Advertisement

ನೆನಪುಗಳ ಹಾವಳಿಗೆ ಹೃದಯ ಹಾಳಾಗಿದೆ

06:00 AM Jun 05, 2018 | |

ನೀನೇ ಬೇಕೆಂದು ಹಟ ಹಿಡಿಯುವ ಈ ಮನಸನ್ನು ಹೇಗೆ ಸಮಾಧಾನಿಸಲಿ ಹೇಳು? ಉತ್ತರ ಕಾಣದೇ ತತ್ತರಿಸಿ ಹೋಗಿದ್ದೇನೆ. ಉದಾಸೀನ ಕೊಡುವ ನೋವನ್ನು ಈ ನನ್ನ ಪುಟ್ಟ ಹೃದಯ ತಡೆದುಕೊಳ್ಳಲಾಗದೇ ಚೂರು ಚೂರಾಗಿ, ನನ್ನದೇ ಬದುಕಿನ ಅಂಗಳದಲ್ಲಿ ಹರಡಿ ಬಿದ್ದಿದೆ. 

Advertisement

ಡಿಯರ್‌ ವಿನ್ನಿ…
ಬದುಕಿನ ಒಳ ಮನೆಯಲ್ಲಿ ಉಳಿದುಹೋದ ಹಣತೆಯಲ್ಲಿ ಆರಿದ ಬೆಳಕಿನಂತೆ, ಎದೆಯೊಳಗಿನ ನಿತ್ಯದ ನೆನಪುಗಳಲ್ಲಿ ಹಾಳುಬಿದ್ದ ಇತಿಹಾಸದ ತುಣುಕಿನಂತೆ ನಮ್ಮಿಬ್ಬರ ಒಲವು ಅನಾಥವಾಯಿತು. ನೀನು ನಿನ್ನ ಉದಾಸೀನ ಕಂಗಳ ಲೇಖನಿಯಲ್ಲಿ, ನನ್ನ ಗದ್ಗದಿತ ಆತ್ಮದ ಹಾಳೆಯ ಮೇಲೆ, ಸಾವಿನಂಥ ಶಾಯಿಯಲ್ಲಿ, ಶಾಶ್ವತವಾಗಿ ಮುಚ್ಚಿದ ಬಾಗಿಲಂಥಾ ಸಾಲಿನ ಷರಾ ಬರೆದು, ನಿನ್ನ ಬದುಕಿನಿಂದ ನನ್ನನ್ನು ಹೊರಗೆಸೆದು, ಒಮ್ಮೆ ಕೂಡ ತಿರುಗಿ ನೋಡದೆ ನಡೆದುಬಿಟ್ಟೆ. 

ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ
ಅರಿತೆವೇನು ನಾವು ನಮ್ಮ ಅಂತರಾಳವ 
ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ
ತಿಳಿಯಿತೇನು ನೀರಿನಾಳ ಹಾಯಿದೋಣಿಗೆ …
ಬೇಡ ಬಿಡು.. ಈಗ ಏನೇ ನೆಪ ಹುಡುಕಿಕೊಂಡು ನಿನ್ನ ಬಳಿ ಬಂದರೂ, ನಿನ್ನಿಂದ ಒಂದು ಮಷ್ಟಿ ಕರುಣೆಯೂ ದಕ್ಕದೇನೋ. ಒಂದೊಮ್ಮೆ ಒಲವಿನ ಕಡಲೇ ಆಗಿದ್ದ ನಿನ್ನ ಬಳಿ ಈಗ ಕರುಣೆಯನ್ನು  ದುರ್ದಾನ ಪಡೆಯಲೇ ಹೇಳು? ಅದರಷ್ಟು ಹೀನಾಯ ಮತ್ತೇನಿದೆ? ನೀ ಇಲ್ಲದ ಈ ಬದುಕನ್ನು ನೆನೆದರೆ ಮುಂದಿನ ಹಾದಿಯ ತುಂಬಾ ಬರೀ ಕತ್ತಲ ನೀಚಸ್ವರ ಕೇಳಿಸುತ್ತದೆ. ನನ್ನೊಳಗೆ ನಾನೇ ತಲುಪಲಾರದೇ ನಿಸ್ಸಹಾಯಕನಾಗಿ ಮುರಿದ ಸೇತುವೆಯೆದುರು ನಿಂತಂತಾಗಿದೆ. ಅದೆಷ್ಟೋ ಪ್ರಖರ ವಸಂತಗಳು ಬಂದಹೋದ ಎದೆಯೊಳಗೀಗ ಬರೀ ಸ್ಮಶಾನದ ಬೂದಿ ಬೆಂಕಿ ರೋದನಗಳಷ್ಟೇ ಉಳಿದುಹೋಗಿವೆ. 

ಸಾವಿರಾರು ಮುಖದ ಚಲುವ ಹಿಡಿದು ತೋರಿಯೂ
ಒಂದಾದರೂ ಉಳಿಯಿತೆ ಕನ್ನಡಿಯ ಪಾಲಿಗೆ
ಸದಾಕಾಲ ತಬ್ಬಿದಂತೆ ಮೇಲೆ ಬಾಗಿಯೂದಕ್ಕಿತೇನು ಮಣ್ಣ ಮುತ್ತು ನೀಲಿ ಬಾನಿಗೆ !
ಆದರೆ, ನೀನೇ ಬೇಕೆಂದು ಹಟ ಹಿಡಿಯುವ ಈ ಮನಸನ್ನು ಹೇಗೆ ಸಮಾಧಾನಿಸಲಿ ಹೇಳು? ಉತ್ತರ ಕಾಣದೇ ತತ್ತರಿಸಿ ಹೋಗಿದ್ದೇನೆ. ಉದಾಸೀನ ಕೊಡುವ ನೋವನ್ನು  ಈ ನನ್ನ ಪುಟ್ಟ ಹೃದಯ ತಡೆದುಕೊಳ್ಳಲಾಗದೇ ಚೂರು ಚೂರಾಗಿ, ನನ್ನದೇ ಬದುಕಿನ ಅಂಗಳದಲ್ಲಿ ಹರಡಿ ಬಿದ್ದಿದೆ. ಒಂದೊಂದೇ ಚೂರುಗಳನ್ನು ಜತನದಿಂದ ಹೆಕ್ಕುತ್ತಿದ್ದೇನೆ. ಅಂಗೈ ತುಂಬಾ ನನ್ನದೇ ಬಿಕ್ಕುಗಳು ತುಂಬಿ ಹೋಗಿವೆ.

ಕಣ್ಣ ಹನಿಯೊಂದಿಗೆ ಕೆನ್ನೆ ಮಾತಾಡಿದೆ
ನೆನಪುಗಳ ಹಾವಳಿಗೆ ಹೃದಯ ಹಾಳಾಗಿದೆ !

Advertisement

ಜೀವ ಮುಳ್ಳೂರು

Advertisement

Udayavani is now on Telegram. Click here to join our channel and stay updated with the latest news.

Next