ಬೆಂಗಳೂರು: ಅಮೆರಿಕಗೆ ಮಕ್ಕಳಿಬ್ಬರನ್ನು ಕಳ್ಳ ಸಾಗಣೆ ಮಾಡಿದ ಆರೋಪ ಸಂಬಂಧ ನಗರದ ಟ್ರಾವೆಲ್ ಏಜೆನ್ಸಿ ಸಿಬ್ಬಂದಿ ವಿರುದ್ಧ ಯಾವ ಕಾರಣಕ್ಕೆ ಎಫ್ಐಆರ್ ದಾಖಲಿಸಲಾಗಿದೆ ಎಂಬ ಬಗ್ಗೆ ವಿವರಣೆ ನೀಡುವಂತೆ ಹೈಕೋರ್ಟ್ ಪುಲಿಕೇಶಿನಗರ ಠಾಣಾಧಿಕಾರಿಗಳಿಗೆ ನಿರ್ದೇಶಿಸಿದೆ.
ತಮ್ಮ ವಿರುದ್ಧ ಪುಲಕೇಶಿ ನಗರ ಠಾಣಾ ಪೊಲೀಸರು ದಾಖಲಿಸಿದ್ದ ಎಫ್ಐಆರ್ ರದ್ದು ಪಡಿಸುವಂತೆ ಟ್ರಾವೆಲ್ ಏಜೆನ್ಸಿಯ ಪ್ರತಿನಿಧಿಗಳು ಎನ್ನಲಾದ ಅನಿತಾ ಸೊನ್ಯಾಸಿ ಹಾಗೂ ಆಲ್‌ಫಡ್ ವಿಲಿಯಂ ರಾಜೇಶ್ ಎಂಬುವರು ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದಿನೇಶ್ ಕುಮಾರ್ ಈ ಸೂಚನೆ ನೀಡಿದ್ದಾರೆ.
2013ರಲ್ಲಿ ಇಬ್ಬರು ಮಕ್ಕಳನ್ನು ಅರ್ಜಿದಾರರು ಅಮೆರಿಕಗೆ ಕರೆದೊಯ್ದು, ಅವರ ಪೋಷಕರ ವಶಕ್ಕೆ ನೀಡಿ ಬೆಂಗಳೂರಿಗೆ ವಾಪಸಾಗಿದ್ದರು ಎಂದು ಹೇಳಲಾಗಿದೆ. ಆದರೆ, ಅಮೆರಿಕದ ಕಾನ್ಸುಲೇಟ್, ಚೆನ್ನೈನ ಯುಎಸ್ ಕಾನ್ಸುಲೇಟ್ ಜೆನರಲ್‌ಗೆ ಪತ್ರ ಬರೆದು, ಬೆಂಗಳೂರಿನಿಂದ ಅಮೆರಿಕಗೆ ಮಕ್ಕಳ ಕಳ್ಳಸಾಗಣೆ ನಡೆಯುತ್ತಿದೆ. ನಕಲಿ ತಂದೆ-ತಾಯಿ ಹೆಸರಿನಲ್ಲಿ ಸುಳ್ಳು ವೀಸಾ ಹಾಗೂ ಪಾಸ್‌ಪೋರ್ಟ್ ತಯಾರಿಸಿ ಮಕ್ಕಳನ್ನು ತಂದು ಬಿಡಲಾಗುತ್ತಿದೆ ಎಂದು ತಿಳಿಸಿತ್ತು.
ಈ ಕುರಿತು 2013ರ ಮೇ 22ರಂದು ಚೆನ್ನೈನ ಯುಎಸ್ ಕಾನ್ಸುಲೇಟ್ ಜೆನರಲ್ ಪುಲಕೇಶಿನಗರ ಠಾಣೆಗೆ ಪತ್ರ ಬರೆದಿದ್ದರು. ಅದರಂತೆ ಪೊಲೀಸರು ಅಪರಿಚಿತರ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಮೂರು ದಿನಗಳ ನಂತರ ಪ್ರಕರಣದಲ್ಲಿ ಅರ್ಜಿದಾರರನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಅರ್ಜಿದಾರರು ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಎಫ್ಐಆರ್ ಪರಿಶೀಲಿಸಿದ ನ್ಯಾಯಮೂರ್ತಿಗಳು, ಪತ್ರಬಂದ ದಿನವೇ ವಿರುದ್ಧ ಎಫ್ಐಆರ್ ದಾಖಲಿಸಿರುವುದು ಸರಿಯಿದೆ. ಆದರೆ, ಮೂರು ದಿನಗಳ ನಂತರ ಅರ್ಜಿದಾರರ ಹೆಸರುಗಳನ್ನು ಯಾವ ಆಧಾರದ ಮೇಲೆ ಸೇರಿಸಲಾಗಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸರ್ಕಾರಿ ಅಭಿಯೋಜಕರಾದ ರಾಚಯ್ಯ ಅವರು, ಈ ಕುರಿತು ಪೊಲೀಸರಿಂದ ಮಾಹಿತಿ ಪಡೆದು ತಿಳಿಸುತ್ತೇನೆ ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ನಡೆಸಿ, ಸಾಕ್ಷ್ಯಾಧಾರ ಲಭ್ಯವಾದರೆ ದೊಷಾರೋಪ ಪಟ್ಟಿ ಸಲ್ಲಿಸಲಿ. ಪೊಲೀಸರ ತನಿಖೆಯಲ್ಲಿ ಕೋರ್ಟ್ ಹಸ್ತಕ್ಷೇಪ ಮಾಡುವುದಿಲ್ಲ. ಪ್ರಕರಣದಲ್ಲಿ ಯಾವ ಆಧಾರದ ಮೇಲೆ ಆರೋಪಿಗಳನ್ನಾಗಿ ಮಾಡಲಾಗಿದೆ ಎಂಬುದು ತಿಳಿಸಿಲ್ಲ. ಮೂರೇ ದಿನಗಳಲ್ಲಿ ಅರ್ಜಿದಾರರನ್ನು ಆರೋಪಿಗಳನ್ನಾಗಿ ಸೇರಿಸುವುದರ ಹಿಂದೆ ಬೇರೆ ಏನೋ ವಿಷಯವಿದೆ. ಹೀಗಾಗಿ ಎಫ್ಐಆರ್ ಕುರಿತು ಸಂಪೂರ್ಣ ವಿವರಣೆ ನೀಡುವಂತೆ ಸೂಚಿಸಿ, ಸೆ.18ಕ್ಕೆ ವಿಚಾರಣೆ ಮುಂದೂಡಿತು.