ಜನಸಾಮಾನ್ಯರಲ್ಲಿ ಶೇ. 5ರಿಂದ 12ರಷ್ಟು ಮಂದಿ ದವಡೆಯ ಸಂಧಿಗೆ ಸಂಬಂಧಿಸಿದ ಒಂದಲ್ಲ ಒಂದು ವಿಧವಾದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ, ಆದರೆ ದೈನಿಕ ಚಟುವಟಿಕೆಗಳಿಗೆ ಅಡ್ಡಿಯಾಗುವಷ್ಟರ ಮಟ್ಟಿಗೆ ಉಲ್ಬಣಗೊಳ್ಳದ ವಿನಾ ಈ ತೊಂದರೆ ನಿರ್ಲಕ್ಷಿತವಾಗುವುದೇ ಹೆಚ್ಚು. ದವಡೆಯ ಸಂಧಿ ಅಥವಾ ವೈದ್ಯಕೀಯ ಪರಿಭಾಷೆಯಲ್ಲಿ ಟೆಂಪರೊಮಾಂಡಿಬ್ಯುಲರ್ ಜಾಯಿಂಟ್ (ಟಿಎಂಜೆ) ಎಂದು ಕರೆಯಲಾಗುವ ಸಂಧಿಗಳು ಮುಖದ ಎರಡೂ ಬದಿಗಳಲ್ಲಿ, ಕಿವಿಯ ಎದುರು ಭಾಗದಲ್ಲಿ ಇವೆ. ಈ ಸಂಧಿಗಳು ಕೆಳ ದವಡೆಯನ್ನು ತಲೆಬುರುಡೆಯ ಜತೆಗೆ ಜೋಡಿಸಲು ಸಹಾಯ ಮಾಡುತ್ತವೆ. ಕಿವಿಯ ಎದುರು ಭಾಗದಲ್ಲಿ ಬೆರಳು ಇರಿಸಿಕೊಂಡು ಬಾಯಿಯನ್ನು ತೆರೆದು ಟಿಎಂಜೆ ಸಂಧಿಯ ಕಾರ್ಯವನ್ನು ಅನುಭವಿಸಿ ತಿಳಿಯಬಹುದು.
ದವಡೆ ಸಂಧಿಯ ಸಮಸ್ಯೆ ಅಥವಾ ಟೆಂಪರೊಮಾಂಡಿಬ್ಯುಲರ್ ಜಾಯಿಂಟ್ ಡಿಸಾರ್ಡರ್/ ಡಿಸ್‌ಫಂಕ್ಷನ್ (ಟಿಎಂಜೆಡಿ) ಎಂಬುದು ಓರೊಫೇಶಿಯಲ್ ನೋವಿನ ಆರೋಗ್ಯವೂ ಬಹಳ ಮುಖ್ಯ! ಸ್ಥಿತಿಗಳಲ್ಲಿ ಅತೀ ಸಾಮಾನ್ಯವಾದುದು. ದವಡೆ ಸಂಧಿಯಲ್ಲಿ ನೋವು, ಆ ಸ್ಥಳದ ಸುತ್ತಲಿನ ಸ್ನಾಯುಗಳು ಮತ್ತು ಲಿಗಮೆಂಟ್ ಗಳಲ್ಲಿ ನೋವು, ಬಾಯಿ ತೆರೆಯುವಾಗ ಮತ್ತು ಮುಚ್ಚುವಾಗ ತೊಂದರೆ, ದವಡೆ ಸಂಧಿಯಲ್ಲಿ ಸದ್ದು, ಬಾಯಿಯನ್ನು ಅಗಲವಾಗಿ ತೆರೆದಾಗ ದವಡೆ ಸಂಧಿ ಸಿಕ್ಕಿಕೊಳ್ಳುವುದು, ತಲೆನೋವು, ಕುತ್ತಿಗೆ ನೋವು, ಕಿವಿ ನೋವು ಇತ್ಯಾದಿ ಲಕ್ಷಣಗಳನ್ನು ಹೊಂದಿರುವ 30ಕ್ಕೂ ಅಧಿಕ ಅನಾರೋಗ್ಯ ಸ್ಥಿತಿಗಳನ್ನು ಟಿಎಂಜೆಡಿ ಒಳಗೊಳ್ಳುತ್ತದೆ.
ಟಿಎಂಜೆಡಿಯು ಪುರುಷರಿಗಿಂತ ಮಹಿಳೆಯರಲ್ಲಿ ಎರಡು ಪಟ್ಟು ಹೆಚ್ಚು ಕಾಣಿಸಿಕೊಳ್ಳುತ್ತದೆ, ಅದರಲ್ಲೂ 20ರಿಂದ 40 ವರ್ಷ ವಯೋಮಾನದವರಲ್ಲಿ ಉಂಟಾಗುತ್ತದೆ. ಈಸ್ಟ್ರೋಜೆನ್ ಸಪ್ಲಿಮೆಂಟ್‌ಗಳು, ಬಾಯಿಯ ಮೂಲಕ ತೆಗೆದುಕೊಳ್ಳುವ ಗರ್ಭ ನಿರೋಧಕ ಗುಳಿಗೆಗಳನ್ನು ತೆಗೆದುಕೊಳ್ಳುವ ಮಹಿಳೆಯರು ಹಾಗೂ ಸತತ ಒತ್ತಡ ಮತ್ತು ಖನ್ನತೆಯನ್ನು ಹೊಂದಿರುವವರಲ್ಲಿ ಟಿಎಂಜೆಡಿ ಕಾಣಿಸಿಕೊಳ್ಳುವುದು ಅಧಿಕ.
ಟಿಎಂಜೆಡಿಗೆ ಕಾರಣಗಳು
ಟಿಎಂಜೆಡಿಗೆ ಒಂದೇ ನಿರ್ದಿಷ್ಟ ಕಾರಣ ಎಂದಿಲ್ಲ, ಇದು ಬಹು ಆಯಾಮದ ಕಾರಣಗಳನ್ನು ಹೊಂದಿದ್ದು, ಪ್ರತಿಯೊಬ್ಬರನ್ನೂ ಭಿನ್ನ ಭಿನ್ನವಾಗಿ ಬಾಧಿಸುತ್ತದೆ. ಆದರೆ ಈ ಕೆಳಗೆ ಟಿಎಂಜೆಡಿ ಉಂಟಾಗುವುದಕ್ಕೆ ಕಾರಣವಾಗಬಲ್ಲ ಕೆಲವು ಅಂಶಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ:
- ಈ ಹಿಂದೆ ದವಡೆಯ ಗಾಯ/ ಮೂಳೆ ಮುರಿತ/ ಸ್ಥಾನಪಲ್ಲಟಕ್ಕೆ ತುತ್ತಾಗಿರುವುದು.
- ಹಗಲು ಅಥವಾ ರಾತ್ರಿ ಹೊತ್ತಿನಲ್ಲಿ ಹಲ್ಲು ಕಡಿಯುವುದು, ಹಲ್ಲು ಕಡೆಯುವುದು
- ಆರ್ಥ್ರೈಟಿಸ್ ಹೊಂದಿರುವುದು.
- ಹಲ್ಲುಗಳು ಓರೆಕೋರೆಯಾಗಿರುವುದು.
- ತಲೆ ಮುಂದಕ್ಕೆ ಬಾಗಿರುವಂತಹ ಅಸಹಜ ದೈಹಿಕ ಭಂಗಿ.
- ಇಯರ್‌ಫೋನ್‌ಗಳ ಸತತ ಬಳಕೆ
ಟಿಎಂಜೆಡಿ ತಜ್ಞರನ್ನು ಯಾವಾಗ ಭೇಟಿ ಮಾಡಬೇಕು?
ಈ ಕೆಳಗಿನ ಲಕ್ಷಣಗಳನ್ನು ಹೊಂದಿದ್ದರೆ ನಿಮ್ಮ ದವಡೆ ಸಂಧಿಗೆ ವೈದ್ಯಕೀಯ ನೆರವಿನ ಅಗತ್ಯವಿದೆ ಎಂದರ್ಥ.
- ಜಗಿಯುವಾಗ, ಬಾಯಿಯನ್ನು ತೆರೆಯುವಾಗ ಮತ್ತು ಮುಚ್ಚುವಾಗ ಅಥವಾ ದೀರ್ಘಕಾಲ ಮಾತನಾಡುವಾಗ ಕಿವಿಯ ಮುಂಭಾಗ ಅಥವಾ ಕಿವಿಯ ಆಸುಪಾಸಿನಲ್ಲಿ ನೋವು ಕಾಣಿಸಿಕೊಳ್ಳುತ್ತಿದ್ದರೆ.
- ಕಿವಿಯಲ್ಲಿ ಅಥವಾ ಕಿವಿಯ ಒಳಭಾಗದಲ್ಲಿ ನೋವು ಆರಂಭವಾಗಿ ಕುತ್ತಿಗೆ ಅಥವಾ ತಲೆಯ ವರೆಗೂ ವಿಸ್ತರಿಸುತ್ತಿದ್ದರೆ.
- ದವಡೆ ಗಡುಸಾಗಿದ್ದರೆ.
- ದವಡೆ ಬಿಗಿದುಕೊಳ್ಳುತ್ತಿದ್ದರೆ.
- ದವಡೆಯ ಚಲನೆಯ ಸಂದರ್ಭದಲ್ಲಿ ನೋವು ಸಹಿತವಾಗಿ ವಿವಿಧ ಬಗೆಯ ಸದ್ದಾಗುತ್ತಿದ್ದರೆ.
- ಕಿವಿಯ ಒಳಗೆ ಗುಂಯ್‌ಗಾಡುವಿಕೆ/ ಕಿವಿ ಮುಚ್ಚಿಕೊಂಡಂತಿದ್ದರೆ.
- ಜಗಿಯುವ ಪ್ರಕ್ರಿಯೆಯಲ್ಲಿ ಹಠಾತ್ ಬದಲಾವಣೆ ಅನುಭವಕ್ಕೆ ಬಂದಿದ್ದರೆ (ಹಲ್ಲುಗಳ ಮೇಲಿನ ಸಾಲು ಮತ್ತು ಕೆಳಸಾಲು ಕಚ್ಚಿಕೊಳ್ಳುವ ರೀತಿ).
ಟಿಎಂಜೆಡಿಗೆ ಚಿಕಿತ್ಸೆ ಹೇಗೆ?
ಟಿಎಂಜೆಡಿಯ ಬಹುತೇಕ ಲಕ್ಷಣಗಳನ್ನು ಶಸ್ತ್ರಚಿಕಿತ್ಸೆ ಇಲ್ಲದೆಯೇ ಗುಣಪಡಿಸಬಹುದಾಗಿದೆ.
ಟಿಎಂಜೆಡಿ ತಜ್ಞರು ರೋಗಿಯ ವಿವರವಾದ ರೋಗ ಹಿನ್ನೆಲೆಯನ್ನು ಕಲೆ ಹಾಕುತ್ತಾರೆ, ದವಡೆಯ ಸಂಧಿ ಮತ್ತು ಸುತ್ತಲಿನ ಸ್ನಾಯುಗಳನ್ನು ಪರೀಕ್ಷಿಸುತ್ತಾರೆ ಮತ್ತು ದವಡೆಯ ಚಲನೆಯ ಪರಿಶೀಲನೆ ನಡೆಸುತ್ತಾರೆ. ಕೆಲವು ಪ್ರಕರಣಗಳಲ್ಲಿ ತಜ್ಞರು ದವಡೆ ಸಂಧಿಯ ಎಂಆರ್‌ಐಗೆ ಶಿಫಾರಸು ಮಾಡಲೂ ಬಹುದು.
ನಿಮ್ಮ ಲಕ್ಷಣಗಳು ಮತ್ತು ಪರೀಕ್ಷೆಗಳ ಫಲಿತಾಂಶಗಳನ್ನು ಆಧರಿಸಿ ತಜ್ಞರು ಈ ಕೆಳಗೆ ವಿವರಿಸಲಾದ ಸಂಯೋಜಿತ ಚಿಕಿತ್ಸೆಗಳನ್ನು ಶಿಫಾರಸು ಮಾಡುತ್ತಾರೆ. ಟಿಎಂಜೆಡಿ ತೊಂದರೆಗೆ ಬಹು ವಿಧ ಚಿಕಿತ್ಸಾ ಕ್ರಮ ಅಗತ್ಯವಾಗಿದ್ದು, ಏಕಸ್ವರೂಪದ ಚಿಕಿತ್ಸೆಯಿಂದ ಪ್ರಯೋಜನವಾಗಲಾರದು ಎಂಬುದನ್ನು ನೆನಪಿನಲ್ಲಿ ಇರಿಸಿಕೊಳ್ಳಬೇಕು.
ಟಿಎಂಜೆಡಿ ನೋವು ಅಲ್ಪಕಾಲದಲ್ಲಿ ತೀವ್ರವಾಗಿ ಉಲ್ಬಣಗೊಂಡಿದ್ದರೆ ಟಿಎಂಜೆಡಿ ತಜ್ಞರು ಔಷಧಗಳನ್ನು ಶಿಫಾರಸು ಮಾಡಬಹುದಾಗಿದೆ. ನೋವು ಕಡಿಮೆಯಾದ ಬಳಿಕ ಟಿಎಂಜೆ ಸ್ಪ್ಲಿಂಟ್ ಥೆರಪಿಯನ್ನು ಆರಂಭಿಸುವುದರ ಜತೆಗೆ ಫಿಸಿಯೋಥೆರಪಿ (ಅಲ್ಟ್ರಾಸೌಂಡ್, ಟೆನ್ಸ್ ಥೆರಪಿ, ಆ್ಯಕ್ಯುಪಂಕ್ಚರ್, ಡ್ರೈ ನೀಡ್ಲಿಂಗ್, ಮಸಲ್ ಟೇಪಿಂಗ್, ಸ್ಟ್ರೆಂಥನಿಂಗ್ ವ್ಯಾಯಾಮಗಳು ಇತ್ಯಾದಿಗಳನ್ನು ಒಳಗೊಳುತ್ತದೆ ಆದರೆ ಇಷ್ಟು ಮಾತ್ರವೇ ಅಲ್ಲ)ಯನ್ನು ಆರಂಭಿಸಬಹುದು.
ಟಿಎಂಜೆ ಸ್ಪ್ಲಿಂಟ್ ಎಂಬುದು ನೈಟ್‌ಗಾರ್ಡ್ ಅಲ್ಲ ಎಂಬುದನ್ನು ನೆನಪಿನಲ್ಲಿ ಇರಿಸಿಕೊಳ್ಳಬೇಕು.
ಇದರ ಜತೆಗೆ ಟಿಎಂಜೆಡಿಯೇತರ ಕಾರಣ ಅಥವಾ ಸಹ ಅಂಶಗಳನ್ನು (ಗುಣ ಹೊಂದುವುದಕ್ಕೆ ಅಡ್ಡಿಯಾಗುವ ಅಂಶಗಳು) ಚಿಕಿತ್ಸೆಗೆ ಒಳಪಡಿಸುವುದು ಕೂಡ ಮುಖ್ಯವಾಗುತ್ತದೆ. ಇವುಗಳಲ್ಲಿ ಒತ್ತಡ, ಕಡಿಮೆ ನಿದ್ದೆ, ಖನ್ನತೆ, ಕಳಪೆ ದೇಹಭಂಗಿ, ರುಮಟಾಯ್ಡ ಆರ್ಥ್ರೈಟಿಸ್ ಸೇರಿವೆ.
ಕೆಲವು ಪ್ರಕರಣಗಳಲ್ಲಿ ಮಾತ್ರ ಟಿಎಂಜೆ ಶಸ್ತ್ರಚಿಕಿತ್ಸೆಗಳನ್ನು ಶಿಫಾರಸು ಮಾಡಲಾಗುತ್ತದೆ; ಅಂಥವುಗಳಲ್ಲಿ ಈ ಕೆಳಕಂಡವು ಒಳಗೊಂಡಿವೆ:
- ಆಥ್ರೊಸೆಂಟೆಸಿಸ್ – ಉರಿಯೂತದಿಂದ ಉತ್ಪತ್ತಿಯಾಗಿರುವ ಅಂಶಗಳನ್ನು ಹೊರತೆಗೆಯಲು ದವಡೆಯ ಸಂಧಿ ಭಾಗಕ್ಕೆ ಸಣ್ಣದಾದ ಸೂಜಿಯನ್ನು ಚುಚ್ಚಲಾಗುತ್ತದೆ.
- ಕೆಲವು ರೋಗಿಗಳಿಗೆ ಪ್ರಯೋಜನಕಾರಿಯಾಗಬಲ್ಲ ಕಾರ್ಟಿಕೊಸ್ಟಿರಾಯ್ಡ್‌ಗಳನ್ನು ಸಂಧಿ ಭಾಗಕ್ಕೆ ಇಂಜೆಕ್ಟ್ ಮಾಡುವುದು. ದವಡೆ ಸಂಧಿಯ ಡಿಸ್‌ಫಂಕ್ಷನ್ ಗೆ ತುತ್ತಾಗಿರುವ ರೋಗಿಗಳಿಗೆ ಬೊಟುಲಿನಮ್ ಟಾಕ್ಸಿನ್ ಟೈಪ್ ಎ (ಬೊಟೊಕ್ಸ್ ಮತ್ತಿತರ) ಯನ್ನು ಚುಚ್ಚುಮದ್ದಾಗಿ ಒದಗಿಸುವುದರಿಂದ ಪ್ರಯೋಜನವಾಗುತ್ತದೆ.
- ಆರ್ಥ್ರೊಸ್ಕೊಪಿ- ಇದೊಂದು ಅತೀ ಕಡಿಮೆ ಗಾಯವನ್ನು ಉಂಟುಮಾಡುವ ಶಸ್ತ್ರಚಿಕಿತ್ಸೆಯಾಗಿದ್ದು, ಇಲ್ಲಿ ಆರ್ಥ್ರೊಸ್ಕೋಪ್ ಅನ್ನು ದವಡೆ ಸಂಧಿ ಭಾಗಕ್ಕೆ ಕಳುಹಿಸಿ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗುತ್ತದೆ.
- ಸಂಧಿಯ ತೆರೆದ ಶಸ್ತ್ರಚಿಕಿತ್ಸೆ- ಇದು ಗಾಯವನ್ನು ಉಂಟು ಮಾಡುವ ಶಸ್ತ್ರಚಿಕಿತ್ಸೆಯಾಗಿದ್ದು, ಇಲ್ಲಿ ಸಂಧಿಯನ್ನು ಸರಿಪಡಿಸಲು ಅಥವಾ ಪುನರ್ ಸ್ಥಾಪಿಸಲಾಗುತ್ತದೆ.
ಟಿಎಂಜೆಡಿಯನ್ನು ತಡೆಯಲು ನಾನೇನು ಮಾಡಬಹುದು?
ದವಡೆ ಸಂಧಿಯ ಸ್ನಾಯುಗಳ ಮೇಲೆ ಅತಿಯಾದ ಶ್ರಮ ಹಾಕಬೇಡಿ.
ಆಹಾರವನ್ನು ಸೇವಿಸಲು ಬಾಯಿಯನ್ನು ಬಹಳ ಅಗಲವಾಗಿ ತೆರೆಯಬೇಡಿ. ಬದಲಾಗಿ ಆಹಾರವನ್ನು ಸಣ್ಣದಾಗಿ ಕತ್ತರಿಸಿ ಸಣ್ಣ ತುತ್ತುಗಳನ್ನು ಸೇವಿಸಿ.
ಚ್ಯೂಯಿಂಗ್ ಗಮ್ ಅಥವಾ ಐಸ್ ಗಡ್ಡೆಗಳನ್ನು ಪದೇಪದೆ ಜಗಿಯುತ್ತಿರಬೇಡಿ.
ಬಾಟಲಿಯ ಮುಚ್ಚಳ, ಪೊಟ್ಟಣ, ಟ್ಯಾಗ್ ಇತ್ಯಾದಿ ತೆರೆಯಲು/ ಹರಿಯಲು ಹಲ್ಲುಗಳನ್ನು ಉಪಯೋಗಿಸುವುದಕ್ಕೆ ಮುಂದಾಗಬೇಡಿ.
ಹಲ್ಲುಗಳನ್ನು ಕಡಿಯುವುದು, ಕಡೆಯುವುದನ್ನು ಪ್ರಜ್ಞಾಪೂರ್ವಕವಾಗಿ ನಿಲ್ಲಿಸಿ.
ಬೋರಲಾಗಿ ಮಲಗಬೇಡಿ. ಹೌದು, ಸರಿಯಾದ ರೋಗಪತ್ತೆ, ಸರಿಯಾದ ಚಿಕಿತ್ಸೆ ಮತ್ತು ನಿರ್ವಹಣೆಯ ಮೂಲಕ ಟಿಎಂಜೆಡಿಯನ್ನು ಗುಣಪಡಿಸುವುದಕ್ಕೆ ಸಾಧ್ಯವಿದೆ.
ಮಾಹೆ ಮಣಿಪಾಲದ ದಂತ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯದಲ್ಲಿ ಇರುವ ಸೆಂಟರ್ ಫಾರ್ ಡೆಂಟಲ್ ಇಂಪ್ಲಾಂಟ್ ಸೊಲ್ಯೂಶನ್ಸ್ ಆ್ಯಂಡ್ ಎಜುಕೇಶನ್‌ನಲ್ಲಿ ನಾವು ನಿಮ್ಮ ಟಿಎಂಜೆಯ ಸಮಗ್ರ ಚಿಕಿತ್ಸೆ ಮತ್ತು ಆರೈಕೆಯನ್ನು ಒದಗಿಸಲಿದ್ದೇವೆ. ಟಿಎಂಜೆ, ಸುತ್ತಲಿನ ಸ್ನಾಯುಗಳ ಸಂಪೂರ್ಣ ತಪಾಸಣೆಯ ಬಳಿಕ ರೋಗಿಗಾಗಿ ವ್ಯಕ್ತಿನಿರ್ದಿಷ್ಟ ಚಿಕಿತ್ಸೆಯ ಯೋಜನೆಯನ್ನು ರೂಪಿಸಲಾಗುತ್ತದೆ. ಟಿಎಂಜೆಡಿಗಳಿಗೆ ಶಸ್ತ್ರಚಿಕಿತ್ಸೆಗಳ ಬದಲಾಗಿ ಮಿತವ್ಯಯಿಯಾದ ಮತ್ತು ಶಸ್ತ್ರಚಿಕಿತ್ಸೇತರ ಚಿಕಿತ್ಸೆಯ ವಿಧಾನಗಳನ್ನು ಒದಗಿಸಲು ನಾವು ಆದ್ಯತೆ ನೀಡುತ್ತೇವೆ. ನಮ್ಮ ಕೇಂದ್ರದಲ್ಲಿ ನಾವು ದಿ ಆಂಟೀರಿಯರ್ ಸ್ಟಾಪ್ ಅಪ್ಲಾಯನ್ಸ್, ದಿ ಆಂಟೀರಿಯರ್ ರೀಪೊಸಿಶನಿಂಗ್ ಅಪ್ಲಾಯನ್ಸ್, ಟಿಎಂಜೆ ಆಥೊìಟಿಕ್ಸ್ ಇತ್ಯಾದಿ ವಿವಿಧ ಸ್ಪ್ಲಿಂಟ್ ಥೆರಪಿಗಳ ಜತೆಗೆ ಫಿಸಿಯೊಥೆರಪಿ (ಅಲ್ಟ್ರಾಸೌಂಡ್, ಮಸಲ್ ಟೇಪಿಂಗ್ ಇತ್ಯಾದಿ)ಯನ್ನೂ ಒದಗಿಸುತ್ತೇವೆ. ಟಿಎಂಜೆಡಿಗಳಿಂದ ಶೀಘ್ರವಾಗಿ ಗುಣ ಹೊಂದುವ ನಿಟ್ಟಿನಲ್ಲಿ ರೋಗಿಗಳು ಮನೆಯಲ್ಲಿಯೇ ಅಭ್ಯಾಸ ಮಾಡಬಹುದಾದ ದವಡೆಯ ಸ್ನಾಯುಗಳನ್ನು ಸದೃಢಗೊಳಿಸುವ ವ್ಯಾಯಾಮಗಳನ್ನು ಕೂಡ ಹೇಳಿಕೊಡಲಾಗುತ್ತದೆ.
ಡಾ| ಗಾಯತ್ರಿ ಕೃಷ್ಣಮೂರ್ತಿ,
ಟಿಎಂಜೆಡಿ ಮತ್ತು ಓರೊಫೇಶಿಯಲ್ ಪೈನ್ ಮ್ಯಾನೇಜ್‌ಮೆಂಟ್ ಸ್ಪೆಶಲಿಸ್ಟ್ ಸೆಂಟರ್ ಫಾರ್ ಡೆಂಟಲ್ ಇಂಪ್ಲಾಂಟ್ ಸೊಲ್ಯೂಶನ್ಸ್ ಆ್ಯಂಡ್ ಎಜುಕೇಶನ್
ಎಂಸಿಒಡಿಎಸ್, ಮಾಹೆ,
ಮಣಿಪಾಲ
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಕೊ-ಆರ್ಡಿನೇಟರ್, ಸೆಂಟರ್ ಫಾರ್ ಡೆಂಟಲ್ ಇಂಪ್ಲಾಂಟ್ ಸೊಲ್ಯೂಶನ್ಸ್ ಆ್ಯಂಡ್ ಎಜುಕೇಶನ್ ಎಂಸಿಡಿಒಎಸ್, ಮಂಗಳೂರು)