ಮೈಸೂರು: ದುಷ್ಟರನ್ನು ಶಿಕ್ಷಿಸಿ-ಶಿಷ್ಟರನ್ನು ರಕ್ಷಿಸಲು ಜನಿಸಿದ ಕೃಷ್ಣ, ವಿಶ್ವ ಚೇತನನಾಗಿದ್ದಾನೆ ಎಂದು ಸಾಹಿತಿ ಪ್ರೊ.ಸಿ.ನಾಗಣ್ಣ ಹೇಳಿದರು. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಶ್ರೀ ಕೃಷ್ಣ ಜಯಂತ್ಯುತ್ಸವ ಸಮಿತಿ ಹಾಗೂ ಯಾದವ ಸಂಘದ ವತಿಯಿಂದ ಸೋಮವಾರ ಕಲಾಮಂದಿರದಲ್ಲಿ ಏರ್ಪಡಿಸಲಾಗಿದ್ದ ಶ್ರೀ ಕೃಷ್ಣಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಕೃಷ್ಣನ ಜನನವಾಗಿ ಅನೇಕ ಯುಗಗಳೇ ಕಳೆದಿದ್ದರು, ಹರಿದಾಸರು ತಮ್ಮ ಕೀರ್ತನೆಗಳ ಮೂಲಕ ಕೃಷ್ಣನ ಚರಿತ್ರೆಯನ್ನು ಜೀವಂತವಾಗಿಟ್ಟಿದ್ದಾರೆ ಎಂದರು.
ಮಹಾಭಾರತದಂತಹ ವಿಸ್ತಾರವಾದ ಮಹಾಕಾವ್ಯದಲ್ಲಿ ಕೃಷ್ಣನೇ ಸರ್ವವ್ಯಾಪಿಯಾಗಿದ್ದು, ಮಾತಿನ ಪ್ರಭುವಾಗಿದ್ದ ಕೃಷ್ಣ ತತ್ವಶಾಸ್ತ್ರ, ಅರ್ಥಶಾಸ್ತ್ರ , ರಾಜಕಾರಣ ಇನ್ನಿತರ ವಿಚಾರಗಳ ಕುರಿತು ನಿರರ್ಗಳವಾಗಿ ಮಾತನಾಡುವ ಪ್ರಭುತ್ವ ಹೊಂದಿದವನಾಗಿದ್ದನು. ಹೀಗಾಗಿ ಅಧರ್ಮದಿಂದ ಬಂದ ಕಷ್ಟಗಳನ್ನು ಲೀಲೆಗಳ ಮೂಲಕ ಮೆಟ್ಟಿ ನಿಂತು ಧರ್ಮ ಕಾರ್ಯವನ್ನು ಮಾಡಿದ ಶ್ರೀಕೃಷ್ಣನನ್ನು ಇಂದಿನ ರಾಜಕಾರಣಿಗಳು ಮಾದರಿಯಾಗಿರಿಸಿಕೊಂಡು ಜನರ ಸಮಸ್ಯೆಗಳನ್ನು ಎದುರಿಸಿ ಉತ್ತಮ ಸಮಾಜ ನಿರ್ಮಿಸಬೇಕಿದೆ ಎಂದು ಹೇಳಿದರು.
ಗ್ರಾಮೀಣ ಭಾಗದಲ್ಲಿ ಕೃಷ್ಣ ಗಾರುಡಿ, ವಿರಾಟ ಪರ್ವದಂತಹ ಅನೇಕ ನಾಟಕಗಳನ್ನಾಡುತ್ತಾ ಕೃಷ್ಣ ಚರಿತ್ರೆ ನೆನೆಯುತ್ತಾರೆ. ಯಾಧವ ಕುಲದವರಿಗೆ ಕೃಷ್ಣ ನಿತ್ಯ ಸ್ಪೂರ್ತಿಯಾಗಿದ್ದಾನೆ. ಅದೇ ರೀತಿ ಪು.ತಿ.ನರಸಿಂಹಾಚಾರ್ ಅವರ ಗೋಕುಲ ನಿರ್ಗಮನ ನಾಟಕವು ಕೃಷ್ಣನ ಕುರಿತಾದ ಉತ್ತಮ ಪುಸ್ತಕವಾಗಿದ್ದು, ಈ ಕೃತಿಯನ್ನು ಎಲ್ಲರೂ ಓದಬೇಕಿದೆ ಎಂದರು.
ಕೃಷ್ಣನ ಜನನ, ಪೂತನಿ ಸಂಹಾರ, ತಾಯಿ ಯಶೋಧೆಗೆ ಬಾಯಿಯಲ್ಲಿ ಭೂಮಂಡಲ ದರ್ಶನ, ಕಾಳಿ ಮರ್ಧನ, ಗೋವರ್ಧನ ಗಿರಿ ಎತ್ತುವ ಸನ್ನಿವೇಶ, ಮಥುರೆಗೆ ಆಗಮನ, ಕಂಸ ವಧೆ, ಕಂಸನ ತಂದೆ ಉಗ್ರಸೇನಾನಿಗೆ ಪಟ್ಟಾಭಿಷೇಕ, ಕೃಷ್ಣ- ಸುಧಾಮರ ಸ್ನೇಹದ ಭಾಂದವ್ಯ ಹಾಗೂ ಕುರುಕ್ಷೇತ್ರದಲ್ಲಿ ಅರ್ಜುನನ್ನು ಜಯಶೀಲನನ್ನಾಗಿ ಮಾಡಿದ ಕಥೆ ಸೇರಿದಂತೆ ಕೃಷ್ಣನ ಕುರಿತಾದ ಅನೇಕ ಕಥೆಗಳ ಕುರಿತು ವಿವರಿಸಿದರು.
ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, ಧರ್ಮ-ಅಧರ್ಮಗಳ ಸಂಘರ್ಷ ನಡೆದಾಗ ಕೃಷ್ಣ ಹೆಚ್ಚು ಪ್ರಸ್ತುತನಾಗಲಿದ್ದು, ಈ ಹಿನ್ನೆಲೆ ಇಂದು ಸಮಾಜದಲ್ಲಿ ನಡೆಯುವ ಹೋರಾಟಗಳ ಸ್ಪೂರ್ತಿ ಪುರುಷನಾಗಿ ಕೃಷ್ಣ ಸರ್ವಕಾಲಕ್ಕೂ ಸ್ಮರಣೀಯನಾಗಿದ್ದಾನೆ. ಹೀಗಾಗಿ ಸರ್ವಕಾಲಕ್ಕೂ ಸ್ಪೂರ್ತಿದಾಯಕವಾದ ಶ್ರೀ ಕೃಷ್ಣನ ಬಗ್ಗೆ ಎಲ್ಲರೂ ತಿಳಿದುಕೊಳ್ಳಲಿ ಎಂಬ ಉದ್ದೇಶದಿಂದ ಸರ್ಕಾರದ ವತಿಯಿಂದಲೇ ಕೃಷ್ಣನ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದೆ ಎಂದರು.
ಮುಡಾ ಅಧ್ಯಕ್ಷ ಡಿ.ಧ್ರುವಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಉಪಮೇಯರ್ ರತ್ನ ಲಕ್ಷ್ಮಣ್, ಪಾಲಿಕೆ ಸದಸ್ಯರಾದ ಪ್ರಕಾಶ್, ಅನಂತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಚೆನ್ನಪ್ಪ, ಯಾದವ ಸಂಘದ ರಾಮಚಂದ್ರ ಇನ್ನಿತರರು ಹಾಜರಿದ್ದರು.