Advertisement

ಸಂಸ್ಕರಣೆ ವೆಚ್ಚ ಹೆಚ್ಚು, ಆದಾಯ ಕಮ್ಮಿ

12:43 AM Jan 02, 2020 | Lakshmi GovindaRaj |

ಬೆಂಗಳೂರು: ಪಾಲಿಕೆಯ ಏಳು ಹಸಿತ್ಯಾಜ್ಯ ಸಂಸ್ಕರಣೆ ಘಟಕಗಳಿಂದ ಬಿಬಿಎಂಪಿ ಲಕ್ಷಾಂತರ ರೂ. ಆದಾಯ ಗಳಿಸುತ್ತಿದೆ. ಆದರೆ, ಘಟಕಗಳನ್ನು ಮೇಲೆªಜೆಗೇರಿಸದೇ ಇರುವುದು ಹಾಗೂ ನಿರೀಕ್ಷಿತ ಪ್ರಮಾಣದಲ್ಲಿ ಹಸಿತ್ಯಾಜ್ಯ ಪೂರೈಕೆ ಆಗದೆ ಇರುವುದರಿಂದ ಘಟಕಗಳು ನಷ್ಟ ಅನುಭವಿಸುತ್ತಿವೆ.

Advertisement

ತಾಂತ್ರಿಕ ಸಮಸ್ಯೆ ಮತ್ತು ಸ್ಥಳೀಯರ ವಿರೋಧದಿಂದ ಲಿಂಗಧೀರನಹಳ್ಳಿ ಹಸಿತ್ಯಾಜ್ಯ ಸಂಸ್ಕರಣೆ ಘಟಕದಲ್ಲಿ ಹಲವು ತಿಂಗಳಿಂದ ತ್ಯಾಜ್ಯ ಸಂಸ್ಕರಣೆ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ. ಹಸಿತ್ಯಾಜ್ಯ ಸಂಸ್ಕರಣೆ ಘಟಕಗಳಲ್ಲಿ ಉತ್ಪತ್ತಿಯಾಗುವ ಗೊಬ್ಬರದಿಂದಲೇ ಪಾಲಿಕೆ ಇಲ್ಲಿಯವರೆಗೆ 4.37 ಕೋಟಿ ರೂ. ಆದಾಯ ಗಳಿಸಿದೆ. ಆದರೆ, ಘಟಕಗಳಿಗೆ ನಿರೀಕ್ಷಿತ ಪ್ರಮಾಣದ ತ್ಯಾಜ್ಯ ಪೂರೈಕೆ ಆಗದ ಕಾರಣ ಘಟಕಗಳು ನಷ್ಟ ಅನುಭವಿಸುತ್ತಿವೆ.

ಬಿಬಿಎಂಪಿಯ ಹಸಿತ್ಯಾಜ್ಯ ಸಂಸ್ಕರಣೆ ಘಟಕಗಳ ಒಟ್ಟಾರೆ 1,570 ಮೆಟ್ರಿಕ್‌ ಟನ್‌ ಸಾಮರ್ಥ್ಯ ಹೊಂದಿದ್ದು, ಸಂಸ್ಕರಣೆ ಆಗುತ್ತಿರುವುದು 500ರಿಂದ 600 ಮೆಟ್ರಿಕ್‌ಟನ್‌ ಹಸಿತ್ಯಾಜ್ಯ ಮಾತ್ರ. ಆದರೆ, ಯಂತ್ರಗಳ ಹಾಗೂ ಸಿಬ್ಬಂದಿ ಬಳಕೆಯಲ್ಲಿ ಯಾವುದೇ ಬದಲಾವಣೆಯಗಿಲ್ಲ. ಹೀಗಾಗಿ, ಪಾಲಿಕೆಗೆ ನಷ್ಟವಾಗುತ್ತಿದೆ.

ಆರ್‌ಡಿಎಫ್ ತ್ಯಾಜ್ಯಕ್ಕೆ ಮುಕ್ತಿ ಸಿಗುತ್ತಿಲ್ಲ: ಕನ್ನಹಳ್ಳಿ ಹಾಗೂ ಸಿಗೇಹಳ್ಳಿ ಸೇರಿದಂತೆ ಪಾಲಿಕೆಯ ವಿವಿಧ ಘಟಕಗಳಲ್ಲಿ ಹಸಿತ್ಯಾಜ್ಯ ಸಂಸ್ಕರಣೆಯ ನಂತರ ಉಳಿಯುವ ಅನುಪಯುಕ್ತ ತ್ಯಾಜ್ಯ (ಆರ್‌ಡಿಎಫ್) ವಿಲೇವಾರಿಗೆ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳುವಲ್ಲಿ ಪಾಲಿಕೆ ವಿಫ‌ಲವಾಗಿದೆ. ಈ ಎರಡೂ ಘಟಕಗಳಲ್ಲಿ ಟನ್‌ಗಟ್ಟಲೆ ಆರ್‌ಡಿಎಫ್ ವಿಲೇವಾರಿಯಾಗದೆ ಉಳಿದಿದ್ದು, ವೇಸ್ಟ್‌ ಟು ಎನರ್ಜಿ ಘಟಕ ಸ್ಥಾಪನೆ ಪ್ರಕ್ರಿಯೆಯೂ ಚುರುಕು ಪಡೆದುಕೊಂಡಿಲ್ಲ.

ಪರಿಣಿತ ತಂಡದ ಕೊರತೆ: ಪಾಲಿಕೆಯ ಸಂಸ್ಕರಣಾ ಘಟಕದಲ್ಲಿ ಉತ್ಪತ್ತಿಯಾಗುವ ಗೊಬ್ಬರದ ಗುಣಮಟ್ಟವನ್ನು ಪರಿಶೀಲನೆ ಮಾಡಲು ಬಿಬಿಎಂಪಿ ಯಾವುದೇ ಪರಿಣಿತರ ತಂಡವನ್ನು ನೇಮಿಸಿಲ್ಲ. ಹಸಿತ್ಯಾಜ್ಯದ ಮೂಲಕ ಉತ್ಪತ್ತಿಯಾಗುವ ಗೊಬ್ಬರವನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಅವಕಾಶವೂ ಪಾಲಿಕೆಗೆ ಇಲ್ಲ.

Advertisement

ಏಳು ಘಟಕಗಳಲ್ಲಿ ಉತ್ಪತ್ತಿಯಾಗುವ ಗೊಬ್ಬರವನ್ನು ಕರ್ನಾಟಕ ಸಾವಯವ ಗೊಬ್ಬರ ಅಭಿವೃದ್ಧಿ ನಿಗಮದ (ಕೆಸಿಡಿಸಿ) ಮೂಲಕವೇ ಕೃಷಿ ಇಲಾಖೆಗೆ ಮಾರಾಟ ಮಾಡಬೇಕು ಎಂದು ಸರ್ಕಾರ ನಿಯಮ ರೂಪಿಸಿದೆ.  ಹೀಗಾಗಿ ಘಟಕದಲ್ಲಿ ಅತ್ಯುತ್ತಮ ಗುಣಮಟ್ಟದ ಗೊಬ್ಬರ ಉತ್ಪತ್ತಿಯಾಗುತ್ತಿದ್ದರೂ, ಅದನ್ನು ಬ್ರಾಂಡ್‌ ಮಾಡಿ ಪ್ರಚಾರ ಮಾಡುವ ಹಾಗೂ ಕೃಷಿಕರಿಗೆ ಗೊಬ್ಬರದ ಬಗ್ಗೆ ಪ್ರಚಾರ ಮಾಡುವುದರಲ್ಲಿ ಪಾಲಿಕೆ ಹಿಂದುಳಿದಿದೆ. ಹೀಗಾಗಿ ಗೊಬ್ಬರ ಘಟಕಗಳಲ್ಲೇ ಉಳಿದಿದೆ.

ಲಿಂಗಧೀರನಹಳ್ಳಿ ಘಟಕ ಸ್ಥಗಿತ: ಲಿಂಗಧೀರನ ಹಳ್ಳಿಯ ಹಸಿತ್ಯಾಜ್ಯ ಸಂಸ್ಕರಣೆ ಘಟಕದ ನಿರ್ವಹಣೆಗೆ ಪೂರ್ವಾನುಮತಿ ಪಡೆದುಕೊಂಡಿಲ್ಲ ಎಂದು ಹಸಿರು ನ್ಯಾಯಾಧಿಕರಣ ತಡೆಯಾಜ್ಞೆ ನೀಡಿದೆ. ಘಟಕದ ನಿರ್ವಹಣೆಯ ಬಗ್ಗೆಯೂ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಎನ್‌ಜಿಟಿಯು ಘಟಕದ ಪರಿಶೀಲನೆಗೆ ಸಮಿತಿ ನೇಮಕ ಮಾಡಿತ್ತು. ಈ ಸಮಿತಿ ಪರಿಶೀಲನೆ ನಡೆಸಿ ಎನ್‌ಜಿಟಿಗೆ ವರದಿ ನೀಡಿದೆ. ಹೀಗಾಗಿ, ಲಿಂಗಧೀರನಹಳ್ಳಿಯಲ್ಲಿ ಈಗಾಗಲೇ ಇರುವ ಹಸಿತ್ಯಾಜ್ಯವನ್ನು ಮಾತ್ರ ಸಂಸ್ಕರಣೆ ಮಾಡಲಾಗುತ್ತಿದೆ.

ತ್ಯಾಜ್ಯ ಸಂಸ್ಕರಣೆ ಘಟಕಗಳ ವಿವರ
ಘಟಕ ಸಾರ್ಮಥ್ಯ ಸಂಸ್ಕರಣೆ ಪ್ರಮಾಣ (ಮೆ.ಟನ್‌)
ಚಿಕ್ಕನಾಗಮಂಗಲ 350 140
ದೊಡ್ಡಬಿದರಕಲ್ಲು 150 50
ಕನ್ನಹಳ್ಳಿ 350 135
ಕೆಸಿಡಿಸಿ ಘಟಕ 350 80
ಲಿಂಗಧೀರನ ಹಳ್ಳಿ 150 0
ಸಿಗೇಹಳ್ಳಿ 120 70
ಸುಬ್ಬರಾಯನಪಾಳ್ಯ 150 95
ಒಟ್ಟು 1,570 570

ಲಿಂಗಧೀರನಹಳ್ಳಿ ಹಸಿತ್ಯಾಜ್ಯ ಸಂಸ್ಕರಣೆ ಘಟಕದಲ್ಲಿ ತ್ಯಾಜ್ಯ ಸಂಸ್ಕರಣೆ ಮಾಡಲು ಷರತ್ತುಬದ್ಧ ಅನುಮತಿ ನೀಡುವಂತೆ ಕೋರ್ಟ್‌ನಿಂದ ಅನುಮತಿ ಕೇಳಲಾಗುವುದು. ಹಸಿತ್ಯಾಜ್ಯ ಸಂಸ್ಕರಣೆ ಘಟಕಗಳಿಂದ ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಆಗದಂತೆ ನಿರ್ವಹಣೆ ಮಾಡಲಾಗುತ್ತಿದೆ.
-ರಂದೀಪ್‌, ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ)

ಪಾಲಿಕೆಯ ಹಸಿತ್ಯಾಜ್ಯ ಸಂಸ್ಕರಣೆ ಘಟಕಗಳನ್ನು ಮೇಲ್ದರ್ಜೆಗೇರಿಸಲು ಚರ್ಚೆ ನಡೆಯುತ್ತಿದೆ. ಘಟಕಗಳಿಗೆ ಅಗತ್ಯವಿರುವ ಯಂತ್ರಗಳ ಬಗ್ಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇಂದೋರ್‌ನ ತಜ್ಞರ ತಂಡದೊಂದಿಗೂ ಘಟಕಗಳ ಪರಿಶೀಲನೆ ನಡೆಸಲಾಗಿದೆ.
-ಎಂ.ಗೌತಮ್‌ಕುಮಾರ್‌, ಮೇಯರ್‌

* ಹಿತೇಶ್‌ ವೈ.

Advertisement

Udayavani is now on Telegram. Click here to join our channel and stay updated with the latest news.

Next