Advertisement

ಚಂಬಲ್‌ ಸಿನಿಮಾ ಬಿಡುಗಡೆಗೆ ತಡೆ ನೀಡಲು ಹೈಕೋರ್ಟ್‌ ನಕಾರ

06:22 AM Feb 22, 2019 | Team Udayavani |

ಬೆಂಗಳೂರು: ಐಎಎಸ್‌ ಅಧಿಕಾರಿಯಾಗಿದ್ದ ಡಿ.ಕೆ. ರವಿ ಅವರ ಜೀವನಾಧಾರಿತ ಚಿತ್ರ ಎಂದು ಹೇಳಲಾಗಿರುವ ನಟ ನೀನಾಸಂ ಸತೀಶ್‌ ಅಭಿನಯದ “ಚಂಬಲ್’ ಕನ್ನಡ ಚಲನಚಿತ್ರ ಬಿಡುಗಡೆಗೆ ಹಾಗೂ ಪ್ರದರ್ಶನಕ್ಕೆ ತಡೆ ನೀಡಲು ಹೈಕೋರ್ಟ್‌ ಗುರುವಾರ ನಿರಾಕರಿಸಿದೆ. ಚಿತ್ರ ಬಿಡುಗಡೆಗೆ ತಡೆ ನೀಡುವಂತೆ ಕೋರಿ ಡಿ.ಕೆ. ರವಿ ಅವರ ತಾಯಿ ಗೌರಮ್ಮ ಹಾಗೂ ತಂದೆ ಕರಿಯಪ್ಪ ಸಲ್ಲಿಸಿದ್ದ ಅರ್ಜಿಯು ನ್ಯಾ. ಸುನೀಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

Advertisement

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಚಿತ್ರದ ಕಥಾ ವಿಷಯ ಇಂತಹದ್ದೇ ಇದೆ ಅಥವಾ ವ್ಯಕ್ತಿಯೊಬ್ಬರ ಜೀವನಾಧಾರಿತವಾಗಿದೆ ಎಂಬ ಖಚಿತ ತೀರ್ಮಾನಕ್ಕೆ ಬರಲು ಈ ಹಂತ “ಅಪಕ್ವ’. ಅಲ್ಲದೇ  2018ರ ನ.30ರಂದು ಚಿತ್ರಕ್ಕೆ ಸೆನ್ಸಾರ್‌ ಪ್ರಮಾಣಪತ್ರ ನೀಡಲಾಗಿದ್ದು, ಚಿತ್ರ ಬಿಡುಗಡೆಗೆ ಇನ್ನೊಂದು ದಿನವಷ್ಟೇ ಬಾಕಿ ಇದೆ. ಈ ಹಂತದಲ್ಲಿ ಚಿತ್ರ ಬಿಡುಗಡೆಗೆ ತಡೆ ನೀಡಬೇಕೆಂಬ ಅರ್ಜಿದಾರರ ಮನವಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿತು.

ಆದರೆ, ಚಿತ್ರದಲ್ಲಿ ತಮ್ಮ ಮಗನ ವ್ಯಕ್ತಿತ್ವಕ್ಕೆ ಧಕ್ಕೆಯಾಗುವಂಥ ಅಂಶಗಳನ್ನು ಸೇರಿಸಲಾಗಿದೆ ಎಂದು ಅರ್ಜಿದಾರರು ಆರೋಪಿಸಿರುವ ಹಿನ್ನೆಲೆಯಲ್ಲಿ, ಮೊದಲ ಪ್ರದರ್ಶನದ ಬಳಿಕ ಸಂಪೂರ್ಣ ಚಿತ್ರದ ಡಿವಿಡಿ ಯನ್ನು ಸೋಮವಾರ (ಫೆ.25) ನ್ಯಾಯಾಲಯಕ್ಕೆ ಹಾಜರುಪಡಿಸಬೇಕೆಂದು ಚಿತ್ರ ತಂಡಕ್ಕೆ ನ್ಯಾಯಪೀಠ ಸೂಚಿಸಿತು. ಅಲ್ಲದೇ ಸೆನ್ಸಾರ್‌ ಮಂಡಳಿಯ ಪ್ರಮಾಣಪತ್ರ ನೀಡಿದ ವಿಚಾರವಾಗಿ ವಿಚಾರಣೆಯನ್ನು ಮುಕ್ತವಾಗಿಸಿರುವ ನ್ಯಾಯಪೀಠ ಅರ್ಜಿ ವಿಚಾರಣೆಯನ್ನು ಮಾ.3ಕ್ಕೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next