಹಿಂದಿನ ಜೀವನದ ಬಗ್ಗೆ… ದುಡ್ಡಲ್ಲಿ ಏನಿಲ್ಲ, ಸಂಬಂಧಗಳು ಮುಖ್ಯ ಎಂದು ಲಾಕ್‌ಡೌನ್‌ ಅವಧಿಯಲ್ಲಿ ವೇದಾಂತಿಗಳಾದೆವು. ಆನೆ, ನರಿ, ಹುಲಿ, ಹಂದಿಗಳೆಲ್ಲ ಕಾಡಿನಿಂದ ನಾಡಿಗೆ ಬಂದ ಹಳೆ ವೀಡಿಯೋಗಳನ್ನೆಲ್ಲ ನೋಡಿ ಪ್ರಕೃತಿ ಶಾಸ್ತ್ರಜ್ಞರಂತೆ, ಭೂಮಿ ಹೀಗಿರಬೇಕು ಎಂದು ಸಂಭ್ರಮಿಸಿದೆವು. ಮೊಬೈಲ್‌, ಟಿವಿ ಇತ್ಯಾದಿ ನೋಡಲೇಬಾರದೆಂದು ಮಕ್ಕಳನ್ನು ಹಳಿಯುತ್ತಿದ್ದ ನಾವೆಲ್ಲ, ಅವುಗಳನ್ನೇ ಮಕ್ಕಳ ಕೈಗೆ ಕೊಟ್ಟು ವಿದ್ಯಾಭ್ಯಾಸದ ಮಹತ್ವ ಅರಿತವರಂತೆ, ಮೊಬೈಲ್‌ ಮಾಧ್ಯಮಗಳಿಂದ ಒಂದಾದರೂ ಒಳ್ಳೆಯ ಕೆಲಸವಾಯಿತೆಂಬಂತೆ, ಇಲ್ಲದ ಸಿದ್ಧಾಂತಗಳನ್ನೆಲ್ಲ ಹೇಳಿಕೊಂಡು ಮಕ್ಕಳ ಪಕ್ಕ ವಿದ್ಯಾರ್ಥಿಗಳಂತೆಯೇ ಕುಳಿತೆವು. ದುಡಿಮೆಯಿಲ್ಲದೆ ಕೊರಗಿದೆವು. ಕೆಲವು ದೇಶಗಳನ್ನು ಹಳಿದೆವು. ವರ್ಷಪೂರ್ತಿ ಅನ್ಯಾಯವಾಗಿ ವ್ಯರ್ಥ ರೀತಿಯಲ್ಲಿ ಕಳೆಯಿತೆಂದು ನಾವು ಪ್ಲ್ರಾನ್‌ ಮಾಡಿದ, ಹಲವು ಸಾಹಸಗಳು, ಬಿಝಿನೆಸ್‌ಗಳೆಲ್ಲ ತುಂಬ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿ ನಾವು ಲೋಕಮಾನ್ಯರಾಗಿಬಿಡುವ ಸಾಧ್ಯತೆಯಿಂದ ವಂಚಿತರಾದೆವೆಂದು ನಮ್ಮ ಅಸಹಾಯಕತೆಯ ಪರ್ವಗಳಿಗೆ ಕೊರೊನಾ ಕಾರಣವೆಂದು ಜಾರಿಕೊಂಡೆವು.

ಹೀಗೆ ಇನ್ನೂ ಏನೇನೋ ಜೀವನ ದರ್ಶನವಾಯಿತು ನಮಗೆಲ್ಲ. ಆದರೆ ಕೊರೊನಾ ಚೂರು ಹಿಂದಡಿ ಇಡು ತ್ತಿದ್ದಂತೆಯೇ, ಮೇಲ್ಕಂಡ ಜೀವನ ದರ್ಶನವೆಲ್ಲ ಏಕಾಏಕಿ ನಮ್ಮ ಮನಃಪಟಲದಿಂದ ಮಾಯವಾದಂತೆ ಇಡೀ ಭೂಲೋಕವನ್ನು ಮರಳಿ ಮೊದಲಿನಂತೆ, ಗಜಿಬಿಜಿಗೆ ಇಳಿಸತೊಡಗಿದ್ದನ್ನು ನೋಡಿದರೆ, ನಾವ್ಯಾರೂ ಯಾವತ್ತೂ ಬದಲಾಗದ ಅಸಾಧ್ಯ ಜೀವ ಜಂತುಗಳೆಂಬುದು ಖಾತ್ರಿಯಾ ದಂತಿದೆ. ರಸ್ತೆ ತುಂಬ ವಾಹನಗಳು ಮತ್ತೆ ಬಂದಿವೆ. ಬಜಾರುಗಳಲ್ಲಿ ಸಂದಣಿ ದುಪ್ಪಟ್ಟಾಗಿದೆ. ವರ್ಷಪೂರ್ತಿ ಕಳೆದುಕೊಂಡ ದುಡಿಮೆಯನ್ನು ಎರಡು ತಿಂಗಳುಗಳಲ್ಲಿ ದುಡಿಯುವ ಮೋಹ ಉಕ್ಕಿದೆ ಸಂಬಂಧಗಳು ಮತ್ತೂಮ್ಮೆ ವಿಳಾಸ ಇರದ ಕಾಗದದಂತಾಗಿದೆ.

ಸುಟ್ಟು ಹೋದ ವ್ಯಾಪಾರಗಳೆಲ್ಲ ಬೂದಿಗುಡ್ಡೆಯಲ್ಲಿ ಉಳಿದ ಕೆಂಡದ ಚೂರಿಗೆ ಗಾಳಿ ಹಾಕುವಂತೆ ಊದಿ ಊಫ್ ಎಂದು ಬೆಂಕಿ ಎಬ್ಬಿಸುವ ಧಾವಂತ ಶುರುವಾಗಿದೆ. ಎಲೆಕ್ಷನ್‌ ದೂರವಿರುವುದರಿಂದ ಸರಕಾರಕ್ಕೆ ಒಳ್ಳೆಯ ನಿದ್ದೆ. ಬೀದಿಯಲ್ಲಿ ಒಂಥರದ ಅರಾಜಕತೆಯ ವಾತಾವರಣವಿದ್ದರೆ, ಮನೆಯೊಳಗೆ ಮತ್ತೂಂದು ಥರದ ಅರಾಜಕತೆ.

ಎಲ್ಲವೂ ಎರಡು ದಿನಗಳ ಒಳಗೆ ಸರಿ ಮಾಡಬಹುದೆಂಬ ಆತ್ಮವಿಶ್ವಾಸ ಮೂರನೇ ದಿನಕ್ಕೆ ಮಾಯವಾಗುವ ಸಂದರ್ಭದಲ್ಲಿ, “ನಾ ಇದ್ದೇನೆ ಎಲ್ಲ ಸರಿ ಹೋಗುತ್ತದೆ’ ಎಂದು ನಾವೇ ಮಾಡಿಕೊಂಡ ಕ್ಯಾಲೆಂಡರ್‌ 2021 ಎಂಬ ಹಣೆಪಟ್ಟಿಯ ಜತೆ ನಗುತ್ತ ಬಂದಿದೆ. ಕ್ಯಾಲೆಂಡರ್‌ಗೆ ಹೃತ್ಪುರ್ವಕ ಸ್ವಾಗತ…

Advertisement

“ಯಾವುದೂ ಸರಿಯಿಲ್ಲ’ ಎಂಬ ನೆಗೆಟಿವ್‌ ಚಿಂತನೆಯಿಂದ “ಎಲ್ಲ ಸರಿ ಹೋಗ್ತದೆ’ ಎಂಬ ಪಾಸಿಟಿವ್‌ ಚಿಂತನೆಗೆ ಕಾಲವೇ ಹೋಗುತ್ತಿರುವಾಗ ನೆಗೆದು ಬಿಡೋಣ…

ನಮ್ಮನ್ನು ನಾವು ತಿದ್ದಿಕೊಳ್ಳಲು ಸಿಕ್ಕಂಥ ಆರೆಂಟು ತಿಂಗಳ ರಜೆಯ ಅನಂತರ ನಿಜಕ್ಕೂ ತಿದ್ದಿಕೊಂಡೆವಾ ಇಲ್ಲವಾ ಎಂದು ಮೊದಲು ನಮಗೇ ಗೊತ್ತಾಗಬೇಕು. ನಮಗೆ ನಮ್ಮ ತಪುು³ಗಳು ಗೊತ್ತಾಗದೇ ಹೋದರೆ, ತಿದ್ದಲು ಮತ್ತೆ ಯಾವುದೋ ಕಾಯಿಲೆ ಬರಬಹುದು. ಇನ್ಯಾವುದೋ ವಿಚಿತ್ರ ಘಟಿಸಬಹುದು. ಹೊಸ ವೈರಸ್‌ನಂತೆ ಹೊಸ ಪ್ರಾಣಿ ಹುಟ್ಟಬಹುದು. ತೀವ್ರ ಮಟ್ಟದ ಬದಲಾವಣೆ ಅಲ್ಲದಿದ್ದರೂ ಚಿಕ್ಕ ಮಟ್ಟದ ಬದಲಾವಣೆ ಈ ಬಾಳಿಗೆ ಬೇಕಿತ್ತು. ಬದಲಾಗುತ್ತೇವೋ, ಬಿಡುತ್ತೇವೋ ಬದಲಾಗುವ ಆಶಾಭಾವನೆಯೊಂದಿಗೆ 2021ಕ್ಕೆ ಕಾಲಿಟ್ಟು ನಕ್ಕು ಬಿಡೋಣ. ಬಾಕಿ ಪ್ರಕೃತಿಗೆ ಬಿಟ್ಟದ್ದು. ನಮ್ಮ ನಮ್ಮ ಬದಲಾವಣೆಗೆ ಬಿಟ್ಟದ್ದು. ಜೈ ಮನುಕುಲ.

 ಯೋಗರಾಜ್‌ ಭಟ್‌, ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next