Advertisement
ಈ ಕುರಿತು ಮಂಗಳವಾರ ತೀರ್ಪು ನೀಡಿರುವ ನ್ಯಾಯಮೂರ್ತಿ ರವಿ ಮಳೀಮಠ ಹಾಗೂ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರಿದ್ದ ವಿಭಾಗೀಯ ಪೀಠ, ಪ್ರಕರಣದ ಆರೋಪಿಗಳಾದ ತೆಲಗಿ, ನಿವೃತ್ತ ವೈದ್ಯರಾದ ಡಾ. ಕೆ.ಎಚ್.ಜ್ಞಾನೇಂದ್ರಪ್ಪ, ಡಾ. ಕೆ.ಎಂ.ಚನ್ನಕೇಶವ ಅವರನ್ನು ಖುಲಾಸೆಗೊಳಿಸಿದೆ.
Related Articles
“ನಕಲಿ ಛಾಪಾ ಕಾಗದ ಹಗರಣದಲ್ಲಿ ಭಾಗಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಕರೀಂಲಾಲ್ ತೆಲಗಿ, ಬಿಪಿ, ಶುಗರ್ ಸೇರಿದಂತೆ ಇನ್ನಿತರೆ ಕಾಯಿಲೆಗಳಿಂದ ಬಳಲುತ್ತಿದ್ದು, ರಕ್ತದ ವಾಂತಿ ಮಾಡಿಕೊಂಡಿರುತ್ತಾನೆ. ಹೀಗಾಗಿ ಆತನಿಗೆ ವೈದ್ಯಕೀಯ ಪರೀಕ್ಷೆ ನಡೆಸುವ ಅಗತ್ಯವಿದೆ ಎಂದು ಅಂದಿನ ಜೈಲು ಅಧೀಕ್ಷಕರು ವಿಕ್ಟೋರಿಯಾ ಆಸ್ಪತ್ರೆಯ ಮುಖ್ಯಸ್ಥರಿಗೆ ಪತ್ರ ಬರೆಯುತ್ತಾರೆ.
Advertisement
ಹೀಗಾಗಿ ತೆಲಗಿಯನ್ನು ತಪಾಸಣೆ ನಡೆಸುವ ಮುಖ್ಯ ವೈದ್ಯಾಧಿಕಾರಿ ಡಾ. ಕೆ.ಎಚ್.ಜ್ಞಾನೇಂದ್ರಪ್ಪ, ಮಧುಮೇಹ ವಿಭಾಗದ ಡಾ. ಕೆ.ಎಂ.ಚನ್ನಕೇಶವ ಆರೋಪಿ ತೆಲಗಿ ಎಚ್‌ಐವಿ, ಹೃದ್ರೋಗ ಸೇರಿದಂತೆ ವಯೋಸಹಜ ಗಂಭೀರ ಕಾಯಿಲೆಗಳು ಹಾಗೂ ಮಾನಸಿಕ ಖನ್ನತೆಯಿಂದ ಬಳಲುತ್ತಿದ್ದಾನೆ.
ಹೀಗಾಗಿ ಆತನಿಗೆ ಮನೆಯ ವಾತಾವರಣದಲ್ಲಿ ವಾಸಿಸುವಂತೆ ಅನುಕೂಲ ಕಲ್ಪಿಸುವ ಅಗತ್ಯವಿದೆ, ಇಲ್ಲವಾದರೇ ಆತ ಮೃತಪಡುವ ಸಾಧ್ಯತೆಗಳಿವೆ’ ಎಂಬ ವಿವರಗಳನ್ನೊಳಗೊಂಡ ವೈದ್ಯಕೀಯ ಪ್ರಮಾಣಪತ್ರವನ್ನು 2002 ಜೂನ್ 6ರಂದು ಹಾಗೂ ಸೆಪ್ಟೆಂಬರ್ ತಿಂಗಳಿನಲ್ಲಿ ನೀಡಿರುತ್ತಾರೆ.
ಆದರೆ ವೈದ್ಯರು ನೀಡಿದ್ದ ಈ ಪ್ರಮಾಣಪತ್ರವನ್ನೇ ಮೂಲಾಧಾರವಾಗಿಟ್ಟುಕೊಂಡು ತೆಲಗಿ ಸಲ್ಲಿಸುವ ಜಾಮೀನು ಅರ್ಜಿಯನ್ನು ಸಿಬಿಐ ವಿಶೇಷ ನ್ಯಾಯಾಲಯ ವಜಾಗೊಳಿಸಿತ್ತು. ಈ ಸಂಬಂಧ ತನಿಖೆ ನಡೆಸುತ್ತಿದ್ದ ಸಿಬಿಐ ಪೊಲೀಸರು, ಆಸ್ಪತ್ರೆ ವೈದ್ಯರಿಬ್ಬರೂ ತೆಲಗಿಗೆ ಜಾಮೀನು ಕೊಡಿಸುವ ಸಲುವಾಗಿ ಸುಳ್ಳು ವೈದ್ಯಕೀಯ ಪ್ರಮಾಣ ಪತ್ರ ನೀಡಿದ್ದಾರೆ.
ಈ ಕಾರ್ಯಕ್ಕೆ ತೆಲಗಿ ಸಹಚರನಿಂದ ಲಂಚ ಸ್ವೀಕರಿಸಿದ್ದಾರೆ ಎಂಬ ಆರೋಪದಲ್ಲಿ ವೈದ್ಯರಾದ ಜ್ಞಾನೇಂದ್ರಪ್ಪ, ಚನ್ನಕೇಶವ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು ತೆಲಗಿ ಸೇರಿದಂತೆ ಮೂವರ ವಿರುದ್ಧವೂ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಸಿಬಿಐ ವಿಶೇಷ ನ್ಯಾಯಾಲಯ ತೆಲಗಿಗೆ 25 ಲಕ್ಷ ರೂ. ದಂಡ ಹಾಗೂ ಇಬ್ಬರು ವೈದ್ಯರಿಗೆ ತಲಾ 16 ಲಕ್ಷ ರೂ. ದಂಡ ಹಾಗೂ 7 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿತ್ತು. ಈ ಆದೇಶ ಪ್ರಶ್ನಿಸಿ ಮೂವರು ಪ್ರತ್ಯೇಕ ಮೇಲ್ಮನವಿಗಳನ್ನು ಸಲ್ಲಿಸಿದ್ದರು.