Advertisement

ಸಾವಯವ ಕೃಷಿಕರ ಒಕ್ಕೂಟಗಳಿಗೆ ಮೊದಲ ಯತ್ನದಲ್ಲೇ ಸಂತಸದ ನಗೆ

12:29 PM Sep 26, 2017 | Team Udayavani |

ಧಾರವಾಡ: ಸಾವಯವ ಕೃಷಿ ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಪ್ರಾಂತೀಯ ಸಹಕಾರಿ ಸಾವಯವ ಒಕ್ಕೂಟಗಳನ್ನು ರಚಿಸಿದೆ. ಧಾರವಾಡ ಕೃಷಿ ಮೇಳದಲ್ಲಿ ಇದೇ ಮೊದಲ ಬಾರಿಗೆ ಒಕ್ಕೂಟಗಳು ಸಾವಯವ ಉತ್ಪನ್ನಗಳ ಮಾರಾಟದಲ್ಲಿ ಪಾಲ್ಗೊಂಡಿದ್ದು, 8 ಒಕ್ಕೂಟಗಳು ಭಾಗವಹಿಸುವ ಮೂಲಕ ಮೇಳದ ಸಾವಯವ ಮಾರಾಟ ಮಳಿಗೆಗಳಲ್ಲಿ ತಮ್ಮದೇ ಪಾರುಪತ್ಯ ಮೆರೆದಿವೆ. 

Advertisement

ಕೃಷಿ ಮೇಳದ ಸಾವಯವ ಉತ್ಪನ್ನಗಳ ಮಾರಾಟ ವಿಭಾಗದಲ್ಲಿ ಬಂದಿರುವ ಮಳಿಗೆಗಳಲ್ಲಿ ಬಹುತೇಕವು ಒಕ್ಕೂಟಕ್ಕೆ ಸೇರಿದ್ದವಾಗಿದ್ದವು. ಗ್ರಾಹಕರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಸಾವಯವ ಉತ್ಪನ್ನಗಳ ರೈತರಿಗಿದ್ದ ಸೂಕ್ತ ಮಾರುಕಟ್ಟೆ ಕೊರತೆ ನೀಗಿಸುವ ನಿಟ್ಟಿನಲ್ಲಿ, ರಾಜ್ಯ ಸರಕಾರ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟ ರಚಿಸಿತ್ತು. ರಾಜ್ಯದಲ್ಲಿ 14 ಪ್ರಾಂತೀಯ ಒಕ್ಕೂಟಗಳಿವೆ. 

ಧಾರವಾಡ ಕೃಷಿ ಮೇಳದಲ್ಲಿ ಪ್ರಾಂತೀಯ ಸಹಕಾರಿ ಸಾವಯವ ಕೃಷಿಕರ ಸಂಘಗಳ ಒಟ್ಟು 8 ಒಕ್ಕೂಟಗಳು ಮಳಿಗೆ ಹಾಕಿದ್ದವು. ಉತ್ತರ ಕನ್ನಡ ಜಿಲ್ಲೆ ಪ್ರಾಂತೀಯ ಒಕ್ಕೂಟ, ವಿಜಯಪುರ-ಬಾಗಲಕೋಟೆ ಜಿಲ್ಲೆಗಳ ಒಕ್ಕೂಟ,  ಬೆಳಗಾವಿ ಜಿಲ್ಲೆ ಒಕ್ಕೂಟ, ಅವಿಭಜಿತ ಧಾರವಾಡ ಜಿಲ್ಲೆ ಒಕ್ಕೂಟ, ಕಲಬುರಗಿ-ಯಾದಗಿರಿ-ಬೀದರ ಜಿಲ್ಲೆಗಳ ಒಕ್ಕೂಟ, ರಾಯಚೂರು-ಕೊಪ್ಪಳ-ಬಳ್ಳಾರಿ ಜಿಲ್ಲೆಗಳ ಒಕ್ಕೂಟ, ಚಿತ್ರದುರ್ಗ-ದಾವಣಗೆರೆ ಜಿಲ್ಲೆಗಳ ಒಕ್ಕೂಟ, ಹಾಸನ-ಕೊಡುಗು ಜಿಲ್ಲೆಗಳ ಒಕ್ಕೂಟಗಳು ಕೃಷಿ ಮೇಳದಲ್ಲಿ ಪಾಲ್ಗೊಂಡಿದ್ದವು.  

ವಿವಿಧ ಬ್ರ್ಯಾಂಡ್‌ಗಳಡಿ ಮಾರಾಟ: ಉತ್ತರ ಕನ್ನಡ ಜಿಲ್ಲೆಯ ಪ್ರಾಂತಿಯ ಒಕ್ಕೂಟದಲ್ಲಿ 24 ಸಂಘಗಳಿದ್ದು, ಸುಮಾರು 3,200 ಸಾವಯವ ರೈತರಿದ್ದಾರೆ. ವಿಶೇಷವಾಗಿ ಕೋಕಂ, ಜೇನುತುಪ್ಪ, ಯಾಲಕ್ಕಿ, ದಾಲಿcನ್ನಿ, ಲವಂಗ, ಹಲಸಿನ ಚಾಕೋಲೇಟ್‌, ವಿವಿಧ ಚಿಪ್ಸ್‌, ಹಪ್ಪಳ ಹೀಗೆ ತರಹೇವಾರಿ ಉತ್ಪನ್ನಗಳನ್ನು ಮಾರಾಟ ಮಾಡಲಾಗಿದೆ.

ಕೋಕಂ, ಜೇನುತುಪ್ಪ ಖಾಲಿಯಾಗಿ ಎರಡನೇ ಬಾರಿಗೆ ತರಿಸಬೇಕಾಯಿತು ಎಂಬುದು ಒಕ್ಕೂಟದ ಸಿಇಒ ವಿಕಾಸ ಅವರ ಅನಿಸಿಕೆ. ವಿಜಯಪುರ-ಬಾಗಲಕೋಟೆ ಜಿಲ್ಲೆಗಳ ಒಕ್ಕೂಟದಲ್ಲಿ 40 ಸಂಘಗಳಿದ್ದು, 2,400 ಸದಸ್ಯರಿದ್ದಾರೆ. “ಅಮೃತ’ ಬ್ರ್ಯಾಂಡ್‌ ನಡಿಯಲ್ಲಿ ಸಿರಿಧಾನ್ಯ, ಬೆಲ್ಲ, ಬೆಲ್ಲದ ಪುಡಿ, ಆಹಾರ ಧಾನ್ಯಗಳು, ಕುಸುಬೆ ಎಣ್ಣೆ ಇನ್ನಿತರ ಉತ್ಪನ್ನ ಮಾರಾಟವಾಗಿವೆ.

Advertisement

ಉತ್ತಮ ಸ್ಪಂದನೆ ದೊರೆತ್ತಿದೆ ಎಂಬುದು ಒಕ್ಕೂಟದ ನಿತ್ಯಾನಂದ ಅವರ ಅನಿಸಿಕೆ. ಬೆಳಗಾವಿ ಜಿಲ್ಲೆ ಒಕ್ಕೂಟದಲ್ಲಿ 35 ಸಂಘಗಳಿದ್ದು, ಸುಮಾರು 3 ಸಾವಿರಕ್ಕೂ ಅಧಿಕ ಸದಸ್ಯರಿದ್ದಾರೆ. ಬಿಳಿ ಜೋಳ, ಹೆಸರು, ಉದ್ದು, ಅಕ್ಕಿ , ಸಿರಿ ಧಾನ್ಯಗಳನ್ನು ಮಾರಾಟ ಮಾಡಲಾಗಿದೆ. ವಹಿವಾಟು ಖುಷಿ ಕೊಟ್ಟಿದೆ ಎಂಬುದು ಒಕ್ಕೂಟದ ಬಾಳಗೌಡ ಅಪ್ಪಗೌಡ ಪಾಟೀಲರ ಅಭಿಪ್ರಾಯ. 

ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಒಟ್ಟು 28 ಸಂಘಗಳು ಇದ್ದು, ಮೇಳದಲ್ಲಿ ಒಳ್ಳೆ ಸ್ಪಂದನೆ ಸಿಕ್ಕಿದೆ ಎಂಬುದು ಒಕ್ಕೂಟದ ಶಿವಾನಂದ ಅವರ ಅನಿಸಿಕೆ. ಚಿತ್ರದುರ್ಗ-ದಾವಣಗೆರೆ ಜಿಲ್ಲೆಗಳ ಒಕ್ಕೂಟದಡಿ “ದೇಶಿ ಆಗ್ಯಾìನಿಕ್‌’ ಹೆಸರಲ್ಲಿ ಉತ್ಪನ್ನ ಮಾರಾಟ ಮಾಡಲಾಗುತ್ತಿದ್ದು, ಉತ್ತಮ ಸ್ಪಂದನೆ ದೊರೆತಿದೆ.

ದಾವಣಗೆರೆ ಜಿಲ್ಲೆಯಲ್ಲಿ ಈ ಬಾರಿ ಸುಮಾರು 500 ಎಕರೆಯಷ್ಟು ಕೊರಲು ಬಿತ್ತನೆ ಮಾಡಲಾಗಿದೆ ಎಂಬುದು ಚಂದ್ರಗೌಡ ಅವರ ಅನಿಸಿಕೆ. ಕಲಬುರಗಿ- ಯಾದಗಿರಿ-ಬೀದರ ಜಿಲ್ಲೆಗಳ ಒಕ್ಕೂಟದಲ್ಲಿ 32 ಸಂಘಗಳಿದ್ದು, ಸುಮಾರು 3,200 ಸದಸ್ಯರಿದ್ದಾರೆ. ಮೇಳದಲ್ಲಿ ಉತ್ತಮ ಸ್ಪಂದನೆ ಬಂದಿದೆ.

ಇನ್ನಷ್ಟು ಸಾಮಗ್ರಿ ತರಬೇಕಾಗಿತ್ತು ಎಂದೆನಿಸುತ್ತಿದೆ ಎಂಬುದು ಶಂಕರ ಅವರ ಅನಿಸಿಕೆ.  ರಾಯಚೂರು-ಕೊಪ್ಪಳ-ಬಳ್ಳಾರಿ ಜಿಲ್ಲೆಗಳ ಒಕ್ಕೂಟದಲ್ಲಿ 13 ಸಂಘಗಳಿದ್ದು, ಸುಮಾರು 600ಕ್ಕೂ ಅಧಿಕ ಸದಸ್ಯರಿದ್ದಾರೆ. ನವಣೆ, ಸೋನಾ ಮಸೂರಿ ಅಕ್ಕಿ, ಕುಸುಬೆ ಎಣ್ಣೆ ಇನ್ನಿತರ ಉತ್ಪನ್ನಗಳನ್ನು “ಸ್ವದೇಶಿ ಆಗ್ಯಾನಿಕ್‌’ ಬ್ರ್ಯಾಂಡ್‌ನ‌ಡಿ ಮಾರಾಟ ಮಾಡಲಾಗುತ್ತಿದೆ.

ಕೃಷಿ ಮೇಳದ ವಹಿವಾಟು ತೃಪ್ತಿ ತಂದಿದೆ ಎಂಬುದು ಮಾಬು ಸುಬಾನ್‌ ಅವರ ಅನಿಸಿಕೆ. ಇದಲ್ಲದೆ ಮೇಳದಲ್ಲಿ ವಿಜಯಪುರ ಜಿಲ್ಲೆಯ ಮಲ್ಲೇಶಪ್ಪ ಮುರುಗೆಪ್ಪ ಸೇರಿದಂತೆ ಅನೇಕ ಸಾವಯವ ರೈತರು, ಸಾವಯವ ಉತ್ಪನ್ನಗಳ ಮಾರಾಟಗಾರರು ಮಳಿಗೆ ಹಾಕಿದ್ದು ಬಹುತೇಕರಿಂದಲೂ ಉತ್ತಮ ವಹಿವಾಟಿನ ಅನಿಸಿಕೆ ವ್ಯಕ್ತವಾಗಿದೆ. 

* ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next