Advertisement
ಹಲವು ಗಂಟೆಗಳ ಕಾಲ ಹೆದ್ದಾರಿ ತಡೆದ ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆ ಸ್ಥಗಿತಗೊಂಡು ವಾಹನ ಸವಾರರು ಪರದಾಡಬೇಕಾಯಿತು. ಈ ವೇಳೆ, ಪ್ರತಿಭಟನಾಕಾರರನ್ನು ಬಂಧಿಸಿದ ಪೊಲೀಸರು ನಂತರ ಬಿಡುಗಡೆಗೊಳಿಸಿದರು. ಕೆಲವೆಡೆ ಪೊಲೀಸ್ ಬಲ ಪ್ರಯೋಗಿಸಿ ರೈತರ ಪ್ರತಿಭಟನೆ ಹತ್ತಿಕ್ಕುವ ಯತ್ನಕ್ಕೆ ವ್ಯಾಪಕ ವಿರೋಧ ವ್ಯಕ್ತವಾಯಿತು.
Related Articles
Advertisement
ಇನ್ನುಳಿದಂತೆ, ಚಾಮರಾಜನಗರ, ಕೋಲಾರ, ಮಂಡ್ಯ, ಮೈಸೂರಿನಲ್ಲೂ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹಾಸನ ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟ ರೈತ ಸಂಘದ ಕಾರ್ಯಕರ್ತರು ನಗರದ ಹೊರ ವಲಯದ ಬೂವನಹಳ್ಳಿ ಕ್ರಾಸ್‌ನಲ್ಲಿ ಕೆಲ ಕಾಲ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದರು. ರೈತರು ಹೆದ್ದಾರಿಯಲ್ಲಿ ಕುಳಿತು ಧರಣಿ ನಡೆಸಿದ್ದರಿಂದ ಕೆಲ ಕಾಲ ಬೆಂಗಳೂರು -ಮಂಗಳೂರು ನಡುವೆ ವಾಹನ ಸಂಚಾರದಲ್ಲಿ ವ್ಯತ್ಯಯವಾಯಿತು.
ಉತ್ತರ ಕರ್ನಾಟಕದಲ್ಲೂ ಅನ್ನದಾತರ ಆಕ್ರೋಶ: ಭೂಸ್ವಾ ಧೀನ ಕಾಯ್ದೆ ವಿರುದ್ಧ ಸಿಡಿದೆದ್ದಿರುವ ರೈತರು ಸೋಮವಾರ ಉತ್ತರ ಕರ್ನಾಟಕದ ವಿವಿಧೆಡೆ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಫಲವತ್ತಾದ ಭೂಮಿ ಬಂಡವಾಳಶಾಹಿಗಳ ಪಾಲಾಗಲು ಅವಕಾಶ ಕೊಡಬೇಡಿ ಎಂದು ಆಗ್ರಹಿಸಿದರು.
ಬಾಗಲಕೋಟೆ ಜಿಲ್ಲೆ ಮುಧೋಳ, ಜಮಖಂಡಿ, ರಬಕವಿ-ಬನಹಟ್ಟಿ, ಇಳಕಲ್, ಹೊಸಪೇಟೆಯ ಟಿ.ಬಿ. ಡ್ಯಾಂನ ರಾಷ್ಟ್ರೀಯ ಹೆದ್ದಾರಿ ಬದಿ ಯಲ್ಲಿ ಧರಣಿ ಕುಳಿತ ರೈತರು, ರೈತರ ಒಪ್ಪಿಗೆಯಿಲ್ಲದೆ ಯಾವುದೇ ಕಾರಣಕ್ಕೂ ಭೂಸ್ವಾಧೀನ ಪಡಿಸಿಕೊಳ್ಳಬಾರದು ಎಂದು ಒತ್ತಾಯಿಸಿದರು.
ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಪ್ರತಿಭಟನೆ ನಡೆದ ಅನ್ನದಾತರು ಉಳ್ಳವರ ಕೈಗೆ ಬೆಲೆಬಾಳುವ ಭೂಮಿ ಕಿತ್ತುಕೊಳ್ಳುವ ಹುನ್ನಾರ ಕೈಬಿಡಿ ಎಂದು ಪ್ರತಿಧ್ವನಿ ಮೊಳಗಿಸಿದರು. ಬೆಳಗಾವಿ ಜಿಲ್ಲೆಯ ರಾಮದುರ್ಗ, ದಾವಣಗೆರೆ, ಚಳ್ಳಕೆರೆಯಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ನೇತೃತ್ವದಲ್ಲಿ 200ಕ್ಕೂ ಹೆಚ್ಚು ರೈತರು ಚಳ್ಳಕೆರೆಯಮ್ಮ ದೇವಸ್ಥಾನದಿಂದ ಮೆರವಣಿಗೆ ನಡೆಸಿ ಧಿಕ್ಕಾರ ಕೂಗಿದರು. ರೈತರನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಯಿತು.
ಚಿತ್ರದುರ್ಗ ತಾಲೂಕಿನ ಗುಡ್ಡದರಂಗವ್ವನಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ-13ರಲ್ಲಿ ನೂರಾರು ರೈತರು ಪ್ರತಿಭಟಿಸಿ ಕೇಂದ್ರ ಸರ್ಕಾರದ 2013ರ ಭೂಸ್ವಾಧಿಧೀನ ಕಾಯ್ದೆ ತಿದ್ದುಪಡಿ ಮಸೂದೆಗೆ ತಿದ್ದುಪಡಿ ಮಾಡಲಾಗಿದೆ. ಕೂಡಲೇ ಆ ಮಸೂದೆ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ದಾವಣಗೆರೆಯಲ್ಲೂ ಮಲ್ಲಶೆಟ್ಟಿಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ-4 ತಡೆ ನಡೆಸಿದ ರೈತರನ್ನು ಬಂಧಿಸಿ ಬಿಡುಗಡೆ ಮಾಡಲಾಯಿತು. ಹಾವೇರಿ, ಕೊಪ್ಪಳ, ವಿಜಯಪುರದಲ್ಲೂ ರೈತರು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು. ಆದರೆ, ಹೈಕ ಭಾಗದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರಿನಲ್ಲಿ ಯಾವುದೇ ಪ್ರತಿಭಟನೆಯಾಗಿಲ್ಲ.