Advertisement

ರಾಯಚೂರು ಮಂತ್ರಾಲಯದ ಹೃದಯ: ಸುಬುಧೇಂದ್ರ ಶ್ರೀ

12:24 PM Jul 30, 2018 | Team Udayavani |

ರಾಯಚೂರು: ಕಲಿಯುಗದ ಕಲ್ಪತರು ಶ್ರೀ ರಾಘವೇಂದ್ರ ಸ್ವಾಮಿಗಳು ನೆಲೆಸಿರುವ ಮಂತ್ರಾಲಯ ಮಠದ ಹೃದಯ ಭಾಗ ರಾಯಚೂರಾಗಿದೆ ಎಂದು ಶ್ರೀಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ನುಡಿದರು.

Advertisement

ಸ್ಥಳೀಯ ಜವಾಹರ ನಗರದ ರಾಯರ ಶಾಖಾಮಠದಲ್ಲಿ ರವಿವಾರ ಹಮ್ಮಿಕೊಂಡಿದ್ದ ತಪ್ತಮುದ್ರಾ ಧಾರಣೆ, ರಾಯರ ಬೃಂದಾವನಕ್ಕೆ ಬೆಳ್ಳಿ ಕಂಬಗಳ ಸಮರ್ಪಣೆ ಸಮಾರಂಭದಲ್ಲಿ ಶ್ರೀಪಾದಂಗಳವರು ಅನುಗ್ರಹ ಸಂದೇಶ ನೀಡಿದರು.

ಭಗವಂತನ ಪ್ರತೀಕವಾದ ಚಾತುರ್ಮಾಸ್ಯ ಸಮಯದಲ್ಲಿ ರಾಯರ ಸೇವೆ ಮಾಡುವುದರಿಂದ ಹೆಚ್ಚಿನ ಅನುಗ್ರಹ ಲಭಿಸಲಿದೆ. ಮಂತ್ರಾಲಯದಲ್ಲಿ ಶ್ರೀಗುರು ರಾಯರ ಮೂಲ ವೃಂದಾವನಕ್ಕೆ ಎಷ್ಟೊಂದು ಶಕ್ತಿಯಿದೆಯೋ ಅದೇ ರೀತಿ ರಾಜ್ಯ, ದೇಶದಲ್ಲಿರುವ ವಿವಿಧ ಶಾಖಾಮಠಗಳಲ್ಲಿ ಅಷ್ಟೇ ಪ್ರಮಾಣದ ಶಕ್ತಿಯಿದೆ. ಯಾವ ರೀತಿ ಒಂದು ದೀಪದಿಂದ ಲಕ್ಷಾಂತರ ದೀಪಗಳನ್ನು ಬೆಳಗಿಸಲಾಗುತ್ತದೋ, ಎಲ್ಲ ದೀಪಗಳು ಒಂದೇ ರೀತಿಯ ಪ್ರಕಾಶವನ್ನು ನೀಡುತ್ತವೆಯೋ ಅದೇ ರೀತಿ ರಾಯರು ತನ್ನ ಭಕ್ತರು ಯಾವುದೇ ಪ್ರದೇಶದಲ್ಲಿ ಸ್ಮರಿಸಿದರೂ ಅವರ ಕಷ್ಟಕಾರ್ಪಣ್ಯಗಳನ್ನು ದೂರ ಮಾಡಲಿದ್ದಾರೆ ಎಂದು ಹೇಳಿದರು.

ರಾಯಚೂರಿನಲ್ಲಿರುವ ಶಾಖಾಮಠವು ಶ್ರೀಮಠಕ್ಕೆ ಅತ್ಯಂತ ಆಪ್ತವಾದ ಪ್ರದೇಶವಾಗಿದೆ. ಹಿಂದಿನ ಯತಿಗಳಿಗೂ ಈ ಮಠವೆಂದರೇ ಸಾಕಷ್ಟು ಗೌರವವಿತ್ತು. ರಾಯಚೂರಿನ ಮಠವು ಎಲ್ಲರ ಸಹಕಾರ, ಸಂಘಟಿತ ಶ್ರಮದಿಂದ ಉತ್ತಮವಾಗಿ ಅಭಿವೃದ್ಧಿ ಹೊಂದಿದ್ದು, ಭಕ್ತರೆಲ್ಲರೂ ಸೇರಿಕೊಂಡು 50 ಕೆಜಿ ಬೆಳ್ಳಿ ಕಂಬವನ್ನು ಶ್ರೀಮಠಕ್ಕೆ ಸಮರ್ಪಿಸುವುದರ ಮೂಲಕ ರಾಯರ ಸೇವೆಯನ್ನು ಮಾಡಿದ್ದಾರೆ ಎಂದು ನುಡಿದರು.

ಇದಕ್ಕೂ ಮುನ್ನ ಸ್ಥಳೀಯ ನಗರೇಶ್ವರ ದೇವಸ್ಥಾನದಲ್ಲಿ ಶ್ರೀಮಠದ ಪೀಠಾಧಿಪತಿಗೆ ಭಕ್ತರು ಗೌರವ ಸಮರ್ಪಣೆ ಮಾಡಿದರು. ನಂತರ ಶೋಭಾಯಾತ್ರೆ ಮೂಲಕ ರಾಯರ ಮಠಕ್ಕೆ ತೆರಳಿದ ಶ್ರೀಗಳು ಭಕ್ತರಿಗೆ ತಪ್ತಮುದ್ರಾ ಧಾರಣೆ ಮಾಡಿ 50 ಕೆಜಿ ಬೆಳ್ಳಿ ಕಂಬವನ್ನು ರಾಯರ ಬೃಂದಾವನಕ್ಕೆ ಸಮರ್ಪಿಸಿದರು. ಬಳಿಕ ಮೂಲ ರಾಮದೇವರಿಗೆ ವಿಶೇಷ ಪೂಜೆ, ಮಠದ ಪ್ರಾಂಗಣದಲ್ಲಿ ರಥೋತ್ಸವ ನೆರವೇರಿಸಲಾಯಿತು. ನಂತರ ನಗರದ ಕೋಟೆ ಮುಂಗ್ಲಿ ಪ್ರಾಣದೇವರ ದೇವಸ್ಥಾನಕ್ಕೆ ಆಗಮಿಸಿದ ಶ್ರೀುಗಳು ವಿಶೇಷ ಪೂಜೆ ಮಾಡಿ ಭಕ್ತರಿಗೆ ತಪ್ತ ಮುದ್ರಾ ಧಾರಣೆ ಮಾಡಿದರು.

Advertisement

ಶ್ರೀಮಠದ ವಿದ್ವಾನ್‌ ಡಾ| ರಾಜಾ ಎಸ್‌. ಗಿರಿಯಾಚಾರ್ಯ, ಶ್ರೀ ಗುರುಸಾರ್ವಭೌಮ ವಿದ್ಯಾಪೀಠದ ಪ್ರಾಚಾರ್ಯ ಡಾ|
ವಾದಿರಾಜಾಚಾರ್ಯ ಸೇರಿದಂತೆ ವಿದ್ವಾಂಸರು, ಪಂಡಿತರು, ರಾಯರ ಭಕ್ತರು, ಮಹಿಳೆಯರು, ಮಕ್ಕಳು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು. 

ರಾಯರ ಚೂರು ರಾಯಚೂರಾಗಿ ಮಾರ್ಪಟ್ಟಿದೆ. ಹರಿದಾಸ ಸಾಹಿತ್ಯವನ್ನು ಇಡೀ ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ರಾಯಚೂರಿಗೆ ಸಲ್ಲುತ್ತದೆ. ಗೋಪಾಲದಾಸರು, ವಿಜಯದಾಸರು, ಜಗನ್ನಾಥದಾಸರು ಸೇರಿದಂತೆ ಅನೇಕ
ದಾಸವರೇಣ್ಯರು ರಾಯಚೂರು ಜಿಲ್ಲೆಯಲ್ಲಿ ಜನಿಸಿ ದಾಸಸಾಹಿತ್ಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. 
 ಶ್ರೀ ಸುಬುಧೇಂದ್ರ ತೀರ್ಥರು, ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ 

Advertisement

Udayavani is now on Telegram. Click here to join our channel and stay updated with the latest news.

Next