Advertisement

ಅಧ್ಯಕ್ಷ ಸ್ಥಾನದಲ್ಲಿ ಸಕ್ರಿಯರಾಗಿರಲು ಹೈಕಮಾಂಡ್‌ ಸೂಚಿಸಿಲ್ಲ : ದಿನೇಶ್‌ಗುಂಡೂರಾವ್‌

10:03 AM Jan 29, 2020 | sudhir |

ಬೆಂಗಳೂರು:ಕೆಪಿಸಿಸಿ ಅಧ್ಯಕ್ಷರ ನೇಮಕ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ಚುಟುವಟಿಕೆಗಳಲ್ಲಿ ಸಕ್ರೀಯರಾಗುವಂತೆ ಹೈಕಮಾಂಡ್‌ ಸೂಚಿಸಿದ ಹಿನ್ನೆಲೆಯಲ್ಲಿ ದಿನೇಶ್‌ ಗುಂಡೂರಾವ್‌ ಮಂಗಳವಾರ ಪಕ್ಷದ ಕಚೇರಿಯಲ್ಲಿ ಅಧಿಕೃತ ಸಭೆ ನಡೆಸಿದರು.

Advertisement

ರಾಜ್ಯಾದ್ಯಂತ ಕಾಂಗ್ರೆಸ್‌ ಆಸ್ತಿ ಪಾಸ್ತಿಯ ವಾಸ್ತವ ಸ್ಥಿತಿಗತಿ ಕುರಿತು ಎಐಸಿಸಿ ವತಿಯಿಂದ ಮಾಹಿತಿ ನೀಡುವಂತೆ ಸೂಚಿಸಿರುವುದರಿಂದ ಬೆಂಗಳೂರು ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳಲ್ಲಿ ಪಕ್ಷದ ಆಸ್ತಿಯ ಬಗ್ಗೆ ಮಾಹಿತಿ ಪಡೆಯಲು ಜಿಲ್ಲಾಧ್ಯಕ್ಷರುಗಳ ಸಭೆ ನಡೆಸಿದರು.

ಸಭೆಯ ನಂತರ ಮಾತನಾಡಿದ ದಿನೇಶ್‌ ಗುಂಡೂರಾವ್‌, ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವಂತೆ ಹೈಕಮಾಂಡ್‌ನಿಂದ ಯಾವುದೇ ಸೂಚನೆ ಇಲ್ಲ.

ಹೈಕಮಾಂಡ್‌ ಅಧ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ ನಾಯಕರ ನೇಮಕವನ್ನು ಆದಷ್ಟು ಬೇಗ ಮಾಡಬೇಕು. ನಾಯಕತ್ವದ ಬಗ್ಗೆ ಯಾವುದೇ ನಾಯಕರು ಬಹಿರಂಗ ಹೇಳಿಕೆ ನೀಡುವುದು ಸರಿಯಲ್ಲ. ಶಾಸಕಾಂಗ ನಾಯಕ ಹಾಗೂ ಪ್ರತಿಪಕ್ಷದ ನಾಯಕನ ಸ್ಥಾನ ವಿಭಜಿಸುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಹೈಕಮಾಂಡ್‌ ತೀರ್ಮಾನ ತೆಗೆದುಕೊಳ್ಳುವವರೆಗೂ ಈ ರೀತಿಯ ಹೇಳಿಕೆಗಳು ಸಹಜ ಎಂದು ಹೇಳಿದರು.

ಇದೇ ವೇಳೆ, ಬಿಜೆಪಿ ಸರ್ಕಾರದ ಸಂಪುಟ ವಿಸ್ತರಣೆ ವಿಳಂಬದ ಬಗ್ಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಬಿಜೆಪಿಯ ಆಂತರಿಕ ವಿಚಾರವಾಗಿದ್ದರೂ, ಅದು ಸರ್ಕಾರಕ್ಕೆ ಸಂಬಂಧಿಸಿರುವುದರಿಂದ ರಾಜ್ಯದ ಜನತೆಗೆ ಸಂಬಂಧಿಸಿದ್ದಾಗಿದೆ. ಸಂಪುಟ ವಿಸ್ತರಣೆ ವಿಳಂಬವಾಗುವುದರಿಂದ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಆಡಳಿತದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು.

Advertisement

ಪರಿಷತ್‌ಗೆ ಅಭ್ಯರ್ಥಿ ಇಲ್ಲ: ರಿಜ್ವಾನ್‌ ಅರ್ಷದ್‌ ಅವರಿಂದ ತೆರವಾಗಿರುವ ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ವಿಧಾನಸಭೆಯಲ್ಲಿ ಸಂಖ್ಯಾ ಬಲದ ಕೊರತೆ ಇರುವುದರಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎಂದು ಹೇಳಿದರು.

ಸಂಪುಟ ವಿಳಂಬಕ್ಕೆ ಮೋದಿ-ಶಾ ನಡುವೆ ಭಿನ್ನಾಭಿಪ್ರಾಯ:ಖಂಡ್ರೆ
ರಾಜ್ಯ ಸಚಿವ ಸಂಪುಟ ವಿಸ್ತರಣೆಯ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ನಡುವೆ ಭಿನ್ನಾಭಿಪ್ರಾಯ ಇರುವುದರಿಂದ ವಿಸ್ತರಣೆ ವಿಳಂಬವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದಿದೆ. ಆಡಳಿತ ಯಂತ್ರ ಸಂಪೂರ್ಣ ಕುಸಿದು ಹೋಗಿದೆ. ರಾಜ್ಯದ ಅಭಿವೃದ್ಧಿ ಶೂನ್ಯ ಸ್ಥಿತಿ ತಲುಪಿದೆ. ಚುನಾವಣೆ ಸಂದರ್ಭದಲ್ಲಿ ಅಭಿವೃದ್ಧಿ ಸಲುವಾಗಿ ಸಚಿವರನ್ನಾಗಿ ಮಾಡುತ್ತೇವೆ ಎಂದು ಹೇಳಿದ್ದ ಬಿಜೆಪಿಯವರು ಈಗ ಸಂಪುಟ ವಿಸ್ತರಣೆ ಮಾಡದೇ ದಿನ ದೂಡುತ್ತಿದ್ದಾರೆ. ರಾಜೀನಾಮೆ ಕೊಡಿಸುವಾಗ ಎಲ್ಲರನ್ನು ಸಚಿವರನ್ನಾಗಿ ಮಾಡುವುದಾಗಿ ಹೇಳಿ ಈಗ ಎಲ್ಲರನ್ನು ಸಚಿವರನ್ನಾಗಿ ಮಾಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಅವರನ್ನು ಕರೆದುಕೊಂಡು ಹೋಗುವಾಗ ಇದು ಗೊತ್ತಿರಲಿಲ್ಲವೇ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಹಲವಾರು ಯೋಜನೆಗಳು ನೆನೆಗುದಿಗೆ ಬಿದ್ದಿವೆ. ರಾಜ್ಯದಲ್ಲಿ ನೆರೆ ಪೀಡಿತ ಪ್ರದೇಶದ ಜನರಿಗೆ ಸರಿಯಾದ ಪರಿಹಾರ ವಿತರಣೆಯಾಗಿಲ್ಲ. ಆರ್ಥಿಕ ಸಂಕಷ್ಟದಿಂದ ಅನೇಕ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಿಲ್ಲ. ಈ ಬಗ್ಗೆ ಮಾತನಾಡುವ ಬದಲು ಭಾವನಾತ್ಮಕ ವಿಷಯ ಮುಂದಿಟ್ಟು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next