Advertisement

ರಮಾನಾಥ ರೈ ನೇತೃತ್ವದ “ಸಾಮರಸ್ಯ ನಡಿಗೆ’ಯಶಸ್ವಿ

11:04 AM Dec 13, 2017 | |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ-ಸಾಮರಸ್ಯ ಮೂಡಿಸುವ ಆಶಯದೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ನೇತೃತ್ವದಲ್ಲಿ ಸಮಾನ ಮನಸ್ಕರು ಸಂಘಟಿಸಿದ್ದ “ಸಾಮರಸ್ಯ ನಡಿಗೆ-ಸೌಹಾರ್ದತೆಯೆಡೆಗೆ’ ಕಾಲ್ನಡಿಗೆ ಜಾಥಾ ಯಶಸ್ವಿಯಾಗಿ ನಡೆದಿದೆ.

Advertisement

ಸುಮಾರು 25 ಕಿ.ಮೀ. ದೂರದ ಈ ಪಾದ ಯಾತ್ರೆ ಶಾಂತಿಯುತವಾಗಿ ನಡೆಯಿತು. ಪಾದ ಯಾತ್ರೆಗೆ ಬೆಳಗ್ಗೆ 10 ಗಂಟೆಗೆ ಫ‌ರಂಗಿಪೇಟೆಯಲ್ಲಿ ನಟ ಪ್ರಕಾಶ್‌ ರೈ ಅವರು ಸಚಿವ ರಮಾನಾಥ ರೈ ಅವರೊಂದಿಗೆ ಪಾರಿವಾಳ ಹಾರಿಬಿಡುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮುಖಂಡರಾದ ಅಮರನಾಥ ಶೆಟ್ಟಿ, ಶ್ರೀರಾಮ ರೆಡ್ಡಿ, ಡಾ| ಸಿದ್ದನಗೌಡ ಪಾಟೀಲ್‌, ಸಚಿವ ಯು.ಟಿ. ಖಾದರ್‌, ಶಾಸಕರಾದ ಅಭಯಚಂದ್ರ ಜೈನ್‌, ವಸಂತ ಬಂಗೇರ, ಜೆ.ಆರ್‌. ಲೋಬೋ, ಮೊದಿನ್‌ ಬಾವ, ಶಕುಂತಳಾ ಶೆಟ್ಟಿ, ಮೇಯರ್‌ ಕವಿತಾ ಸನಿಲ್‌, ಮುಸ್ಲಿಂ ಸೆಂಟ್ರಲ್‌ ಕಮಿಟಿಯ ಮಹಮದ್‌ ಮಸೂದ್‌, ಬಿ. ಇಬ್ರಾಹಿಂ, ಮಮತಾ ಡಿ.ಎಸ್‌. ಗಟ್ಟಿ, ರಾಜಶೇಖರ ಕೋಟ್ಯಾನ್‌, ಹರೀಶ್‌ ಕುಮಾರ್‌, ಎ.ಸಿ. ಭಂಡಾರಿ, ಚಂದ್ರಹಾಸ್‌ ಆರ್‌. ಕರ್ಕೇರ, ವಸಂತ ಆಚಾರಿ, ವಾಸುದೇವ ಬೋಳೂರು, ಮುನೀರ್‌ ಕಾಟಿಪಳ್ಳ, ವಿ. ಕುಕ್ಯಾನ್‌, ರವಿಕಿರಣ್‌ ಪುಣಚ, ರಾಜವರ್ಮ ಬಲ್ಲಾಳ್‌, ಚಂದು ಎಲ್‌., ದೇವದಾಸ್‌, ರಘು ಎಕ್ಕಾರು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಜಿಲ್ಲೆಯ ಮಂಗಳೂರು ವಿಧಾನಸಭಾ ಕ್ಷೇತ್ರದ ಫರಂಗಿಪೇಟೆಯಿಂದ ನಡಿಗೆ ಆರಂಭವಾಗಿ, ಬಳಿಕ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮೂಲಕ ಸಾಗಿ ಮುಂದೆ ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಣಿಯಲ್ಲಿ ಸಮಾಪ್ತಿಗೊಂಡಿತು. ಕಾಂಗ್ರೆಸ್‌, ಸಿಪಿಐ, ಡಿವೈಎಫ್‌ಐ, ರೈತ ಸಂಘ, ವಿವಿಧ ದಲಿತ ಸಂಘಟನೆಗಳು ಸೇರಿದಂತೆ ಸಾವಿರಾರು ಮಂದಿ ಭಾಗಿಯಾಗಿದ್ದರು.

ಸೌಹಾರ್ದ ನಡಿಗೆ ಯಾರ ವಿರುದ್ಧವೂ ಅಲ್ಲ: ಸಚಿವ ರೈ
ನಡಿಗೆ ಆರಂಭಕ್ಕೂ ಮುನ್ನ ಸುದ್ದಿಗಾರರ ಜತೆಗೆ ಮಾತನಾಡಿದ ಸಚಿವ ರಮಾನಾಥ ರೈ ಅವರು, ಪಾದಯಾತ್ರೆ ನಡೆಸುವುದಕ್ಕಷ್ಟೇ ನಮ್ಮ ಸಾಮರಸ್ಯ ಸೀಮಿತವಾಗಬಾರದು. ಜೀವನ ಪರ್ಯಂತ ಇರಬೇಕು ಎಂದರು.

ವ್ಯಾಪಕ ಪೊಲೀಸ್‌ ಭದ್ರತೆ-ವೀಡಿಯೊ ಚಿತ್ರೀಕರಣ
ಮಂಗಳೂರು, ಡಿ.12: ಸಾಮರಸ್ಯ ನಡಿಗೆ ಸಮಯದಲ್ಲಿ ವ್ಯಾಪಕ ಪೊಲೀಸ್‌ ಭದ್ರತೆ ಕಲ್ಪಿಸಲಾಗಿತ್ತು. ಪಾದಯಾತ್ರೆ ಸಂಚರಿಸುವ ಸಮಯದಲ್ಲಿ ಇಕ್ಕೆಲದ ವಾಹನಗಳ ಸಂಚಾರ ಹಾಗೂ ಪ್ರತಿ ಬೆಳವಣಿಗೆಯನ್ನು ಪೊಲೀಸರು ವೀಡಿಯೋ ಚಿತ್ರೀಕರಣ   ನಡೆಸಿದರು. ಸಶಸ್ತ್ರ  ಪೊಲೀಸರು ಕೂಡ ಭದ್ರತೆಯಲ್ಲಿ ಕೈಜೋಡಿಸಿದ್ದರು.

Advertisement

ಇಡೀ ನಡಿಗೆಯುದ್ದಕ್ಕೂ ಅಗ್ನಿಶಾಮಕ ದಳ ಹಾಗೂ ಆ್ಯಂಬುಲೆನ್ಸ್‌ ವ್ಯವಸ್ಥೆಯನ್ನು  ವಿಶೇಷವಾಗಿ ಕೈಗೊಳ್ಳಲಾಗಿತ್ತು.  ಭದ್ರತೆ ಕಾರಣಕ್ಕೆ ಹಲವಾರು ಪೊಲೀಸರೂ ಜಾಥಾದಲ್ಲಿ ಹೆಜ್ಜೆ ಹಾಕಿದರು. ಸೂಕ್ಷ್ಮ ಪ್ರದೇಶವಾದ ಕಲ್ಲಡ್ಕದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಧೀರ್‌ ಕುಮಾರ್‌ ರೆಡ್ಡಿ ಹಾಗೂ ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಅವರು ಹಾಜರಿದ್ದು ಭದ್ರತೆ ಪರಿಶೀಲಿಸಿದರು.

ಅರ್ಕುಳ: ಸರಕಾರಿ ಬಸ್‌ಗೆ ಕಲ್ಲು ತೂರಾಟ 
ಮಂಗಳೂರು:
ಬೆಂಗಳೂರಿಂದ ಮಂಗಳೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಫರಂಗಿಪೇಟೆ ಸಮೀಪ ಅರ್ಕುಳದ ಮೇರಮಜಲು ಕ್ರಾಸ್‌ ಬಳಿ ಮಂಗಳವಾರ ಬೆಳಗಿನ ಜಾವ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಬಸ್‌ನ ಕಿಟಕಿ ಗಾಜು ಮತ್ತು ಬಸ್ಸಿನ ಮುಖ್ಯ ಬಾಗಿಲಿನ ಗಾಜು ಪುಡಿಯಾಗಿ 10,000 ರೂ. ನಷ್ಟ ಸಂಭವಿಸಿದೆ. ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ 2ನೇ ಘಟಕಕ್ಕೆ ಸೇರಿರುವ ಬಸ್‌ ಬೆಂಗಳೂರಿಂದ‌ ಮೈಸೂರು ಮೂಲಕ ಆಗಮಿಸುತ್ತಿತ್ತು. ಮೇರಮಜಲು ಕ್ರಾಸ್‌ ಬಳಿ ತಲುಪು ತ್ತಿದ್ದಂತೆ ಕಲ್ಲು ತೂರಲಾಗಿದೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸರು ಕೇಸು ದಾಖಲಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next