Advertisement

HD Revanna ಜಾಮೀನು ರದ್ದುಪಡಿಸುವಂತೆ ಹೈಕೋರ್ಟ್‌ ಮೊರೆ

10:07 PM May 28, 2024 | Team Udayavani |

ಬೆಂಗಳೂರು: ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ ಎನ್ನಲಾದ ಸಂತ್ರಸ್ತೆಯನ್ನು ಅಪಹರಣ ಮಾಡಿದ್ದ ಆರೋಪದಲ್ಲಿ ಶಾಸಕ ಎಚ್‌.ಡಿ. ರೇವಣ್ಣ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಂಜೂರು ಮಾಡಿರುವ ಜಾಮೀನನ್ನು ರದ್ದುಪಡಿಸಬೇಕು ಎಂದು ವಿಶೇಷ ತನಿಖಾ ದಳ (ಎಸ್‌ಐಟಿ) ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

Advertisement

ಅಪಹರಣ ಪ್ರಕರಣವು ಗಂಭೀರ ಸ್ವರೂಪದಿಂದ ಕೂಡಿದೆ. ಪ್ರಕರಣದಲ್ಲಿ ರೇವಣ್ಣ ಅವರ ಪಾತ್ರವೂ ಇದೆ. ಪ್ರಕರಣ ಇನ್ನೂ ತನಿಖಾ ಹಂತದಲ್ಲಿದೆ. ಆರೋಪಿಗಳ ಹಾಗೂ ಸಾಕ್ಷಿಗಳ ಹೆಚ್ಚಿನ ವಿಚಾರಣೆ ನಡೆಸಬೇಕಿದೆ. ಆರೋಪಿಗೆ ಜಾಮೀನು ಲಭ್ಯವಾಗಿರುವುದರಿಂದ ತನಿಖೆ ಮೇಲೆ ಪ್ರಭಾವ ಬೀರಬಹುದು. ಹಾಗಾಗಿ ರೇವಣ್ಣ ಅವರಿಗೆ ನೀಡಲಾಗಿರುವ ಜಾಮೀನು ರದ್ದುಪಡಿಸಬೇಕು ಎಂದು ಎಸ್‌ಐಟಿ ಪೊಲೀಸರು ಕೋರಿದ್ದಾರೆ. ಈ ಅರ್ಜಿಯಲ್ಲಿ ಆರೋಪಿ ಎಚ್‌.ಡಿ. ರೇವಣ್ಣ ಅವರನ್ನು ಪ್ರತಿವಾದಿ ಮಾಡಲಾಗಿದೆ.

ಎರಡು ಪ್ರಕರಣಗಳಲ್ಲಿ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು 2024ರ ಮೇ 13ರಂದು ಜಾಮೀನು ಮಂಜೂರು ಮಾಡಿತ್ತು. ಇದೀಗ ಎರಡೂ ಪ್ರಕರಣಗಳಲ್ಲಿ ವಿಶೇಷ ನ್ಯಾಯಾಲಯ ಮಂಜೂರು ಮಾಡಿದ್ದ ಜಾಮೀನನ್ನು ರದ್ದು ಮಾಡುವಂತೆ ಸರಕಾರ ಹೈಕೋರ್ಟ್‌ ಮೆಟ್ಟಿಲೇರಿದೆ.

ನನ್ನ ಮೇಲಿನ ಎಫ್ಐಆರ್‌ ಕಟ್ಟುಕತೆ: ರದ್ದುಪಡಿಸಿ
ಬೆಂಗಳೂರು: ಲೈಂಗಿಕ ಕಿರುಕುಳ, ಅತ್ಯಾಚಾರ ಮತ್ತು ಮನೆಕೆಲಸದಾಕೆಯನ್ನು ಅಪಹರಿಸಿದ ಆರೋಪ ಸಂಬಂಧ ಮೈಸೂರು ಜಿಲ್ಲೆಯ ಕೆ.ಆರ್‌. ನಗರ ಮತ್ತು ಹಾಸನದ ಹೊಳೆನರಸೀಪುರ ಪೊಲೀಸ್‌ ಠಾಣೆಗಳಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎರಡು ಪ್ರತ್ಯೇಕ ಎಫ್ಐಆರ್‌ಗಳನ್ನು ರದ್ದುಪಡಿಸುವಂತೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

ಈ ಸಂಬಂಧ ಎರಡು ಪ್ರತ್ಯೇಕ ಕ್ರಿಮಿನಲ್‌ ಅರ್ಜಿಗಳನ್ನು ಸಲ್ಲಿಸಿರುವ ಅವರು ಮಹಿಳೆಯ ಅಪಹರಣ ಪ್ರಕರಣದಲ್ಲಿ ವಿಶೇಷ ತನಿಖಾ ದಳ, ಕೆ.ಆರ್‌. ನಗರ ಠಾಣೆಯ ಪೊಲೀಸರು ಮತ್ತು ದೂರುದಾರ ಎಚ್‌.ಡಿ. ರಾಜು ಅವರನ್ನು ಪ್ರತಿವಾದಿ ಮಾಡಿದ್ದಾರೆ. ಹಾಗೆಯೇ, ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎಫ್ಐಆರ್‌ ದಾಖಲಿಸಿರುವ ಹೊಳೆನರಸಿಪುರ ಠಾಣೆಯ ಪೊಲೀಸರು, ಸಿಟ್‌ ಮತ್ತು ದೂರುದಾರ ಮಹಿಳೆಯನ್ನು ಪ್ರತಿವಾದಿ ಮಾಡಿದ್ದಾರೆ.

Advertisement

ತಾವು ಯಾವುದೇ ಅಪರಾಧ ಎಸಗಿಲ್ಲ. ರಾಜಕೀಯ ಪ್ರೇರಿತ ಮತ್ತು ದುರುದ್ದೇಶದಿಂದ ತಮ್ಮ ವಿರುದ್ಧ ದೂರು ದಾಖಲಿಸಲಾಗಿದೆ. ಪ್ರಕರಣದಲ್ಲಿ ಯಾವುದೇ ಹುರಳಿಲ್ಲ. ದೂರಿನ ಅಂಶಗಳು ಕಟ್ಟುಕತೆಯಂತಿದೆ. ಆದ್ದರಿಂದ ಎಫ್ಐಆರ್‌ ರದ್ದುಪಡಿಸಬೇಕು. ಅರ್ಜಿ ಇತ್ಯರ್ಥವಾಗುವರೆಗೂ ಎಫ್ಐಆರ್‌, ಪ್ರಕರಣದ ತನಿಖೆ ಹಾಗೂ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಚಾರಣೆಗೆ ತಡೆಯಾಜ್ಞೆ ನೀಡಬೇಕು ಎಂದು ರೇವಣ್ಣ ಮಧ್ಯಾಂತರ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next