ಬೆಂಗಳೂರು: ಅರೆನ್ಯಾಯಿಕ ಪ್ರಕರಣಗಳ ಮೇಲ್ಮನವಿ ಅರ್ಜಿ ವಿಚಾರಣೆ ತ್ವರಿತವಾಗಿ ಪೂರ್ಣಗೊಳ್ಳುವಂತೆ ಪರಿಶೀಲಿಸಲು ಉಸ್ತುವಾರಿ ಸಮಿತಿಯನ್ನು ರಚಿಸಲು ಮುಂದಾಗಬೇಕು ಎಂದು ಹೈಕೋರ್ಟ್ ಸಲಹೆ ನೀಡಿದೆ.
ಈ ಸಂಬಂಧ ಶುಕ್ರವಾರ ಅರೆನ್ಯಾಯಿಕ ಪ್ರಕರಣಗಳ ಮೇಲ್ಮನವಿ ವಿಚಾರಣೆ ವಿಳಂಬ ಬಗ್ಗೆ ಸಲ್ಲಿಕೆಯಾಗಿದ್ದ ಅರ್ಜಿಯೊಂದರ ವಿಚಾರಣೆ ನಡೆಸಿದ ನ್ಯಾ. ವೇಣುಗೋಪಾಲಗೌಡ ಅವರಿದ್ದ ಏಕಸದಸ್ಯ ಪೀಠ, ಈ ಪ್ರಕರಣಗಳ ವಿಳಂಬದ ಬಗ್ಗೆ ಎಷ್ಟು ಬಾರಿ ಅಧಿಕಾರಿಗಳಿಗೆ ಸೂಚನೆ ನೀಡಬೇಕು?
ರಾಜ್ಯ ಸರ್ಕಾರವೂ ಅರೆನ್ಯಾಯಿಕ ಪ್ರಕರಣಗಳ ತ್ವರಿತ ವಿಲೇವಾರಿ ಹಾಗೂ ಆದೇಶಗಳನ್ನು ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡುವ ಬಗ್ಗೆ ಉಸ್ತುವಾರಿ ಸಮಿತಿಯೊಂದನ್ನು ರಚಿಸಲು ಸರ್ಕಾರದ ಮುಖ್ಯಕಾರ್ಯದರ್ಶಿ ನೇತೃತ್ವದಲ್ಲಿ ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರ ಜತೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿ ಎಂದು ಸೂಚಿಸಿತು.
ಈ ವೇಳೆ ಹಾಜರಿದ್ದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಶಿವಣ್ಣ, ತ್ವರಿತ ವಿಚಾರಣೆ ಹಾಗೂ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡುವ ಪ್ರಕ್ರಿಯೆ ಸಂಬಂಧ ಕಂದಾಯ ಇಲಾಖೆ ಜತೆ ಚರ್ಚಿಸಲಾಗಿದೆ.ಅಲ್ಲದೆ ಅಗತ್ಯ ಸಿಬ್ಬಂದಿ ನೇಮಕ ಸಂಬಂಧ ಆರ್ಥಿಕ ಇಲಾಖೆ ಜತೆ ಸಮಾಲೋಚಿಸಲಾಗಿದೆ ಎಂದರು.
ಸರ್ಕಾರಿ ಕಚೇರಿಗಳಲ್ಲಿ ಕಡತಗಳನ್ನೇ ನಾಪತ್ತೆಮಾಡುವಂತಹ ಹೆಗ್ಗಣಳಿದ್ದಾರೆ. ಸರ್ಕಾರಿ ಸಿಬ್ಬಂದಿ ತೆಗೆದುಕೊಳ್ಳುವ ವೇತನದ ಪೈಸೆ ಪೈಸೆಗೂ ನ್ಯಾಯ ಒದಗಿಸುವಂತೆ ನೋಡಿಕೊಳ್ಳಬೇಕು.
-ನ್ಯಾ. ವೇಣುಗೋಪಾಲ ಗೌಡ