ರಾಣಿಬೆನ್ನೂರ: ಪರಮಾತ್ಮನ ಸೃಷ್ಟಿಯನ್ನು ಅರಿಯಲು ಯಾರಿಂದಲೂ ಸಾಧ್ಯವಿಲ್ಲ. ಎಲ್ಲವನ್ನೂ ಅವನೇ ಸೃಷ್ಟಿಸಿದ್ದರೂ ಒಬ್ಬರಂತೆ ಇನ್ನೊಬ್ಬರಿಲ್ಲ. “ಸಮರಸದ ಜೀವನ ಸೌಭಾಗ್ಯಕ್ಕೆ ಸೋಪಾನ’ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ| ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಗುರುವಾರ ರಾತ್ರಿ ತಾಲೂಕಿನ ಕೊಡಿಯಾಲ ಹೊಸಪೇಟೆ ಪುಣ್ಯಕೋಟಿ ಮಠದ ತುಂಗಾರತಿ ಪೂರ್ವಭಾವಿ ಶುಭಾಗಮನ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಜೀವನ ಅರಿತು ಬಾಳುವುದರಲ್ಲಿ ಸುಖ, ಶಾಂತಿಯಿದೆ. ಬದುಕಿನ ಉನ್ನತಿಯಲ್ಲಿ ಉತ್ಕರ್ಷತೆಯಿದೆ. ಮನುಷ್ಯ ದೊಡ್ಡ ಮಾತುಗಳನ್ನು ಮಾತನಾಡುವನೇ ವಿನಃ ದೊಡ್ಡ ಗುಣದಿಂದ ಬದುಕಲಾರ ಎಂದರು.
ಜನಹಿತ ಲೋಕಕಲ್ಯಾಣಕ್ಕಾಗಿ ಅವತರಿಸಿದ ಹಲವಾರು ಮಹಾನುಭಾವರು ತಾವು ನೋವು ತಿಂದು ಸಮಾಜಕ್ಕೆ ಒಳಿತನ್ನು ಮಾಡಿದ್ದಾರೆ. ಮೌಲ್ಯಗಳ ಅಳಿವು, ಉಳಿವು ಮನುಷ್ಯನ ಆಚರಣೆಯಲ್ಲಿವೆ. ನೀತಿ ಸಂಹಿತೆ ಅರಿತವನಿಗೆ ನೆಮ್ಮದಿಯ ಫಲ ಸಿಗುವುದರಲ್ಲಿ ಯಾವುದೇ ಸಂದೇಹವಿಲ್ಲ. ತಾಳ್ಮೆ ಮತ್ತು ಸಹನೆಯ ಗುಣ ಮನುಷ್ಯನಲ್ಲಿ ಇಲ್ಲದಿರುವುದೇ ಇಂದಿನ ಅಶಾಂತಿ, ಅತೃಪ್ತಿಗಳಿಗೆ ಕಾರಣವೆಂದರೆ ತಪ್ಪಾಗದು ಎಂದರು.
ವೀರಶೈವ ಧರ್ಮ ಪ್ರಾಚೀನವಾಗಿದ್ದು, ಸಕಲ ಜೀವಾತ್ಮರಿಗೆ ಒಳಿತನ್ನೇ ಮಾಡುತ್ತಾ ಬಂದಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಮೌಲ್ಯಾಧಾರಿತ ವಿಚಾರಧಾರೆಗಳು ಸರ್ವ ಕಾಲಕ್ಕೂ ಸರ್ವರಿಗೂ ಅನ್ವಯಿಸುತ್ತವೆ. ಪುಣ್ಯಕೋಟಿ ಮಠದ ಜಗದೀಶ್ವರ ಸ್ವಾಮಿಗಳು ಭಕ್ತರ ಕಲ್ಯಾಣ, ವಿಶ್ವ ಶಾಂತಿಗಾಗಿ ಕೈಕೊಂಡ ಸಂಕಲ್ಪಗಳು ಪರಿಪೂರ್ಣಗೊಳ್ಳಲೆಂದು ಶ್ರೀಗಳು ಆಶಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಮಂಗಳಗೌರಿ ಅರುಣಕುಮಾರ ಪೂಜಾರ ಸಸಿಗೆ ನೀರು ಎರೆಯುವುದರ ಮೂಲಕ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತ ನೀಡಿದರು. ಪುಣ್ಯಕೋಟಿ ಮಠದ ಜಗದೀಶ್ವರ ಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಚೇತನ ಪೂಜಾರ ಅಧ್ಯಕ್ಷತೆ ವಹಿಸಿದ್ದರು. ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮಿಗಳು ಹಲವಾರು ಗಣ್ಯರು ಮತ್ತು ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಹರಸಿದರು.