Advertisement
ಎರಡೊಂದ್ಲ ಎರಡು, ಎರಡೆರಡ್ಲ ನಾಕು… ಹೀಗೆ ಮಗ್ಗಿ ಹೇಳದೆ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದವರಿಲ್ಲ. ಶಾಲೆಯಲ್ಲಿ ಪ್ರತಿಯೊಬ್ಬರೂ ಸರದಿ ಪ್ರಕಾರವಾಗಿ ಮಗ್ಗಿಯ ಪಠಣ ಮಾಡಲೇಬೇಕಿತ್ತು. ಪ್ರಾಥಮಿಕ ಶಾಲೆಯ ಮಾಸ್ತರರಾಗಿದ್ದ ಮಲ್ಲಿಕಾರ್ಜುನ ಸರ್, ನಮಗೆ ನೂರು ಸಾರಿ ಮಗ್ಗಿ ಬರೆದುಕೊಂಡು ಬರಲು ಹೇಳುತ್ತಿದ್ದರು. ಬೆಳಗ್ಗೆ 10 ಗಂಟೆಗೆ ಬರುತ್ತಿದ್ದ ಜಯ ಬಸ್‌ನಲ್ಲಿ ಅವರು ಬಂದಿಳಿದರೆ ಸಾಕು; ನಮ್ಮ ಎದೆ, ಶಾಲೆಯ ಬೆಲ್‌ನಂತೆ ಹೊಡೆದುಕೊಳ್ಳುತ್ತಿತ್ತು. ಪ್ರಾರ್ಥನೆ ಹೇಳುವ ಸಂದರ್ಭದಲ್ಲಿ ಎಲ್ಲರೂ ಮನಸ್ಸಿನಲ್ಲೇ ಮಗ್ಗಿ ಅಭ್ಯಾಸ ಮಾಡುವುದನ್ನು ಮಾತ್ರ ಮರೆಯುತ್ತಿರಲಿಲ್ಲ. ಶಾಲೆಯ ಪಕ್ಕದಲ್ಲೇ ಇರುವ ಕಾಳಿಂಗೇಶ್ವರ ದೇವರಿಗೆ ದಿನಾ ನಮಸ್ಕರಿಸಿ, “ಇವತ್ತು ಸಾರ್ ಮಗ್ಗಿ ಕೇಳದೇ ಇರಲಿ’ ಎಂದು ಹರಕೆ ಹೊತ್ತುಕೊಳ್ಳುವ ಗೆಳೆಯ ಗುರುಮೂರ್ತಿಗೆ, ಯಾವತ್ತೂ ಮಗ್ಗಿ ನೆನಪಿಗೆ ಬರುತ್ತಿರಲಿಲ್ಲ. ಆದರೂ, ಆತನ ಹರಕೆ ಫಲ ನೀಡಿ ಕೆಲವೊಮ್ಮೆ ಮೇಷ್ಟ್ರು ಕ್ಲಾಸ್‌ನಲ್ಲಿ ಮಗ್ಗಿ ಹೇಳಿಸದೆ, ಮೀಟಿಂಗ್, ಟ್ರೆ„ನಿಂಗ್ ಎಂದು ಹೋಗಿದ್ದಿದೆ. ಆದರೆ ಕೆಲವೊಮ್ಮೆ ನಮ್ಮ ಪ್ರಾರ್ಥನೆ ಉಲ್ಟಾ ಹೊಡೆದು, ಮೀಟಿಂಗ್ ಮುಗಿಸಿ ಮತ್ತೆ ಕ್ಲಾಸ್‌ಗೆ ಬಂದು, “ಮಗ್ಗಿ ಹೇಳಿ’ ಎಂದಾಗ ಜೀವ ಬಾಯಿಗೆ ಬಂದಿರುತ್ತಿತ್ತು.
ನಾನು ಹೋಂ ವರ್ಕ್ ಬರೆಯುತ್ತಿದ್ದ ವಿದ್ಯಾ ನೋಟ್‌ಬುಕ್‌ಗಳನ್ನೆಲ್ಲ, ತಾತ ಅವರ ಟ್ರಂಕ್‌ನಲ್ಲಿ ಎತ್ತಿಟ್ಟಿದ್ದದ್ದು ನನಗೆ ಗೊತ್ತೇ ಇರಲಿಲ್ಲ. ಒಮ್ಮೆ ಹಬ್ಬದ ಪ್ರಯುಕ್ತ ಮನೆಯನ್ನೆಲ್ಲ ಸ್ವತ್ಛಗೊಳಿಸುವಾಗ ಅವೆಲ್ಲಾ ನನ್ನ ಕೈಗೆ ಸಿಕ್ಕಿದ್ದವು. ಜೊತೆಗೆ ಹಳೆಯ ಆಟದ ಸಾಮಾನುಗಳೂ ಇದ್ದವು. ನೆಲ ಅಗೆಯುವಾಗ ನಿಧಿ ಸಿಕ್ಕರೆ ಎಷ್ಟು ಖುಷಿಯಾಗುತ್ತದೋ, ಅವತ್ತು ನನಗೆ ಅದಕ್ಕಿಂತಲೂ ಜಾಸ್ತಿ ಖುಷಿಯಾಗಿತ್ತು. ಒಂದು ಕ್ಷಣ ಬಾಲ್ಯದ ದಿನಗಳು ಕಣ್ಮುಂದೆ ಕುಣಿದವು. – ಈ. ಪ್ರಶಾಂತ್‌ಕುಮಾರ್, ಸೊರಬ