Advertisement

ಮಧ್ಯಂತರ ಆದೇಶ ನೀಡಲು ಹೈಕೋರ್ಟ್‌ ನಕಾರ 

08:27 AM Oct 13, 2018 | |

ಬೆಂಗಳೂರು: ಶಿವಮೊಗ್ಗ, ಬಳ್ಳಾರಿ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆಗೆ ತಡೆ ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಯಾವುದೇ ಮಧ್ಯಂತರ ಆದೇಶ ನೀಡಲು ನಿರಾಕರಿಸಿರುವ ಹೈಕೋರ್ಟ್‌, ನಿಗದಿತ ವೇಳಾಪಟ್ಟಿಯಂತೆ ಕೇಂದ್ರ ಚುನಾವಣಾ ಆಯೋಗವು ಚುನಾವಣೆ ಪ್ರಕ್ರಿಯೆ ಮುಂದುವರಿಸಬಹುದು ಎಂದು ಶುಕ್ರವಾರ ಸ್ಪಷ್ಟಪಡಿಸಿದೆ. 

Advertisement

ಈ ಸಂಬಂಧ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್‌, ವಕೀಲ ರಮೇಶ್‌ ನಾಯಕ್‌ ಮತ್ತು ಎ.ಡಿ.ಉತ್ತಯ್ಯ ಸಲ್ಲಿಸಿರುವ 3 ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾ.ದಿನೇಶ್‌ ಮಹೇಶ್ವರಿ ಹಾಗೂ ನ್ಯಾ.ಎಸ್‌.ಜಿ.ಪಂಡಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ನಡೆಸಿತು. 3 ಲೋಕಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಸಲು ಚುನಾವಣಾ ಆಯೋಗ ಪ್ರಕಟಿಸಿರುವ ವೇಳಾಪಟ್ಟಿಗೆ ತಡೆ ನೀಡುವಂತೆ ಈ ಅರ್ಜಿಗಳಲ್ಲಿ ಕೋರಲಾಗಿದೆ. ವಿಚಾರಣೆ ವೇಳೆ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಈ ಹಂತದಲ್ಲಿ ಯಾವುದೇ ಮಧ್ಯಂತರ ಆದೇಶ ನೀಡುವುದಿಲ್ಲ. “ಸಂಸದರ ಹುದ್ದೆ ಖಾಲಿಯಾದ ದಿನದಿಂದ ಮುಕ್ತಾಯದ ಅವಧಿ ಒಂದು ವರ್ಷ ಇದ್ದರೆ ಚುನಾವಣೆ ನಡೆಸಬಹುದು ಎಂಬ ವಾದವನ್ನು ಮೇಲ್ನೋಟಕ್ಕೆ ಒಪ್ಪಬಹುದು. ಆದರೂ ಒಂದಿಷ್ಟು ಸಂದೇಹವಿದೆ. ಹಾಗಾಗಿ, ಚುನಾವಣಾ ಆಯೋಗ ಆಕ್ಷೇಪಣೆ ಸಲ್ಲಿಸಿದ ಬಳಿಕ ಅರ್ಜಿಯನ್ನು ಕೂಲಂಕಷವಾಗಿ ಪರಿಗಣಿಸಲಾಗುವುದು’ ಎಂದು ಅಭಿಪ್ರಾಯಪಟ್ಟಿತು.

ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಪ್ರಜಾಪ್ರತಿನಿಧಿ ಕಾಯ್ದೆ ಪ್ರಕಾರ, ಸಂಸದರ ಅವಧಿ 1 ವರ್ಷಕ್ಕಿಂತ ಹೆಚ್ಚಿನ ಸಮಯ ವಿದ್ದರೆ ಉಪಚುನಾವಣೆ ನಡೆಸಬೇಕು. ಆದರೆ, ಇದೀಗ 3 ಕ್ಷೇತ್ರಗಳಿಗೆ ಉಪಚುನಾವಣೆ ನಡೆಸಲಾಗುತ್ತಿದ್ದು, ಮೂರ ರಲ್ಲೂ ಹೊಸದಾಗಿ ಆಯ್ಕೆಯಾಗುವ ಸಂಸದರಿಗೆ ಕೇವಲ ಆರೂವರೆ ತಿಂಗಳು ಮಾತ್ರ ಅಧಿಕಾರ ಸಿಗುತ್ತದೆ. ಎರಡೂ ಸೆಕ್ಷನ್‌ ಒಟ್ಟಿಗೆ ಓದಿಕೊಂಡಾಗ ಇದೇ ಅರ್ಥ ಬರುತ್ತದೆ. ಆದರೆ ಎರಡನ್ನೂ ಪ್ರತ್ಯೇಕವಾಗಿ ಓದಿದರೆ ಬೇರೆ, ಬೇರೆ ರೀತಿಯಲ್ಲಿ ವ್ಯಾಖ್ಯಾನ ಮಾಡಬಹುದಾಗಿದೆ ಎಂದರು.

ಇದಕ್ಕೆ ಚುನಾವಣಾ ಆಯೋಗದ ಪರ ವಕೀಲರು ಸೆಕ್ಷನ್‌ 151ಎ ಪ್ರಕಾರ ಸಂಸದರ ಹುದ್ದೆ ಖಾಲಿಯಾದ ದಿನದಿಂದ ಒಂದು ವರ್ಷದೊಳಗೆ ಅವಧಿ ಇದ್ದರೆ ಚುನಾವಣೆ ನಡೆಸಬೇಕಾಗಿಲ್ಲ. ಆದರೆ, ಇದೀಗ ಹುದ್ದೆ ಖಾಲಿಯಾಗಿರುವುದು ಮೇ ತಿಂಗಳ 18ಕ್ಕೆ. ಹಾಗಾಗಿ ಆ ದಿನದಿಂದ ಲೆಕ್ಕ ಹಾಕಿದರೆ ಒಂದು ವರ್ಷದ ಅವಧಿ ಇದೆ. ಹಾಗಾಗಿ ಚುನಾವಣಾ ಆಯೋಗ ಉಪಚುನಾವಣೆ ವೇಳಾಪಟ್ಟಿ ಪ್ರಕಟಿಸಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಬಳಿಕ ಪೀಠ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆಯನ್ನು ಅ.29ಕ್ಕೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next