Advertisement

ಸದನದ ಗೌರವಕ್ಕೆ ಚ್ಯುತಿ ಸಲ್ಲದು

02:42 PM Jul 20, 2023 | Team Udayavani |

ಕರ್ನಾಟಕದ ವಿಧಾನಮಂಡಲ ದೇಶದಲ್ಲಿಯೇ ಅತ್ಯಂತ ವಿಭಿನ್ನ ಹಾಗೂ ವಿಶಿಷ್ಠವಾಗಿ ಗುರುತಿಸಿಕೊಂಡು ಅಗ್ರಸ್ಥಾನದಲ್ಲಿದೆ. ಕಲಾಪದ ವೈಖರಿ, ಚರ್ಚೆಗಳ ಗುಣಮಟ್ಟ, ಶಾಸಕರ ನಡವಳಿಕೆ ಸೇರಿದಂತೆ ಹಲವು ವಿಷಯಗಳಲ್ಲಿ ಸಂಸದೀಯ ವ್ಯವಸ್ಥೆಗೆ ಮಾದರಿಯಾಗಿದೆ. ಜತೆಗೆ ಹತ್ತಾರು ಸಂಸದೀಯಪಟುಗಳನ್ನು ದೇಶದ ರಾಜಕಾರಣಕ್ಕೆ ಕೊಡುಗೆಯಾಗಿ ನೀಡಿದ ಹಿರಿಮೆ ಹಾಗೂ ಇತಿಹಾಸ ಈ ರಾಜ್ಯಕ್ಕಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ರಾಜ್ಯದ ವಿಧಾನಮಂಡಲ ತನ್ನ ಗತವೈಭವವನ್ನು ಕಳೆದುಕೊಳ್ಳುತ್ತಿದೆ ಎಂದು ಸದನದಲ್ಲಿಯೇ ಹಲವು ಹಿರಿಯರು ಆತಂಕ ವ್ಯಕ್ತಪಡಿಸಿದ್ದು ಉಂಟು.

Advertisement

ಶಾಸಕರ ಹಾಜರಿ ಕೊರತೆ, ಪ್ರಶ್ನೋತ್ತರ ಕಲಾಪದಲ್ಲಿ ಸಚಿವರ ಗೈರು, ತಾಸುಗಟ್ಟಲೆ ನಿಂತು ಭಾಷಣ ಮಾಡುವ ಉತ್ತಮ ವಾಗ್ಮಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದು, ಗಂಭೀರ ಸ್ವರೂಪ ಚರ್ಚೆಯೇ ಇಲ್ಲದೇ ಕೆಲವೊಮ್ಮೆ ಹಣಕಾಸು ಮಸೂದೆಯೂ ಸೇರಿದಂತೆ ಮಹತ್ವದ ಮಸೂದೆಗಳಿಗೆ ಅನುಮೋದನೆ ಪಡೆಯುತ್ತಿರುವ ವೈಖರಿ ಯಿಂದ “ಮಾತಿನ ಮನೆ’ ಯಲ್ಲಿ ಮಾತಿನ ಸದ್ದು ಕಡಿಮೆಯಾಗಿ ಗದ್ದಲ- ಕೋಲಾಹಲ, ಧರಣಿ, ಸಭಾತ್ಯಾಗಗಳೇ ಹೆಚ್ಚಾಗುತ್ತಿವೆ. ಹೀಗಾಗಿ ಕಲಾಪದ ಗುಣಮಟ್ಟ ಕಡಿಮೆಯಾಗುತ್ತಿದೆ ಎಂಬ ಆತಂಕವಿರುವಾಗಲೇ ವಿಧಾನ ಸಭೆ ಯಲ್ಲಿ ಬುಧವಾರ ನಡೆದ ರಾಜಾತಿಥ್ಯದ ಹೈಡ್ರಾಮ ಸಂಸದೀಯ ವ್ಯವಸ್ಥೆಗೆ ಕಪ್ಪುಚುಕ್ಕೆ ಇದ್ದಂತೆ. ಇದು ಆಡಳಿತ ಪಕ್ಷವೇ ಇರಲಿ, ವಿಪಕ್ಷವೇ ಇರಲಿ ಯಾರಿಗೂ ಘನತೆ-ಗೌರವ ತರುವಂತಹದ್ದಲ್ಲ. ನಿಜಕ್ಕೂ ಖಂಡ ನೀಯ. ಹೊಸದಾಗಿ ಆಯ್ಕೆಯಾಗಿ ಬಂದ ಜನಪ್ರತಿನಿಧಿಗಳ ನಡವಳಿಕೆ ಸದನದೊಳಗೆ ಹೇಗಿರಬೇಕು ಎಂಬುದರ ಬಗ್ಗೆ ಸ್ಪೀಕರ್‌ ಯು.ಟಿ.ಖಾದರ್‌ ಬೆಂಗಳೂರು ಹೊರವಲಯದ “ಕ್ಷೇಮವನ’ ದಲ್ಲಿ 3 ದಿನಗಳ ಪಾಠ ಮಾಡಿಸಿದ್ದರು. ಅದು ಈಗ ವ್ಯರ್ಥವಾದಂತೆ ಭಾಸವಾಗುತ್ತಿದೆ.

ಸದನದಲ್ಲಿ ಯಾವುದೇ ವಿಷಯದ ಬಗ್ಗೆಯಾದರೂ ಪ್ರಸ್ತಾವಿಸಲು ಸದಸ್ಯರಿಗೆ ನಿಯಮಾವಳಿಗಳಡಿಯಲ್ಲಿ ಅವಕಾಶವಿದೆ. ಆ ಪ್ರಕಾರವೇ ಸದನ ನಡೆಯಬೇಕು, ಸದಸ್ಯರು ಸಹ ಆ ಪ್ರಕಾರವೇ ವರ್ತಿಸಬೇಕು, ಸುಗಮ ಕಲಾಪಕ್ಕೆ ಸಹಕರಿಸಬೇಕು. ಇದರಲ್ಲಿ ಆಡಳಿತ-ವಿಪಕ್ಷ ಅಥವಾ ಹಿರಿಯರು-ಕಿರಿಯರು ಎಂಬ ತಾರತಮ್ಯವಿಲ್ಲ.

ಬೆಂಗಳೂರಿನಲ್ಲಿ ನಡೆದ ವಿಪಕ್ಷ ನಾಯಕರ ಸಭೆಗೆ ಆಗಮಿಸಿದ್ದ ಗಣ್ಯರ ಸ್ವಾಗತಕ್ಕೆ ಹಿರಿಯ ಅಧಿಕಾರಿಗಳನ್ನು ನಿಯೋಜಿಸಿದ್ದು ಬಿಜೆಪಿ- ಜೆಡಿಎಸ್‌ ಆಕ್ರೋಶಕ್ಕೆ ಕಾರಣ. ಇಲ್ಲಿ ಶಿಷ್ಟಾಚಾರ ಉಲ್ಲಂ ಸಲಾಗಿದೆ ಎಂಬುದೇ ಪ್ರಮುಖ ಆರೋಪ. ಈ ವಿಷಯವನ್ನು ಸದನದಲ್ಲಿ ಪ್ರಸ್ತಾವಿಸಿದ ಬಿಜೆಪಿ ಸದಸ್ಯರು ತನ್ನ ಆಕ್ರೋಶ ವ್ಯಕ್ತಪಡಿಸುವ ಭರದಲ್ಲಿ ತಮ್ಮ ಆಸನಗಳ ಮುಂದಿಟ್ಟಿದ್ದ ವಿವಿಧ ಮಸೂದೆಗಳ ಪ್ರತಿಗಳನ್ನು ಹರಿದು ಸ್ಪೀಕರ್‌ ಪೀಠದಲ್ಲಿ ಆಸೀನರಾಗಿದ್ದ ಉಪಸಭಾಪತಿ ರುದ್ರಪ್ಪ ಲಮಾಣಿಯವರತ್ತ ತೂರಿದರು. ಈ ನಡೆ ಖಂಡನೀಯ.

ಪ್ರತಿಭಟನೆ, ಧರಣಿಗೂ ಇತಿಮಿತಿಗಳಿವೆ. ಪೀಠಕ್ಕೆ ಅಗೌರವ ತೋರಲಾಗಿದೆ ಎಂದು ಸ್ಪೀಕರ್‌ ಅವರು ಬಿಜೆಪಿಯ 10 ಮಂದಿ ಶಾಸಕರನ್ನು ಪ್ರಸಕ್ತ ಅಧಿವೇಶನ ಮುಗಿ ಯುವ ತನಕ ಅಮಾನತುಗೊಳಿಸುವಂತಹ ನಿರ್ಣಯ ಕೈಗೊಂಡರು. ಅಂತಿಮವಾಗಿ ಮಾರ್ಷಲ್‌ಗ‌ಳಿಂದ ಬಲವಂತವಾಗಿ ಅಮಾನತುಗೊಂಡ ಶಾಸಕರನ್ನು ಸದನದಿಂದ ಹೊರ ಹಾಕಿಸಿದರು. ಇದು ವಿಪಕ್ಷ ಸದಸ್ಯರನ್ನು ಮತ್ತಷ್ಟು ಕೆರಳಿಸಿತು. ಇವೆಲ್ಲದರ ನಡುವೆ ಸಭಾಧ್ಯಕ್ಷರ ವಿರುದ್ಧವೇ ಪ್ರತಿ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡನೆ ಮಾಡಿದರು. ಇಂದಿನ ಬೆಳವಣಿಗೆ ನಿಜಕ್ಕೂ ಯಾರೂ ಒಪ್ಪುವಂತಹದ್ದಲ್ಲ. ಆಡಳಿತ-ವಿಪಕ್ಷದ ನಡುವಿನ ಮನಃಸ್ತಾಪ ಜಿದ್ದಾಜಿದ್ದಿ ಹಂತಕ್ಕೆ ಹೋದರೆ ಅದು ಪ್ರಜಾಪ್ರಭುತ್ವದ ಲಕ್ಷಣ ವಲ್ಲ. ಏನೇ ವಿಷಯಗಳಿದ್ದರೂ ಮಾತುಕತೆಯ ಮೂಲಕವೇ ಸದನದಲ್ಲಿ ಬಗೆಹರಿಸಿಕೊಳ್ಳಲು ಅವಕಾಶವಿದೆ. ಆ ನಿಟ್ಟಿನಲ್ಲಿ ಆಡಳಿತ-ವಿಪಕ್ಷಗಳು ಆಲೋಚಿಸುವುದು ಸೂಕ್ತ.

Advertisement
Advertisement

Udayavani is now on Telegram. Click here to join our channel and stay updated with the latest news.

Next