ಹುಬ್ಬಳ್ಳಿ: ಶ್ರೀಕ್ಷೇತ್ರ ಧರ್ಮಸ್ಥಳವು ದೇಶದಲ್ಲೇ ಅತ್ಯುನ್ನತವಾದ “ಸ್ವತ್ಛ ಧಾರ್ಮಿಕ ನಗರಿ’ ಎಂಬ ಪ್ರಶಸ್ತಿಗೆ ಭಾಜನವಾದ ಹಿನ್ನೆಲೆಯಲ್ಲಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಶ್ರದ್ಧಾ ಕೇಂದ್ರಗಳಲ್ಲಿ ಸ್ವತ್ಛತಾ ಪ್ರೇರಣಾ ಕಾರ್ಯಕ್ರಮವನ್ನು ಜ.13ರಂದು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್ ಎಂ. ಹೇಳಿದರು.
ಇಲ್ಲಿನ ಹಳೇಹುಬ್ಬಳ್ಳಿ ಅಕ್ಕಿಪೇಟೆಯ ಶ್ರೀ ಕೃಷ್ಣೇಂದ್ರ ಗುರು ಮಠದಲ್ಲಿ ಹಮ್ಮಿಕೊಂಡಿದ್ದ ಸ್ವತ್ಛತಾ ಪ್ರೇರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರದ್ಧಾ ಕೇಂದ್ರಗಳು ಗ್ರಾಮದ ಹೃದಯವಿದ್ದಂತೆ. ಶ್ರದ್ಧಾ ಕೇಂದ್ರಗಳು ಸ್ವತ್ಛವಾಗಿದ್ದರೆ ಮನಸು, ಹೃದಯ ಸ್ವತ್ಛವಾದಂತೆ.
ಇದರಿಂದ ಶಾಂತಿ, ನೆಮ್ಮದಿ, ಸಹಬಾಳ್ವೆ ಸಾಧ್ಯ. ಜಿಲ್ಲೆಯಲ್ಲಿ 279 ಸ್ವತ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈಗಾಗಲೇ 100ಕ್ಕೂ ಅಧಿಕ ಧಾರ್ಮಿಕ ಕೇಂದ್ರಗಳಲ್ಲಿ ಶ್ರದ್ಧಾಕೇಂದ್ರ ಕಾರ್ಯಕ್ರಮ ಮಾಡಲಾಗಿದೆ.
ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಈ ಅಭಿಯಾನಕ್ಕೆ ರಾಜ್ಯಾದ್ಯಂತ ಶ್ರದ್ಧಾಕೇಂದ್ರದ ಮುಖ್ಯಸ್ಥರು, ಆಡಳಿತ ಮಂಡಳಿಯವರು, ಗಣ್ಯರು, ಶ್ರೀಕ್ಷೆತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಸದಸ್ಯರು ಸ್ವಯಂ ಪ್ರೇರಣೆಯಿದ ಕೈಜೋಡಿಸುತ್ತಿದ್ದಾರೆ ಎಂದರು.
ಶ್ರೀ ಕೃಷ್ಣೇಂದ್ರಗುರು ಉತ್ಸವ ಸಂಸ್ಥೆಯ ನಿರ್ದೇಶಕ ಮನೋಜ ದೇಸಾಯಿ, ಶ್ರೀಕಾಂತ ದೇಶಪಾಂಡೆ, ಹುಬ್ಬಳ್ಳಿ ಯೋಜನಾಧಿಕಾರಿ ರೋಹಿತ್ ಎಚ್., ಮೇಲ್ವಿಚಾರಕ ಶಿವಾಜಿ, ಒಕ್ಕೂಟದ ಸದಸ್ಯರು, ಪದಾಧಿಕಾರಿಗಳು, ಸ್ವ-ಸಹಾಯ ಸಂಘದ ಸದಸ್ಯರು, ಸೇವಾಪ್ರತಿನಿಧಿಗಳು ಈ ಸಂದರ್ಭದಲ್ಲಿದ್ದರು.