ಸಾಗರ: ತಮ್ಮ ಕುಟುಂಬವನ್ನು ಬಿಟ್ಟು ದೇಶ ರಕ್ಷಣೆಗಾಗಿ ಗಡಿಯನ್ನು ಸದಾ ಕಟ್ಟೆಚ್ಚರದಿಂದ ಕಾಯುವ ವೀರಯೋಧರ ಕಾರ್ಯ ಅತ್ಯಂತ ಶ್ರೇಷ್ಠವಾದದ್ದು. ಮಕ್ಕಳನ್ನು ಡಾಕ್ಟರ್, ಇಂಜಿನಿಯರ್ ಮಾಡುವ ಬದಲು ದೇಶ ಕಾಯುವ ವೀರ ಸೈನಿಕರನ್ನಾಗಿ ಮಾಡುವ ಬಗ್ಗೆ ಪೋಷಕರು ಗಮನ ಹರಿಸಬೇಕು ಎಂದು ಹುತಾತ್ಮ ಯೋಧ ಉಮೇಶ್ ಪತ್ನಿ ವೀಣಾ ತಿಳಿಸಿದರು.
ನಗರದ ಬ್ರಾಸಂ ಸಭಾಭವನದಲ್ಲಿ ಪ್ರಾಂತ್ಯ ಮಾಜಿ ಯೋಧರ ಕಲ್ಯಾಣ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅನಾರೋಗ್ಯ ಬಂದಾಗ ನಮ್ಮನ್ನು ಕಾಪಾಡಿದ್ದು ವೈದ್ಯರು ಎನ್ನುವ ಮಾತನ್ನು ಜನರು ಹೇಳುತ್ತಾರೆ. ಆದರೆ ನಿಜವಾಗಿಯೂ ನಮ್ಮನ್ನು ಕಾಪಾಡುತ್ತಿರುವುದು ದೇಶದ ಗಡಿ ಕಾಯುತ್ತಿರುವ ಯೋಧರು ಎನ್ನುವುದನ್ನು ನಾವ್ಯಾರು ಮರೆಯಬಾರದು ಎಂದರು. ನನ್ನ ಪತಿ ಉಮೇಶ್ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ ಎನ್ನುವುದೇ ನನಗೆ ಹೆಮ್ಮೆಯ ಸಂಗತಿ. ಉಮೇಶ್ ಅವರು ದೇಶಕ್ಕಾಗಿ ತಮ್ಮನ್ನು ಸಮರ್ಪಣೆ ಮಾಡಿಕೊಂಡರೂ ಅವರ ನೆನಪಾಗಿ ಎರಡು ಮಕ್ಕಳು ನನ್ನ ಜೊತೆ ಇದ್ದಾರೆ. ಮಗನಿಗೆ ಈಗ ಐದು ವರ್ಷ. ಆತನನ್ನೂ ದೇಶಸೇವೆಗೆ ಸೈನಿಕನಾಗಿ ಕಳಿಸುವ ಉದ್ದೇಶ ನನ್ನದಾಗಿದೆ. ಐದು ವರ್ಷದ ಮಗ ಸಹ ಭಾರತೀಯ ಸೈನಿಕರ ಬಗ್ಗೆ ಈಗಲೇ ವಿಶೇಷ ಗೌರವ ಹೊಂದಿದ್ದಾನೆ ಎಂದು ತಿಳಿಸಿದರು.
ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುವ ಯೋಧರ ಪತ್ನಿಯಾಗಿ ಸಮಾಜದಲ್ಲಿ ಗುರುತಿಸಿಕೊಳ್ಳುವುದು ಅತ್ಯಂತ ಗೌರವದ ಸಂಕೇತವಾಗಿದೆ. ಜನರಲ್ಲಿ ಸೈನಿಕರ ಬಗ್ಗೆ ಗೌರವ ಭಾವನೆ ಇನ್ನಷ್ಟು ಹೆಚ್ಚಬೇಕು. ನಿಮ್ಮೆದುರು ದೇಶ ಕಾಯುವ ಸೈನಿಕರು ಬಂದಾಗ ಅವರಿಗೆ ಒಂದು ಸೆಲ್ಯೂಟ್ ಹೊಡೆಯಿರಿ. ಇದರಿಂದ ಅವರಲ್ಲಿ ದೇಶ ಸೇವೆ ಮಾಡುವ ಉತ್ಸಾಹ ಇಮ್ಮಡಿಗೊಳ್ಳುತ್ತದೆ. ಶತ್ರುಗಳು ದೇಶದ ಒಳಗೆ ನುಸುಳದಂತೆ ಸದಾ ಕಟ್ಟೆಚ್ಚರದಿಂದ ಕಾಯುತ್ತಿರುವ ಸೈನಿಕರ ಬಗ್ಗೆ ನಿಮ್ಮ ಪ್ರಾರ್ಥನೆ ಇರಲಿ ಎಂದು ಹೇಳಿದರು. ನಗರಸಭೆ ಅಧ್ಯಕ್ಷೆ ಉಷಾ ಎನ್. ಮಾತನಾಡಿ, ರಾಜಕೀಯ ವ್ಯಕ್ತಿಗಳು ತಮ್ಮ ಕುರ್ಚಿ ಉಳಿಸಿಕೊಳ್ಳಲು ಮಾಡುವ ಹೋರಾಟವನ್ನು ಬದಿಗಿಟ್ಟು ಸೈನಿಕರ ಹಿತವನ್ನು ಗಮನದಲ್ಲಿ ಇರಿಸಿಕೊಂಡು ಅವರಿಗೆ ಹಾಗೂ ಅವರ ಕುಟುಂಬಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಸಾಹಿತಿ ಡಾ| ನಾ.ಡಿಸೋಜಾ, ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಲಿಂಗಪ್ಪ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ. ಪರಮೇಶ್ವರ್, ನಿವೃತ್ತ ನೌಕರ ವೆಂಕಟರಮಣ ಆಚಾರ್, ನಗರ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಬಿ.ಎಲ್. ಜನಾರ್ದನ್, ನೇತಾಜಿ ಸುಭಾಶ್ಚಂದ್ರ ಯುವ ಸೇನೆ ಅಧ್ಯಕ್ಷ ಸುಭಾಷ್ ಕೌತಳ್ಳಿ, ಮೃತ್ಯುಂಜಯ ಶಾಸ್ತ್ರಿ, ತೋಟಗಾರ್ ಸೊಸೈಟಿ ಅಧ್ಯಕ್ಷ ಕೆ.ಸಿ.ದೇವಪ್ಪ ಇದ್ದರು.
ಭಾಗಿರಥಿ ಪ್ರಾರ್ಥಿಸಿದರು. ಶೃತಿ ಶ್ರೀನಾಥ್ ದೇಶಭಕ್ತಿ ಗೀತೆ ಹಾಡಿದರು. ರಂಗರಾಜು ಬಾಳೆಗುಂಡಿ ಸ್ವಾಗತಿಸಿದರು. ಅಣ್ಣಪ್ಪ ಡಿ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಷ್ಣು ಹೆಗಡೆ ನಿರೂಪಿಸಿದರು. ಇದಕ್ಕೂ ಮೊದಲು ಮಾಜಿ ಯೋಧರು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು,
ಶಾಲಾ- ಕಾಲೇಜು ವಿದ್ಯಾರ್ಥಿಗಳಿಂದ ನಗರದ ಪ್ರಮುಖ ಬೀದಿಗಳಲ್ಲಿ ಕಾರ್ಗಿಲ್ ವಿಜಯೋತ್ಸವದ ನೆನಪಿನಾರ್ಥ ಪಥ ಸಂಚಲನ ನಡೆಯಿತು.