Advertisement

Anebail: ಮನೆ ಮೇಲೆ ಕುಸಿದ ಗುಡ್ಡ, ಇಬ್ಬರು ಮಕ್ಕಳ ಸಹಿತ ಮನೆಮಂದಿ ಅಪಾಯದಿಂದ ಪಾರು

11:37 AM Aug 03, 2024 | Team Udayavani |

ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾಮದ ಆನೆಬೈಲು ಸಮೀಪದ ಉಡ್ಲದಕೋಡಿ ಎಂಬಲ್ಲಿ ಗುಡ್ಡವೊಂದು ಕುಸಿದು ವಿಶ್ವನಾಥ ನಾಯ್ಕ ಅವರ ಮನೆ ಮೇಲೆ ಅಪ್ಪಳಿಸಿದ್ದು, ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಒಂದು ಓಮ್ನಿ ಕಾರು ಹಾಗೂ ಒಂದು ದ್ವಿಚಕ್ರ ವಾಹನ ಹಾಗೂ ಕಟ್ಟಿ ಹಾಕಿದ ಸಾಕು ನಾಯಿಯೊಂದು ಮಣ್ಣಿನಡಿ ಸಿಲುಕಿದೆ. ಗುಡ್ಡದ ಮಣ್ಣು ತೋಡಿಗೂ ಬಿದ್ದಿದ್ದು, ಇದರಿಂದ ಕೃಷಿ ತೋಟದಲ್ಲಿ ತೋಡಿನ ನೀರು ನದಿಯಂತೆ ಹರಿಯುತ್ತಿದೆ.

Advertisement

ಘಟನೆ ಸಂದರ್ಭ ಮನೆಯಲ್ಲಿ ವಿಶ್ವನಾಥ ನಾಯ್ಕ, ಅವರ ತಾಯಿ ಲಲಿತಾ, ಪತ್ನಿ ವಾರಿಜಾ ಹಾಗೂ ಅಂಗನವಾಡಿ ಹಾಗೂ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಅವರ ಇಬ್ಬರು ಮಕ್ಕಳು ಗಾಢ ನಿದ್ದೆಯಲ್ಲಿದ್ದರು. ಭಾರೀ ಶಬ್ದ ಕೇಳಿ ಎಚ್ಚರಗೊಂಡು ನೋಡಿದಾಗ ಮನೆಯ ಹಿಂಬದಿಯ ಗುಡ್ಡ ಕುಸಿದು ಇವರ ಮನೆಗೆ ತಾಗಿ ನಿಂತಿತ್ತು. ಇದರಿಂದ ಮನೆಯ ಒಂದು ಬದಿಯಲ್ಲಿ ಶೀಟ್‌ ಹಾಕಿ ಕಟ್ಟಲಾಗಿದ್ದ ಕೋಣೆ ನಾಶವಾಗಿದ್ದು, ಮನೆಯ ಗೋಡೆಗಳೂ ಬಿರುಕು ಬಿಟ್ಟಿವೆ. ಇದೇ ಬದಿಯಲ್ಲಿ ನಿಲ್ಲಿಸಲಾಗಿದ್ದ ಓಮ್ನಿ ಕಾರು ಹಾಗೂ ದ್ವಿಚಕ್ರ ವಾಹನಗಳುಮಣ್ಣಿನಡಿ ಸಿಲುಕಿತ್ತು. ಬಿದ್ದು ಮಣ್ಣು ಮುಂದುವರಿದು ಮನೆಯ ಕೆಳಗೆ ಹರಿಯುತ್ತಿದ್ದ ತೋಡು ಸೇರಿದ್ದರಿಂದ ಅದು ತನ್ನ ನೀರಿನ ಹರಿವಿನ ದಿಕ್ಕು ಬದಲಿಸಿದೆ. ಇದರಿಂದಾಗಿ ತೋಟದೆಲ್ಲೆಡೆ ನೀರು ಹರಿಯುತ್ತಿದೆ. ಮನೆಗೆ ಹೋಗುವ ದಾರಿಯೂ ನೀರಿನಿಂದಾವೃತವಾಗಿದೆ. ವಿದ್ಯುತ್‌ ಕಂಬಗಳು ಮಗುಚಿ ಬಿದ್ದಿವೆ.

ರಕ್ಷಣ ಕಾರ್ಯ

ಸುದ್ದಿ ತಿಳಿದು 34 ನೆಕ್ಕಿಲಾಡಿ ಗ್ರಾ.ಪಂ. ಸದಸ್ಯರಾದ ಪ್ರಶಾಂತ್‌ ಎನ್‌. ಹಾಗೂ ಹರೀಶ್‌ ಕುಲಾಲ್‌, ಸದಾನಂದ ಕಾರ್‌ ಕ್ಲಬ್‌ ರಕ್ಷಣ ಕಾರ್ಯಾಚರಣಗೆ ತೆರಳಿದ್ದುಸ್ಥಳೀಯರಾದ ಗುರುರಾಜ ಭಟ್‌,
ಧನಂಜಯ ಸೇರಿದಂತೆ ಸ್ಥಳೀಯರು ಸೇರಿದರು. ಲಲಿತಾ ಅವರನ್ನು ಎತ್ತಿಕೊಂಡು ಬಂದು ಸುರಕ್ಷಿತ ಜಾಗಕ್ಕೆ ಕಳುಹಿಸಿಕೊಡಲಾಯಿತು. ಗೃಹರಕ್ಷಕ ದಳದವರನ್ನೊಳಗೊಂಡ ಪ್ರವಾಹ ರಕ್ಷಣಾ ತಂಡದವರು ದೋಣಿಯೊಂದಿಗೆ ಸ್ಥಳಕ್ಕೆ ತೆರಳಿ, ಮನೆಯ ಸಾಮಗ್ರಿ, ಸರಂಜಾಮುಗಳನ್ನು ಹಾಗೂ ಮನೆಯಲ್ಲಿದ್ದ ಅಡಿಕೆ ಸೇರಿದಂತೆ ಇನ್ನಿತರ ವಸ್ತುಗಳನ್ನು ಸುರಕ್ಷಿತ ಜಾಗಕ್ಕೆ ತಲುಪಿಸಿದರು.

ಹಿಟಾಚಿಯಲ್ಲಿ ಮಣ್ಣು ತೆಗೆಯುವ ಕಾರ್ಯ ನಡೆಯುತ್ತಿದ್ದು, ತೋಡನ್ನು ಬಿಡಿಸಿ ಕೊಡುವ ಕೆಲಸ ನಡೆಯಿತು.

Advertisement

ಘಟನೆಯಲ್ಲಿ ಸಾಕು ನಾಯಿಯೊಂದು ಮಣ್ಣಿನ ಅಡಿಯೊಳಗೆ ಸೇರಿ ಹೋಗಿದ್ದು, ಈವರೆಗೆ ಅದರ ಪತ್ತೆಯಾಗಿಲ್ಲ.

ಉಪ್ಪಿನಂಗಡಿ ಕಂದಾಯ ಹೋಬಳಿ ಉಪತಹಶೀಲ್ದಾರ್‌ ಚೆನ್ನಪ್ಪ ಗೌಡ, ಗ್ರಾಮ ಕರಣಿಕ ಜಂಗಪ್ಪ, ಗ್ರಾಮ ಸಹಾಯಕ ದಿವಾಕರ, ನೆಕ್ಕಿಲಾಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸತೀಶ ಕೆ. ಬಂಗೇರ, ಅಧ್ಯಕ್ಷೆ ಸುಜಾತಾ ಆರ್‌. ರೈ, ಉಪಾಧ್ಯಕ್ಷ ಹರೀಶ್‌ ಡಿ., 34 ನೆಕ್ಕಿಲಾಡಿ ವಲಯ ಕಾಂಗ್ರೆಸ್‌ ಅಧ್ಯಕ್ಷೆ ಅನಿ ಮಿನೇಜಸ್‌, ಪ್ರಮುಖರಾದ ಯು.ಜಿ ರಾಧ ಭೇಟಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next