Advertisement

ಕಾಯಕ ನಿಷ್ಠೆ ಮೆರೆಯುತ್ತಿರುವ ವೈದ್ಯರು, ದಾದಿಯರು

09:13 AM Apr 06, 2020 | Sriram |

ಮಂಗಳೂರು: “ಸರಿಯಾದ ಸಮಯಕ್ಕೆ ಊಟವಿಲ್ಲ, ಬಿಡುವು ದೂರದ ಮಾತು… ಸಿಕ್ಕ ಅಲ್ಪ ವೇಳೆಯಲ್ಲಿ ನಿದ್ರಿಸಲೂ ಬಿಡದ ದೂರವಾಣಿ ಕರೆಗಳು… ಮನೆಯವರ ಮುಖ ನೋಡದೆ ಎಷ್ಟೋ ದಿನವಾಯ್ತು!’

Advertisement

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಕೋವಿಡ್ 19  ಪಾಸಿಟಿವ್‌ ಪ್ರಕರಣ ದಾಖಲಾದಾಗಿನಿಂದ ನಿಯಂತ್ರಣಕ್ಕೆ ಹೋರಾಡುತ್ತಿರುವ ಆರೋಗ್ಯ ಇಲಾಖೆಯಲ್ಲಿ ದುಡಿಯುವ ವೈದ್ಯರು, ನರ್ಸ್‌ಗಳಿಂದ ಹಿಡಿದು ಸಿಬಂದಿ ವರೆಗಿನ ಉದ್ಯೋಗಿಗಳ ಮಾತಿದು. ಆದರಿದು ಸೇವೆ ಎನ್ನುತ್ತಲೇ ಕಾಯಕನಿಷ್ಠೆ ಮೆರೆಯುತ್ತಾರೆ ಆರೋಗ್ಯ ಸಿಬಂದಿ.

ದ.ಕ. ಜಿಲ್ಲಾ ವೆನ್ಲಾಕ್‌  ಆಸ್ಪತ್ರೆಯನ್ನು ಸಂಪೂರ್ಣ ಕೋವಿಡ್‌-19 ಚಿಕಿತ್ಸೆಗೆ ಮೀಸಲಿಡಲಾಗಿದೆ. ಸದ್ಯ ಜಿಲ್ಲೆಯಲ್ಲಿ 8 ಮಂದಿ ಕೋವಿಡ್ 19
ಸೋಂಕಿತ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಮೂವರು ಇತರಆಸ್ಪತ್ರೆಗಳಲ್ಲಿದ್ದರೆ, ಐವರು ವೆನ್ಲಾಕ್‌ ನಲ್ಲೇ ಚಿಕಿತ್ಸಾ ನಿರತರಾಗಿದ್ದಾರೆ. ಇವರೆಲ್ಲರನ್ನು ಗುಣಪಡಿಸುವ ಭಾರ ವೈದ್ಯರು ಮತ್ತು ದಾದಿಯರ ಮೇಲಿದೆ. ಮೈಯೆಲ್ಲ ಕಣ್ಣಾಗಿಸಿಕೊಂಡು ಕಾಯಬೇಕಾದ ಅತಿ ಒತ್ತಡದ ಪರಿಸ್ಥಿತಿಯಲ್ಲಿ ಅವರಿದ್ದಾರೆ. ಚಿಕಿತ್ಸೆ ನೀಡುವಾಗಸ್ವಲ್ಪ ಎಚ್ಚರ ತಪ್ಪಿದರೂ ಚಿಕಿತ್ಸೆ ನೀಡಿದವರಿಗೇ ಹರಡುವ ಸಾಧ್ಯತೆ ಇರುತ್ತದೆ. ಹೀಗಿರುವಾಗ ಅತಿ ಎಚ್ಚರಿಕೆಯೊಂದಿಗೆ ಕೆಲಸ ಮಾಡಲೇಬೇಕಾದ ಅನಿವಾರ್ಯತೆ ವೈದ್ಯರು ಮತ್ತು ನರ್ಸ್‌ ಗಳದ್ದಾಗಿದೆ.

ವೆನ್ಲಾಕ್‌ ನಲ್ಲಿ ಕೋವಿಡ್‌-19 ಚಿಕಿತ್ಸೆ ಗೆಂದೇ ವೈದ್ಯರೊಂದಿಗೆ 120ಕ್ಕೂ ಹೆಚ್ಚು ನರ್ಸ್‌ಗಳಿದ್ದಾರೆ. ಹೊಸದಾಗಿ ಆರಂಭವಾಗಲಿರುವ ಗಂಟಲ ಸ್ರಾವ ಮಾದರಿ ಪರೀಕ್ಷೆ ಪ್ರಯೋಗಾಲಯದಲ್ಲಿ ಇಬ್ಬರು ವೈದ್ಯರು ಸಹಿತ ಐವರು ಸಿಬಂದಿ ಇದ್ದಾರೆ.

ಹುಡುಕಾಟದ ಸವಾಲು
ದ.ಕ. ಆರೋಗ್ಯ ಇಲಾಖೆಯ 3,903 ಮಂದಿ ಸಿಬಂದಿ ಪ್ರಸ್ತುತ ಕೋವಿಡ್‌-19 ಜಾಗೃತಿ, ಚಿಕಿತ್ಸೆ ಸೇರಿದಂತೆ ಕ್ಷೇತ್ರ ಕಾರ್ಯಕ್ಕಿಳಿದಿದ್ದಾರೆ. ಇದರಲ್ಲಿ ಆಶಾ ಕಾರ್ಯಕರ್ತೆಯರು, ಕಿರಿಯ ಆರೋಗ್ಯ ಸಹಾಯಕಿಯರು, ಆರೋಗ್ಯ ಸಹಾಯಕರು, ವೈದ್ಯರು, ನರ್ಸ್‌ಗಳು ಎಲ್ಲರೂ ಇದ್ದಾರೆ. 100ಕ್ಕೂಹೆಚ್ಚು ಮಂದಿ ತಾಲೂಕು ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ವಿದೇಶದಿಂದ ಬಂದವರ ಹುಡುಕಾಟ, ಅವರನ್ನು ಮನೆಯಲ್ಲೇ ಇರುವಂತೆ ತಿಳಿಹೇಳುವುದು ಸೇರಿದಂತೆ ಸವಾಲಿನೊಂದಿಗೆ ಕೆಲಸಗಳಿವೆ. ಆದರೆ ಮಂಗಳೂರಿನಲ್ಲಿ ಬಹುತೇಕರು ನಾವು ಹೇಳಿದ್ದನ್ನು ಕೇಳುತ್ತಾರೆ. ಇದು ಖುಷಿಯಾಗುತ್ತದೆ ಎನ್ನುತ್ತಾರೆ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು.

Advertisement

ವಿಶ್ರಾಂತಿಯಿಲ್ಲದ ದಿನಗಳು
ಕೋವಿಡ್‌-19 ಹೋರಾಟ ಆರಂಭವಾದಂದಿನಿಂದ ಹೊತ್ತು ಗೊತ್ತಿಲ್ಲದ ಸಮಯಕ್ಕೆ ಮನೆಗೆ ಹೋಗುವುದು, ಮನೆಮಂದಿ ಏಳುವುದಕ್ಕಿಂತ ಮುಂಚೆಯೇ ಹೊರಟು ಬರುವುದು ನಡೆದಿದೆ. ಮನೆಗೆ ಹೋದವರೇ ನೇರ ಸ್ನಾನಕ್ಕೆ ತೆರಳಿ ತೊಟ್ಟ ಬಟ್ಟೆಯನ್ನು ಬಿಸಿನೀರಿನಲ್ಲಿ ಒಗೆದು ಸ್ನಾನ ಮಾಡಿ ಒಳ ಹೋಗಬೇಕಿದೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಸಿಬಂದಿಯೋರ್ವರು.

ಕೋವಿಡ್‌-19 ಜಾಗೃತಿಗಾಗಿ ಹೋಂ ಕ್ವಾರೆಂಟೈನ್‌ ಆಗಿರುವವರ ಮನೆ ಭೇಟಿ ಇರುತ್ತದೆ. ಪ್ರತಿದಿನ ಅವರ ಆರೋಗ್ಯ ವಿಚಾರಿಸಬೇಕು. ಮನೆ ಭೇಟಿ ಸಂದರ್ಭ ಸವಾಲಿನದ್ದೇ ಆಗಿರುತ್ತದೆ. ಆದರೆ ಅಪಾಯದ ನಡುವೆಯೂ ಇದೊಂದು ನಮ್ಮ ಸೇವೆ ಎಂದುಕೊಂಡು ಕೆಲಸ ಮಾಡುತ್ತೇವೆ.
– ಶರ್ಲಿ ಕುರಿಯನ್‌,
ಕಿರಿಯ ಮಹಿಳಾ ಆರೋಗ್ಯ ಸಹಾಯಕಿ

Advertisement

Udayavani is now on Telegram. Click here to join our channel and stay updated with the latest news.

Next