ಬೆಂಗಳೂರು: ಅರ್ಹ ಶಿಕ್ಷಣವನ್ನು ಹೊಂದದೆ ಹಾಗೂ ಬೇರೊಬ್ಬರ ಹೆಸರಿನಲ್ಲಿ ವೈದ್ಯ ವೃತ್ತಿ ನಡೆಸುವ ನಕಲಿ ವೈದ್ಯರನ್ನು ಪತ್ತೆ ಹಚ್ಚಲು ಆರೋಗ್ಯ ಇಲಾಖೆ ಮುಂದಾಗಿದ್ದು, ಅದರ ಭಾಗವಾಗಿ ರಾಜ್ಯದಲ್ಲಿ ನಕಲಿ ವೈದ್ಯರು, ಕ್ಲಿನಿಕ್‌ಗಳ ಪತ್ತೆಗೆ ಏಕಕಾಲದಲ್ಲಿ ದಾಳಿ ನಡೆಸಲು ಸಿದ್ಧತೆ ನಡೆಸಲಾಗಿದೆ.
ಕಲಬುರಗಿಯಲ್ಲಿ ನಡೆದ ಏಕಕಾಲದ ದಾಳಿಯಿಂದ ನಕಲಿ ವೈದ್ಯರು ಸಹಿತ ಕೆಪಿಎಂಇ ಕಾಯ್ದೆ ಉಲ್ಲಂ ಸಿದವರ ವಿರುದ್ಧ 49 ಪ್ರಕರಣಗಳು ದಾಖಲಾಗಿವೆ. ಇದೇ ಮಾದರಿಯಲ್ಲಿ ರಾಜ್ಯಾದ್ಯಂತ ದಾಳಿಗೆ ನಿರ್ಧರಿಸಲಾಗಿದೆ. ಪ್ರತಿ 3 ತಿಂಗಳಿಗೊಮ್ಮೆ ತಾಲೂಕು ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲಿಸಲಿದ್ದಾರೆ ಎಂದು ಇಲಾಖೆ ತಿಳಿಸಿದೆ.
1,600 ಪ್ರಕರಣ ದಾಖಲು:
ಪ್ರಸ್ತಕ ಸಾಲಿನಲ್ಲಿ ನಕಲಿ ವೈದ್ಯರು, ಕಾನೂನು ಬಾಹಿರ ವೈದ್ಯ ಸಂಸ್ಥೆಗಳ ವಿರುದ್ಧ ಒಟ್ಟು 1,600 ಪ್ರಕರಣಗಳು ದಾಖಲಾಗಿವೆ. ಕಲಬುರಗಿ ಜಿಲ್ಲೆಯಲ್ಲಿ ಏಕಕಾಲದ ದಾಳಿ ಸಂದರ್ಭ ನೋಂದಣಿಯಾಗದ 7 ಆಸ್ಪತ್ರೆಗಳು, 23 ನಕಲಿ ವೈದ್ಯರು, ಕೆಪಿಎಂಇ ಕಾಯ್ದೆ ಉಲ್ಲಂ ಸುವವರ ವಿರುದ್ಧ 16, ವಿವಿಧ ವೈದ್ಯ ಪದ್ಧತಿಯಲ್ಲಿ ನಕಲಿ ವೈದ್ಯರು 3 ಸಹಿತ ಒಟ್ಟು 49 ಪ್ರಕರಣ ದಾಖಲಿಸಿ, 21.35 ಲಕ್ಷ ರೂ. ದಂಡ ವಿಧಿಸಲಾಗಿದೆ.
ನಕಲಿ ವೈದ್ಯರ ಜಾಲ, ಕೆಪಿಎಂಇ ಕಾಯ್ದೆ ಉಲ್ಲಂಘಿಸುವವರ ಪತ್ತೆಗೆ ಆಯಾ ಜಿಲ್ಲಾ ಮಟ್ಟದಲ್ಲಿ ಏಕಕಾಲಕ್ಕೆ ದಾಳಿ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಕಲಬುರಗಿಯಲ್ಲಿ ಏಕಕಾಲದ ದಾಳಿ ಯಶಸ್ವಿಯಾಗಿದ್ದು, ಒಂದೇ ದಿನ 49 ಪ್ರಕರಣ ದಾಖಲಿಸಲಾಗಿದೆ.
– ಡಾ| ವಿವೇಕ್ ದೊರೈ ಆರೋಗ್ಯ ಇಲಾಖೆ ವೈದ್ಯಕೀಯ ಕಾಯ್ದೆ ಉಪ ನಿರ್ದೇಶಕ