Advertisement

Highcourt: ಎಂಟು ನಾಯಿಮರಿ ಕೊಂದಿದ್ದ ವೃದ್ಧೆಗೆ ದಂಡ ಹೆಚ್ಚಿಸಲು ಹೈಕೋರ್ಟ್‌ ನಕಾರ

02:13 PM Jan 18, 2024 | Team Udayavani |

ಬೆಂಗಳೂರು: ಎಂಟು ನಾಯಿಮರಿಗಳ ಸಾವಿಗೆ ಕಾರಣವಾಗಿದ್ದ 72 ವರ್ಷದ ವೃದ್ಧೆಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಒಂದು ಸಾವಿರ ರೂ.ಗಳ ದಂಡವನ್ನು ಹೆಚ್ಚಿಸುವಂತೆ ಕೋರಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

Advertisement

ವಯಸ್ಸು ಮತ್ತು ತಪ್ಪೊಪ್ಪಿಗೆ ಕಾರಣಗಳನ್ನು ನೀಡಿರುವ ನ್ಯಾಯಾಲಯ ಶಿಕ್ಷೆ ಪ್ರಮಾಣ ಹೆಚ್ಚಳ ಮಾಡ ಬೇಕು ಎಂಬ ಮನವಿಯನ್ನು ತಿರಸ್ಕರಿಸಿದೆ. ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪ್ರಾಣಿಕಲ್ಯಾಣ ಅಧಿಕಾರಿ ಕೆ.ಬಿ.ಹರೀಶ್‌ ಹೈಕೋರ್ಟ್‌ಗೆ ಕ್ರಿಮಿನಲ್‌ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಜೆ.ಎಂ.ಖಾಜಿ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಆರೋಪಿತರಾದ ಪೊನ್ನಮ್ಮಗೆ ಘಟನೆ ನಡೆದಾಗ 65 ವರ್ಷ ವಾಗಿತ್ತು. ಪ್ರಸ್ತುತ 72 ವಯಸ್ಸು ಆಗಿದೆ. ಜತೆಗೆ ಆಕೆ ತಪ್ಪೊಪ್ಪಿಕೊಂಡಿದ್ದಾರೆ. ವಿಚಾರಣಾ ನ್ಯಾಯಾಲಯದ ನ್ಯಾಯಾ ಧೀಶರ ವಿವೇಚನಾಧಿಕಾರ ಬಳಸಿ ಆಕೆಗೆ ಶಿಕ್ಷೆ ವಿಧಿಸಿದ್ದಾರೆ. ದಂಡದ ಮೊತ್ತವನ್ನೂ ಪಾವತಿ ಮಾಡಲಾಗಿದೆ ಎಂದು ತಿಳಿಸಿದ ನ್ಯಾಯ ಪೀಠ, ಶಿಕ್ಷೆ ಪ್ರಮಾಣ ಹೆಚ್ಚಳ ಮಾಡುವುದಕ್ಕೆ ನಿರಾಕರಿಸಿದೆ. ಅರ್ಜಿಯ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಆರೋಪಿಯ ಅಪರಾಧಕ್ಕೆ ಅನುಗುಣವಾಗಿ ಆರೋಪಿತರಿಗೆ ಶಿಕ್ಷೆ ವಿಧಿಸಿಲ್ಲ. ಜಗತ್ತಿನ ಎಲ್ಲ ಜೀವಿಯ ಕುರಿತು ಕರುಣೆ ಹಾಗೂ ಸಹಾನೂಭೂತಿ ತೋರುವುದು ನಾಗರಿಕನ ಕರ್ತವ್ಯ. ಆದ್ದರಿಂದ ಆಕೆಗೆ ವಿಧಿಸಿದ್ದ ದಂಡ ಹೆಚ್ಚಿಸಬೇಕು ಎಂದು ನ್ಯಾಯಪೀಠಕ್ಕೆ ಕೋರಿದ್ದರು.

ಪ್ರಕರಣದ ಹಿನ್ನೆಲೆ ಏನು? 2016 ರ ಮಾ.15 ರಂದು ಆರೋಪಿ ಪೊನ್ನಮ್ಮರ ಮನೆಯ ಮುಂದೆ ನಾಯಿಯೊಂದು ಎಂಟು ಮರಿಗಳನ್ನು ಹಾಕಿತ್ತು. ಅದರ ಗದ್ದಲದಿಂದ ಬೇಸತ್ತ ಮಹಿಳೆ ಆ ನಾಯಿಮರಿಗಳನ್ನು ಅಲ್ಲಿಂದ ಸ್ಥಳಾಂತರ ಮಾಡಿ ಖಾಲಿ ನಿವೇಶನದಲ್ಲಿರಿಸಿದ್ದರು. ಇದರಿಂದ ತಾಯಿ ನಾಯಿಗೆ ಮರಿಗಳ ಬಳಿ ಬರಲು ಅಥವಾ ಮರಿಗಳಿಗೆ ತಾಯಿಯ ಬಳಿ ಹೋಗಲು ಸಾಧ್ಯವಾಗಲಿಲ್ಲ. ಇದರಿಂದ ತಾಯಿಯ ಪಾಲನೆ ಸಿಗದೆ ಮರಿಗಳು ಸಾವನ್ನಪ್ಪಿದ್ದವು.

ಈ ಹಿನ್ನೆಲೆಯಲ್ಲಿ ಹರೀಶ್‌ ಪೊಲೀಸರಿಗೆ ದೂರು ನೀಡಿದ್ದರು. ದೂರಿಗೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದರು. ಬಳಿಕ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ಐಪಿಸಿ, ಕರ್ನಾಟಕ ಪೊಲೀಸ್‌ ಕಾಯ್ದೆ, ಪ್ರಾಣಿಗಳ ಮೇಲಿನ ಕ್ರೌರ್ಯತಡೆ ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಪಟ್ಟಿ ಸಲ್ಲಿಸಿದ್ದರು.

Advertisement

ನ್ಯಾಯಾಲಯಕ್ಕೆ ಹಾಜರಾದ ಪೊನ್ನಮ್ಮ, ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರು. ಈ ಅಂಶವನ್ನು ದಾಖಲಿಸಿಕೊಂಡಿದ್ದ ಮ್ಯಾಜಿಸ್ಟ್ರೇಟ್‌ ನ್ಯಾಯಾಧೀಶರು, ಒಂದು ಸಾವಿರ ದಂಡ ವಿಧಿಸಿ ಆದೇಶಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಹರೀಶ್‌ ಸೆಷನ್ಸ್‌ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಸೇಷನ್ಸ್‌ ನ್ಯಾಯಾಲಯ ಸಹ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಹರೀಶ್‌ ಅವರು ಹೈಕೋರ್ಟ್‌ ಮೊರೆ ಹೋಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next