Advertisement

Kollur: ಕೊಲ್ಲೂರು ದೇಗುಲದ ಆಡಳಿತ ಮಂಡಳಿ ಅವಧಿ ವಿಸ್ತರಿಸಲು ಹೈಕೋರ್ಟ್‌ ನಕಾರ

10:31 PM Jan 04, 2024 | Pranav MS |

ಬೆಂಗಳೂರು: ಉಡುಪಿ ಜಿಲ್ಲೆಯ ಕೊಲ್ಲೂರು ಮೂಕಾಂಬಿಕಾ ದೇಗುಲದ ಆಡಳಿತ ಮಂಡಳಿ ಅವಧಿಯನ್ನು ವಿಸ್ತರಿಸಲು ಹೈಕೋರ್ಟ್‌ ನಿರಾಕರಿಸಿದೆ.

Advertisement

ಆಡಳಿತ ಮಂಡಳಿ ಅವಧಿಯನ್ನು ವಿಸ್ತರಿಸುವಂತೆ ಕೋರಿ ಸಮಿತಿ ಸದಸ್ಯರಾದ ಕೆರಾಡಿ ಚಂದ್ರಶೇಖರ ಶೆಟ್ಟಿ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ| ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಆಡಳಿತ ಮಂಡಳಿ ಸದಸ್ಯರು ಸಂಪೂರ್ಣ ಅಧಿಕಾರಾವಧಿ ಅನುಭವಿಸಿದ್ದರೂ ಕೊನೆಯ ಘಳಿಗೆಯಲ್ಲಿ ಅವಧಿ ವಿಸ್ತರಿಸುವಂತೆ ಮಾಡಿರುವ ಮನವಿಯನ್ನು ಒಪ್ಪಲಾಗುವುದಿಲ್ಲ ಎಂದು ಹೇಳಿ ಅರ್ಜಿಯನ್ನು ತಿರಸ್ಕರಿಸಿದೆ.

ಅಲ್ಲದೆ, ಸಮಿತಿ ರಚಿಸಿದ ಸಂದರ್ಭದಲ್ಲಿ ಅರ್ಜಿದಾರರು 3 ವರ್ಷಗಳ ಅವಧಿಯನ್ನು ಒಪ್ಪಿಕೊಂಡಿದ್ದಾರೆ. ಜತೆಗೆ ಅಧಿಕಾರವನ್ನೂ ಅನುಭವಿಸಿದ್ದಾರೆ ಎಂದು ನ್ಯಾಯಪೀಠ ಹೇಳಿದೆ.
ಸಮಿತಿ ರಚಿಸಿ ಆದೇಶ ಹೊರಡಿಸಿದ ದಿನದ ಬದಲಿಗೆ ಸಮಿತಿ ಮೊದಲ ಸಭೆ ನಡೆಸಿದ ದಿನದಿಂದ ಮೂರು ವರ್ಷಗಳ ಅವಧಿಗೆ ಇರಬೇಕು ಎಂದು ಕೋರಿದ್ದಾರೆ. ಇದು ಧಾರ್ಮಿಕ ದತ್ತಿ ಇಲಾಖೆಯ ಕಾಯ್ದೆಗೆ ವಿರುದ್ಧವಾಗಿದೆ ಎಂದು ನ್ಯಾಯಪೀಠ ಉಲ್ಲೇಖೀಸಿದೆ.

ಪ್ರಕರಣದ ಹಿನ್ನೆಲೆ
ಧಾಮಿಕ ದತ್ತಿ ಕಾಯ್ದೆ ಸೆಕ್ಷನ್‌ 25ರ ಪ್ರಕಾರ ಕೊಲ್ಲೂರು ದೇಗುಲಕ್ಕೆ ಮೂರು ವರ್ಷಗಳ ಅವಧಿಗೆ ಆಡಳಿತ ಮಂಡಳಿ ರಚಿಸಿ 2020ರ ಅಕ್ಟೋಬರ್‌ 27ರಂದು ಆದೇಶಿಸಲಾಗಿತ್ತು. ಸಮಿತಿ ತನ್ನ ಮೊದಲ ಸಭೆಯನ್ನು 2021ರ ಎಪ್ರಿಲ್‌ 26ರಂದು ನಡೆಸಿತ್ತು. ಆದ್ದರಿಂದ ಅಂದಿನಿಂದ ಮೂರು ವರ್ಷಗಳ ಅವಧಿಗೆ ಅಂದರೆ, 2024ರ ಎಪ್ರಿಲ್‌ 26ರ ವರೆಗೂ ವಿಸ್ತರಿಸಬೇಕು ಎಂದು ಕೋರಿ ಸದಸ್ಯರಾದ ಕೆರಾಡಿ ಚಂದ್ರಶೇಖರ ಶೆಟ್ಟಿ, ಅತುಲ್‌ ಕುಮಾರ್‌ ಶೆಟ್ಟಿ, ರತ್ನಾ, ಎಚ್‌. ಜಯಾನಂದ, ಕೆ.ರಾಮಚಂದ್ರ ಅಡಿಗ ಹಾಗೂ ಗೋಪಾಲಕೃಷ್ಣ ಅವರು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಮಧ್ಯಾಂತರ ಅರ್ಜಿ ಸಲ್ಲಿಸಿದ್ದ ಸಮಿತಿ ಸದಸ್ಯೆ ಸಂಧ್ಯಾ ರಮೇಶ್‌, ಸಮಿತಿ ಅವಧಿ ಪೂರ್ಣಗೊಂಡಿರುವುದರಿಂದ ಮುಂದುವರಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಆದ್ದರಿಂದ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಕೋರಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next