ಚಿಕ್ಕಮಗಳೂರು: ಪಶ್ಚಿಮ ಘಟ್ಟದ ಗುಡ್ಡ ಮತ್ತು ಬೆಟ್ಟದ ತಪ್ಪಲು ಪ್ರದೇಶ ಮನೆಗಳನ್ನು ನಿರ್ಮಿಸಿಕೊಳ್ಳಲು ಸುರಕ್ಷಿತ ಪ್ರದೇಶವಲ್ಲ ಎಂಬುದು ವಿಜ್ಞಾನಿಗಳ ತಂಡದ ಅಭಿಪ್ರಾಯವಾಗಿದೆ. ಈ ಕುರಿತು
“ಉದಯವಾಣಿ’ ಜೊತೆ ಮಾತನಾಡಿದ ಮಲೆಮನೆ ಗ್ರಾಮದ ಸತೀಶ್ ಗೌಡ, ಮುಂಬೈನಿಂದ ಆಗಮಿಸಿ ಅಧ್ಯಯನ ನಡೆಸಿದ ಭಾರತೀಯ ಸರ್ವೆಕ್ಷಣಾ ಇಲಾಖೆಯ ವಿಜ್ಞಾನಿಗಳ ತಂಡ ಈ ವಿಚಾರವನ್ನು ಗ್ರಾಮಸ್ಥರಿಗೆ ಸೂಕ್ಷ್ಮವಾಗಿ ತಿಳಿಸಿದೆ ಎಂದರು.
ಪಶ್ಚಿಮ ಘಟ್ಟ ಶ್ರೇಣಿಯ 5 ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಹಾಗೂ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ಬೆಟ್ಟ-ಗುಡ್ಡದ ತಪ್ಪಲು ಪ್ರದೇಶಗಳಲ್ಲಿ ಹೆಚ್ಚಿನ ಅಪಾಯ ಕಂಡು ಬರುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ ಎಂದರು. ಇಲ್ಲಿನ ಬೆಟ್ಟಗಳು, ಬಂಡೆ ಹಾಗೂ ಗುಡ್ಡಗಳ ಮೇಲೆ ಕುರುಚಲು ಗಿಡಗಳು (ಬಣಾರ)ಬೆಳೆದಿರುತ್ತವೆ. ಅದರಡಿ 8-10 ಅಡಿಯಷ್ಟು ಮಣ್ಣು ಶೇಖರಣೆಯಾಗಿರುತ್ತದೆ.
ಗುಡ್ಡದ ಮೇಲೆ ಬೆಳೆದ ಮರಗಳು ಅದರ ಹಿಡಿತದ ಆಧಾರದಲ್ಲೇ ನಿಂತಿರುತ್ತವೆ. ಈ ಮಣ್ಣು ಮಳೆ ನೀರಿನಲ್ಲಿ ಕೊಚ್ಚಿ ಹೋದರೆ ಜೇಡಿ ಮಣ್ಣು ಮತ್ತು ಕುಂಕುಮ ಮಣ್ಣು ಮಿಶ್ರಿತ ಕಲ್ಲಿನ ಪದರಗಳು ಸೃಷ್ಟಿಯಾಗಿರುತ್ತದೆ. ಮಳೆ ನೀರಿನಲ್ಲಿ ಅದು ಜಾರಿದರೆ ಪದರಗಳು ಸಡಿಲವಾಗಿ ಬಿಡಿಬಿಡಿಯಾಗಿ ಉರುಳಲಾರಂಭಿಸುತ್ತದೆ. ಒಟ್ಟಾರೆ ಇಲ್ಲಿನ ಬೆಟ್ಟಗಳು ಸಡಿಲವಾದ ಮಣ್ಣಿನ ಪದರಗಳಿಂದ ಕೂಡಿರುತ್ತವೆ. ಈ ಕಾರಣಕ್ಕೆ ಹೆಚ್ಚು ಮಳೆ ಸುರಿದ ಸಂದರ್ಭದಲ್ಲಿ ನೀರಿನ ಒತ್ತಡ ಹೆಚ್ಚಾಗಿ ಕುಸಿತ ಉಂಟಾಗುತ್ತದೆ ಎಂದು ವಿವರಿಸಿರುವುದಾಗಿ ಸತೀಶ್ ಗೌಡ ತಿಳಿಸಿದರು.
ಮಲೆಮನೆ ಗ್ರಾಮದಲ್ಲಿ 7 ಮನೆಗಳು ಕೊಚ್ಚಿಕೊಂಡು ಹೋಗಿ ಅನಾಹುತ ಸಂಭವಿಸಿದ ದಿನ ಮಧ್ಯಾಹ್ನ 12 ಗಂಟೆಯಿಂದ ಸಂಜೆ 5.30ರ ವರೆಗೆ 16 ಇಂಚು ಮಳೆ ಸುರಿದಿದೆ. ಇದರ ಪರಿಣಾಮ ಒಂದು ಎಕರೆ ಪ್ರದೇಶದಲ್ಲಿ ಸರಾಸರಿ ಸುಮಾರು 300 ಟನ್‌ನಷ್ಟು ನೀರು ಶೇಖರಣೆಯಾಗಿದೆ. ಭಾರೀ ಪ್ರಮಾಣದ ಈ ನೀರಿನ ಒತ್ತಡ ತಡೆದುಕೊಳ್ಳಲಾಗದೆ ಗುಡ್ಡದ ಮೇಲ್ಮೆ„ ಮಣ್ಣು ಜರುಗಿದೆ. ನಂತರ, ಕಲ್ಲಿನ ಪದರಗಳು ಜಾರಲಾರಂಭಿಸಿ ಭಾರೀ ಸದ್ದಿನೊಂದಿಗೆ ಕೊಚ್ಚಿಕೊಂಡು ಬಂದಿದೆ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಅಂದು ಮಧ್ಯಾಹ್ನ 12 ಗಂಟೆ ವೇಳೆಗೆ ಮನೆ ಹಿಂಬದಿಯ ಗುಡ್ಡದಲ್ಲಿ ಗುಡುಗಿನ ರೀತಿ ಸದ್ದುಂಟಾಗಿದೆ. ಅಲ್ಲಿ ಬಂಡೆಗಳು ಬಾಯೆ¤ರೆದ ನಂತರ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದೆ. ಅದರ ಜೊತೆಗೆ ಬಂಡೆಗಳು ಬೃಹತ್ ಮರಗಳು ಬುಡ ಸಹಿತ ಕೊಚ್ಚಿಕೊಂಡು ಬಂದು ಕೆಳಭಾಗದಲ್ಲಿದ್ದ ಮನೆಗಳ ಮೇಲೆ ಬಿದ್ದಿವೆ. ಅಷ್ಟರೊಳಗಾಗಿ ಮನೆಯಲ್ಲಿದ್ದ ಮಹಿಳೆಯರೆಲ್ಲರೂ ಅಲ್ಲಿ ಉಳಿದಿದ್ದ ಒಂಟಿ ಮನೆಗೆ ತೆರಳಿ ಎಲ್ಲರೂ ಅಟ್ಟದ ಮೇಲೆ ಕುಳಿತು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಿದರು. ಸದ್ಯಕ್ಕೆ ಗ್ರಾಮದಲ್ಲಿ ನಮ್ಮ ಮನೆ ಮಾತ್ರ ಉಳಿದಿದೆ. ಆದರೆ, ಅಲ್ಲಿ ವಾಸಿಸುವುದು ಸುರಕ್ಷಿತವಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಹಾಗಾಗಿ, ನಾವು ಅಲ್ಲಿ ವಾಸಿಸದೆ ತಮ್ಮ ಸಂಬಂಧಿಕರ ಮನೆಯಲ್ಲಿ ಉಳಿದಿರುವುದಾಗಿ ತಿಳಿಸಿದರು.