ಬೆಂಗಳೂರು: ರಾಜ್ಯ ಸರಕಾರದ ವತಿಯಿಂದಲೇ ನ.10ರಂದು ನಡೆಸಲು ಉದ್ದೇಶಿಸಿರುವ ಟಿಪ್ಪು ಜಯಂತಿ ಆಚರಣೆಗೆ ತಡೆ ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ. ಜತೆಗೆ, ಈ ಬಗ್ಗೆ ಹೊರಡಿಸಿರುವ ಸುತ್ತೋಲೆ ರದ್ದುಪಡಿಸಬೇಕೆಂಬ ಮನವಿಯನ್ನೂ ಅದು ತಳ್ಳಿಹಾಕಿದೆ.
ಆಚರಣೆಗೆ ಕೇವಲ 3 ದಿನಗಳಷ್ಟೇ ಬಾಕಿ ಉಳಿದಿದ್ದು, ಈ ಸಂದರ್ಭದಲ್ಲಿ ಮಧ್ಯ ಪ್ರವೇಶ ಸಾಧ್ಯವಿಲ್ಲ ಎಂದಿತು. ಜತೆಗೆ ಕೊಡಗು, ದ.ಕ. ಜಿಲ್ಲೆ, ಉಡುಪಿ ಜಿಲ್ಲೆಗಳಲ್ಲಿನ ಆಚರಣೆಗೆ ತಡೆಯಾಜ್ಞೆ ನೀಡು ವಂತೆ ಕೋರಿದ್ದ ಅರ್ಜಿದಾರರ ಮನವಿ ತಳ್ಳಿಹಾಕಿ ಸೂಕ್ಷ್ಮ ಪ್ರದೇಶಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾ ಡುವುದು ಸರಕಾರದ ಜವಾಬ್ದಾರಿ ಎಂದು ಹೇಳಿತು.
ಟಿಪ್ಪು ಜಯಂತಿ ರದ್ದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್. ಜಿ. ರಮೇಶ್, ನ್ಯಾ| ಪಿ.ಎಸ್. ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ಪೀಠ ರದ್ದತಿ ಮನವಿಯನ್ನು ತಳ್ಳಿಹಾಕಿತು.
ವಿರೋಧ ಇದ್ದೇ ಇರುತ್ತೆ: ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಟಿಪ್ಪು ಜಯಂತಿಗಾಗಿ ಬಜೆಟ್‌ನಲ್ಲಿ 10 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಜತೆಗೆ ಈ ಆಚರಣೆಗೆ ಹಲವರ ವಿರೋಧವಿದೆ ಎಂಬ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಈ ನಿರ್ಧಾರ ತೆಗೆದುಕೊಳ್ಳುವ ಮುನ್ನ ಉಭಯ ಸದನಗಳಲ್ಲಿ ಚರ್ಚಿತ ವಾಗಿರುತ್ತದೆ ಅಲ್ಲವೇ ಎಂದು ಪ್ರಶ್ನಿಸಿತು. ಸಾಮಾನ್ಯವಾಗಿ ಆಚರಣೆಗಳಿಗೆ ಕೆಲವರ ವಿರೋಧ ಇದ್ದೇ ಇರುತ್ತೆ ಎಂದ ನ್ಯಾಯಪೀಠ, 2015ರ ಆಚರಣೆ ವೇಳೆ ಸಂಭವಿಸಿದ ಘಟನೆಗಳ ಬಗ್ಗೆ ಮಾಹಿತಿ ಪಡೆದುಕೊಂಡಿತು.
ರಾಜ್ಯ ಸರಕಾರದ ಪರ ವಾದ ಮಂಡಿಸಿದ ಅಡ್ವೋಕೇಟ್ ಜನರಲ್ ಮಧುಸೂದನ್ ನಾಯಕ್ ಕಳೆದ ಬಾರಿ ಸಲ್ಲಿಸಿದ್ದ ಅರ್ಜಿಯನ್ನೇ ಮತ್ತೂಮ್ಮೆ ಹಾಕಲಾಗಿದೆ. ಇಂತಹ ಅರ್ಜಿಗಳನ್ನು ಮಾನ್ಯ ಮಾಡಬಾರದು ಎಂದು ನ್ಯಾಯ ಪೀಠವನ್ನು ಕೋರಿದ್ದರು. ಟಿಪ್ಪು ಜಯಂತಿ ರದ್ದು ಕೋರಿ ಕೊಡಗಿನ ಕೆ.ಪಿ. ಮಂಜುನಾಥ್ ಅರ್ಜಿ ಸಲ್ಲಿಸಿದ್ದರು.