ಬೆಂಗಳೂರು: ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ವ್ಹೀಲ್ ಚೇರ್ (ಗಾಲಿ ಕುರ್ಚಿ) ಸಿಗದೇ ಎರಡು ದಿನ ದೂರದ ಲಂಡನ್ ವಿಮಾನ ನಿಲ್ದಾಣದಲ್ಲೇ ಉಳಿದುಕೊಂಡು ಇನ್ನಿಲ್ಲದ್ದ ಕಷ್ಟ ಅನುಭವಿಸಿದ ವಿಕಲಚೇತನ ವೈದ್ಯೆಯೊಬ್ಬರಿಗೆ ಹೈಕೋರ್ಟ್ ನ್ಯಾಯ ಒದಗಿಸಿದೆ.
ವೈದ್ಯರ ಸಂಕಷ್ಟಕ್ಕೆ ಕಾರಣವಾದ ಏರ್ ಇಂಡಿಯಾ ಸಂಸ್ಥೆಯ ಕಾರ್ಯವೈಖರಿಗೆ ಅಸಮಧಾನ ವ್ಯಕ್ತಪಡಿಸಿ, ಪರಿಹಾರ ರೂಪದಲ್ಲಿ 5 ಲಕ್ಷ ರೂ. ಮೊತ್ತವನ್ನು ಠೇವಣಿ ಇಡುವಂತೆ ಸೂಚಿಸಿದೆ. ಬೆಂಗಳೂರಿನ ಮುನೇಶ್ವರ ಬ್ಲಾಕ್ ನಿವಾಸಿ ಡಾ. ರಾಜಲಕ್ಷ್ಮೀ ಸಲ್ಲಿಸಿರುವ ರಿಟ್ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾ. ವಿನೀತ್ ಕೊಠಾರಿ ಅವರಿದ್ದ ಏಕಸದಸ್ಯ ಪೀಠ, ಈ ನಿರ್ದೇಶನ ನೀಡಿತು.
ಎಚ್ಚರಿಕೆ: ವಿಚಾರಣೆ ವೇಳೆ ಅರ್ಜಿದಾರರು ವಿಶೇಷ ಚೇತನರಾಗಿದ್ದು, ದೂರದ ಊರಲ್ಲಿ ತಮಗಾದ ಅನ್ಯಾಯವನ್ನು ತೋಡಿಕೊಂಡರು. ಅಲ್ಲದೆ, ಅರ್ಜಿದಾರರು, ಏರ್ ಇಂಡಿಯಾ ಸಂಸ್ಥೆಯ ಅಸಮರ್ಪಕ ಸೇವೆಯಿಂದ ಅನಾರೋಗ್ಯಕ್ಕೆ ಒಳಗಾಗಿದ್ದನ್ನು ವಿವರಿಸಿದರು.
ಇದೊಂದು ಗಂಭೀರ ವಿಚಾರವಾಗಿದ್ದು ಅವರು ಕೋರಿರುವ ಪರಿಹಾರ ಸಂಬಂಧ ಪ್ರತಿವಾದಿಯಾಗಿರುವ ಏರ್‌ಇಂಡಿಯಾ ಸಂಸ್ಥೆ ಮುಂದಿನ ಎರಡು ವಾರಗಳಲ್ಲಿ ಐದು ಲಕ್ಷ ರೂ.ಗಳನ್ನು ಹೈಕೋರ್ಟ್ ರಿಜಿಸ್ಟ್ರಾರ್ ಬಳಿ ಠೇವಣಿ ಇಡಬೇಕು. ಒಂದು ವೇಳೆ ಈ ಆದೇಶ ಉಲ್ಲಂ ಸಿದರೆ ಸಂಸ್ಥೆಯ ನಿರ್ದೇಶಕರ ಖುದ್ದು ಹಾಜರಿಗೆ ಆದೇಶಿಸಬೇಕಾಗುತ್ತದೆ ಎಂದು ಎಚ್ಚರಿಸಿದ ನ್ಯಾಯಪೀಠ, ವಿಚಾರಣೆಯನ್ನು ಏ.3ಕ್ಕೆ ಮುಂದೂಡಿತು.
ಎರಡು ದಿನ ಏರ್‌ಪೋರ್ಟ್‌ನಲ್ಲಿಯೇ ಸಂಕಷ್ಟ!: ವಿಶೇಷ ಚೇತನ (ಎರಡೂ ಕಾಲು ಅಂಗವೈಕಲ್ಯ) ಆಗಿರುವ ನಾನು ಡಾ. ಎಸ್.ಜೆ ರಾಜಲಕ್ಷ್ಮೀ ಮತ್ತು ನನ್ನ ತಾಯಿ 2016ರ ಜುಲೈನಲ್ಲಿ ಯುರೋಪ್ ಪ್ರವಾಸ ಯೋಜನೆ ಹಾಕಿಕೊಂಡಿದ್ದು, ಅದರಂತೆ, ಇಬ್ಬರೂ ಏರ್ ಇಂಡಿಯಾ ವಿಮಾನದ ಮೂಲಕ ಜುಲೈ 19ರಂದು ಲಂಡನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದೇವು. ನನ್ನ ಸ್ಪೆಷಲ್ ವ್ಹೀಲ್ ಚೇರನ್ನು ವಿಮಾನ ಸಿಬ್ಬಂದಿ ಇಲ್ಲಿಯೇ ಬಿಟ್ಟಿದ್ದರು.
ಹೀಗಾಗಿ, ವಿಮಾನ ಇಳಿದ ಕೂಡಲೇ ವ್ಹೀಲ್ ಚೇರ್ ನೀಡುವಂತೆ ಕೇಳಿದರೂ, ಸ್ಪಂದಿಸಲಿಲ್ಲ. ಪರಿಣಾಮ ಸ್ಪೆಷಲ್ ಚೇರ್ ಸಿಗದೇ, ಎರಡು ದಿನಗಳ ಕಾಲ ಲಂಡನ್ ವಿಮಾನ ನಿಲ್ದಾಣದಲ್ಲಿಯೇ ಉಳಿಯಬೇಕಾಯಿತು. ಇದರಿಂದ ಸ್ಕಾಟ್ಲೆಂಡ್ ಪ್ರವಾಸ ಮೊಟಕುಗೊಳಿಸಬೇಕಾಯಿತು. ಇದೇ ವೇಳೆ ನಾನು ಅನಾರೋಗ್ಯಕ್ಕೆ ತುತ್ತಾದೆ. ಇದಕ್ಕೆಲ್ಲ ವಿಮಾನ ನಿಲ್ದಾಣದ ಬೇಜವಾಬ್ದಾರಿತನವೇ ಕಾರಣ. ಹೀಗಾಗಿ ವಿಮಾನ ಸಂಸ್ಥೆಯಿಂದ ಪರಿಹಾರ ಕೊಡಿಸಬೇಕು ಎಂದು ಕೋರಿದ್ದಾರೆ.
ಅಲ್ಲದೇ ವಿಮಾನ ಪ್ರಯಾಣಕ್ಕೆ ಟಿಕೆಟ್ ಬುಕ್ ಮಾಡಿಕೊಟ್ಟು, ಲಂಡನ್‌ಲ್ಲಿ ಸರಿಯಾದ ಹೋಟೆಲ್ ವ್ಯವಸ್ಥೆ ಕಲ್ಪಿಸದೆ ತೊಂದರೆ ನೀಡಿರುವ ಈಜಿ ಡ್ರೈವ್ ಟೂರ್ ಅಂಡ್ ಟ್ರಾವೆಲ್ಸ್ ಸಂಸ್ಥೆಯನ್ನೂ ಸಹ ಪ್ರಕರಣದಲ್ಲಿ ಪ್ರತಿವಾದಿಯನ್ನಾಗಿಸಿದ್ದು, ಅವರಿಂದಲೂ ಪರಿಹಾರ ಕೊಡಿಸುವಂತೆ ಕೋರಲಾಗಿದೆ.