Advertisement

Chakravarty Sulibele ವಿರುದ್ಧದ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್‌

11:19 PM Feb 27, 2024 | Team Udayavani |

ಬೆಂಗಳೂರು: ಬಿಜೆಪಿ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆಹಿನ್ನೆಲೆಯಲ್ಲಿ ಪಿಎಫ್‌ಐ ಮತ್ತು ಎಸ್‌ಡಿಪಿಐ ಸಂಘಟನೆ ನಿಷೇಧಕ್ಕೆ ಆಗ್ರಹಿಸಿ ಬೆಂಗಳೂರಿನ ಟೌನ್‌ ಹಾಲ್‌ ಮುಂದೆ ಪ್ರತಿಭಟನೆ ನಡೆಸಿದ ಪ್ರಕರಣ ಸಂಬಂಧ ಯುವ ಬ್ರಿಗೇಡ್‌ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ವಿರುದ್ಧದ ಪ್ರಕರಣವನ್ನು ಹೈಕೋರ್ಟ್‌ ರದ್ದುಪಡಿಸಿದೆ.

Advertisement

ಪ್ರಕರಣ ರದ್ದು ಕೋರಿ ಚಕ್ರವರ್ತಿ ಸೂಲಿಬೆಲೆ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ| ಕೃಷ್ಣ ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ಈ ಆದೇಶವನ್ನು ನೀಡಿದೆ. ಕಾನೂನು ಪ್ರಕಾರ ಆದೇಶ ಹೊರಡಿಸಿದ ಅಧಿಕಾರಿ ಅಥವಾ ಅವರಿಗಿಂತ ಮೇಲಿನ ಶ್ರೇಣಿಯ ಅಧಿಕಾರಿ ದೂರು ದಾಖಲಿಸಬೇಕಿದೆ. ಈ ಪ್ರಕರಣದಲ್ಲಿ ಇನ್‌ಸ್ಪೆಕ್ಟರ್‌ ಖಾಸಗಿ ದೂರು ದಾಖಲಿಸಿರುವುದು ಮತ್ತು ಆ ದೂರು ಪರಿಗಣಿಸಿ ಅರ್ಜಿದಾರರಿಗೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಕ್ರಮ ಜರುಗಿಸಿರುವುದು ಕಾನೂನುಬಾಹಿರ ಎಂಬ ಅರ್ಜಿದಾರರ ಪರ ವಕೀಲರ ವಾದ ಮಾನ್ಯ ಮಾಡಿದ ನ್ಯಾಯಾಲಯ ಸೂಲಿಬೆಲೆ ವಿರುದ್ಧದ ಪ್ರಕರಣವನ್ನು ರದ್ದು ಗೊಳಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಅರುಣ್‌ ಶ್ಯಾಮ್‌, ಫ್ರೀಡಂ ಪಾರ್ಕ್‌ ಹೊರತುಪಡಿಸಿ ಬೆಂಗಳೂರಿನ ಇತರ ಭಾಗದಲ್ಲಿ ಪ್ರತಿಭಟನೆ ನಡೆಸಬಾರದೆಂದು ಆದೇಶವಿದೆ. ಈ ಆದೇಶ ಉಲ್ಲಂಘಿಸಿ ಮತ್ತು ಪೂರ್ವಾನುಮತಿ ಪಡೆಯದೇ ಬೆಂಗಳೂರಿನ ಟೌನ್‌ಹಾಲ್‌ ಮುಂದೆ ಪ್ರತಿಭಟನೆ ನಡೆಸಿ, ಸಾರ್ವಜನಿಕ ಶಾಂತಿ ಭಂಗ ಉಂಟು ಮಾಡಿದ ಮತ್ತು ಕಾನೂನು ಸುವ್ಯವಸ್ಥೆಗೆ ಅಡ್ಡಿಪಡಿಸಿದ ಆರೋಪದ ಮೇಲೆ ಎಸ್‌.ಜೆ.ಪಾರ್ಕ್‌ ಠಾಣೆಯ ಇನ್‌ಸ್ಪೆಕ್ಟರ್‌ 6ನೇ ಎಸಿಎಂಎಂ ನ್ಯಾಯಾಲಯದಲ್ಲಿ ಅರ್ಜಿ ದಾರರ ವಿರುದ್ಧ ಖಾಸಗಿ ದೂರು ದಾಖಲಿಸಿದ್ದಾರೆ. ಆದರೆ, ನಿಯಮದ ಪ್ರಕಾರ ಇನ್‌ಸ್ಪೆಕ್ಟರ್‌ಗೆ ದೂರು ದಾಖಲಿಸುವ ಅಧಿಕಾರವಿಲ್ಲ. ಹಾಗಾಗಿ ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿದರು.

ಪ್ರಕರಣದ ಹಿನ್ನೆಲೆ
ಪ್ರವೀಣ್‌ ನೆಟ್ಟಾರು ಹತ್ಯೆ ಖಂಡಿಸಿ 2022ರ ಜು.28ರಂದು ಟೌನ್‌ ಹಾಲ್‌ ಮುಂಭಾಗ ಹಿಂದೂ ಹಿತರಕ್ಷಣ ಸಮಿತಿ ಮತ್ತು ಇತರೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಜೆಹಾದಿಗಳಿಗೆ ಧಿಕ್ಕಾರ, ಪಿಎಫ್‌ಐ ಮತ್ತು ಎಸ್‌ಡಿಪಿಐ ಸಂಘಟನೆಗಳನ್ನು ನಿಷೇಧಿಸಬೇಕು. ಪ್ರವೀಣ್‌ ನೆಟ್ಟಾರ್‌ ಹಂತಕರನ್ನು ಸಾರ್ವಜನಿಕವಾಗಿ ಎನ್‌ಕೌಂಟರ್‌ ಮಾಡಬೇಕು’ ಎಂದು ಘೋಷಣೆ ಕೂಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next