ಬೆಂಗಳೂರು: ಬಿಬಿಎಂಪಿಯ ಆಂತರಿಕ ಲೆಕ್ಕ ಪರಿಶೋಧನೆಗೆ ಸಂಬಂಧಿಸಿದಂತೆ ಸಂಪೂರ್ಣ ವಿವರ ಸಲ್ಲಿಸುವಂತೆ ಪಾಲಿಕೆಗೆ ಹೈಕೋರ್ಟ್ ಸೂಚನೆ ನೀಡಿದೆ.
ಬಿಬಿಎಂಪಿಯ ಆರ್ಥಿಕ ವ್ಯವಹಾರಗಳ ಸಂಬಂಧ ಸಮಗ್ರ ಲೆಕ್ಕಪರಿಶೋಧನೆ ನಡೆಸಲು ನಿರ್ದೇಶಿಸಬೇಕು ಎಂದು ಕೋರಿ ನಮ್ಮ ಬೆಂಗಳೂರು ಪ್ರತಿಷ್ಠಾನ ಮತ್ತು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಶನಿವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಮತ್ತು ನ್ಯಾಯಮೂರ್ತಿ ಸುಜಾತಾ ಅವರಿದ್ದ ವಿಭಾಗೀಯ ಪೀಠ, ಈ ಸೂಚನೆ ನೀಡಿದೆ.
ಸಾರ್ವಜನಿಕ ವಲಯದ ಬ್ಯಾಂಕುಗಳು ಬಿಬಿಎಂಪಿಗೆ ಸಾಲ ನೀಡುತ್ತವೆ. ಈ ಬಗ್ಗೆ ಅಂಕಿ ಅಂಶಗಳನ್ನು ಪಾಲಿಕೆ ಸಂಗ್ರಹಿಸಬೇಕು. ಈ ಸಂಬಂಧ ಪಾಲಿಕೆಯಲ್ಲಿ ಲೆಕ್ಕ ಪರಿಶೋಧನೆಯಲ್ಲಿ ಸೂಕ್ತ ಮಾಹಿತಿ ಇಲ್ಲ. ಅಲ್ಲದೆ, ಲೆಕ್ಕ ಪತ್ರಗಳನ್ನು ನಿರ್ವಹಣೆ ಮಾಡುತ್ತಿಲ್ಲ. ಈ ಪ್ರಕರಣದಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.
ವಾದ ಆಲಿಸಿದ ನ್ಯಾಯಪೀಠ, ಆಂತರಿಕ ಲೆಕ್ಕ ಪರಿಶೋಧನೆಗೆ ಸಂಬಂಧಿಸಿದಂತೆ ಸಂಪೂರ್ಣ ವಿವರ ಸಲ್ಲಿಸುವಂತೆ ಪಾಲಿಕೆಗೆ ಸೂಚನೆ ನೀಡಿ ಅರ್ಜಿ ವಿಚಾರಣೆಯನ್ನು ಜ.30ಕ್ಕೆ ಮುಂದೂಡಿತು. ಕೆಎಂಸಿ ಕಾಯಿದೆ ಪ್ರಕಾರ ಪಾಲಿಕೆ ಆಯುಕ್ತರ ಹೆಸರಿನಲ್ಲಿ ಮಾತ್ರ ಬ್ಯಾಂಕ್ ಖಾತೆ ಇರಬೇಕು ಎಂಬ ನಿಯಮವಿದೆ. ಆದರೆ, ಪಾಲಿಕೆ ಅಧಿಕಾರಿಗಳು ತಮ್ಮ ಸ್ವಂತ ಮಾಹಿತಿ ಮತ್ತು ವಿಳಾಸವನ್ನು ನೀಡಿ ಬ್ಯಾಂಕ್ ಖಾತೆಗಳನ್ನು ತೆರೆದಿದ್ದಾರೆ.
ಪಾಲಿಕೆ ವ್ಯಾಪ್ತಿಯನ್ನು ಮೀರಿ ಖಾತೆಗಳನ್ನು ತೆರೆದಿರುವ ಉದಾಹರಣೆಗಳಿವೆ. ಸುಮಾರು 600ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಪಾಲಿಕೆ ಅಧಿಕಾರಿಗಳು ತೆರೆದಿದ್ದರು ಎಂಬ ಆರೋಪವಿದ್ದು, ಒಂದೇ ಸಂಸ್ಥೆಗೆ ಸೇರಿದ ಇಷ್ಟೊಂದು ಖಾತೆಗಳನ್ನು ತೆರೆದಿರುವ ಸಂಬಂಧ ತನಿಖೆ ನಡೆಸಬೇಕು. ಮತ್ತು ಮಹಾ ಲೇಖಪಾಲರಿಂದ ಪಾಲಿಕೆಯಲ್ಲಿನ ಲೆಕ್ಕ ಪರಿಶೋಧನೆ ನಡೆಸುವುದಕ್ಕೆ ಸೂಚನೆ ನೀಡಬೇಕು ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.