Advertisement

ಖಾಸಗಿ ಬ್ಯಾಂಕ್‌ ಹಿರಿಯ ಅಧಿಕಾರಿ ಪತ್ನಿ ನೇಣಿಗೆ ಶರಣು

11:26 AM Jan 10, 2017 | |

ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಖಾಸಗಿ ಬ್ಯಾಂಕ್‌ ಹಿರಿಯ ಅಧಿಕಾರಿಯೊಬ್ಬರ ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೊಮ್ಮನಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ ಕೋಡಿಚಿಕ್ಕನಹಳ್ಳಿ ಸಮೀಪ ಘಟನೆ ನಡೆದಿದೆ. 

Advertisement

ಇಲ್ಲಿನ ನಿವಾಸಿ ಪೂಜಾ (22) ಮೃತ ದುರ್ದೈವಿ. ಮನೆಯಲ್ಲಿ ಭಾನುವಾರ ಬೆಳಗ್ಗೆ ಪೂಜಿತಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮಧ್ಯಾಹ್ನ ಮೃತಳ ಸಂಬಂಧಿಕರು ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. 

ಎರಡು ವರ್ಷಗಳ ಹಿಂದೆ ಹಾಸನ ಜಿಲ್ಲೆ ಪೂಜಾ ಹಾಗೂ ಖಾಸಗಿ ಬ್ಯಾಂಕ್‌ ಹಿರಿಯ ಅಧಿಕಾರಿ ಶಿವರಾಜ್‌ ವಿವಾಹವಾಗಿದ್ದು, ಮದುವೆ ನಂತರ ಕೋಡಿಚಿಕ್ಕನಹಳ್ಳಿ ಬಳಿ ಅಪಾರ್ಟ್‌ಮೆಂಟ್‌ನಲ್ಲಿ ದಂಪತಿ ವಾಸವಾಗಿದ್ದರು. ಮದುವೆ ನಂತರ ಕೌಟುಂಬಿಕ ವಿಚಾರಗಳಿಗೆ ಸತಿ-ಪತಿ ನಡುವೆ ಮನಸ್ತಾಪವಾಗಿತ್ತು.

ಇತ್ತೀಚಿಗೆ ಶಿವರಾಜ್‌ ಸೋದರನ ಮದುವೆ ನಿಶ್ಚಯ ವಾಗಿದ್ದು, ಈ ಮದುವೆ ಸಿದ್ಧತಾ ಕಾರ್ಯಕ್ರಮಗಳಿಂದ ಪೂಜಾಳನ್ನು ಅವರು ದೂರವಿಟ್ಟಿದ್ದರು. ಜವಳಿ ಖರೀದಿ ಸಲುವಾಗಿ ಚಿಕ್ಕಪೇಟೆಗೆ ಭಾನುವಾರ ಶಿವರಾಜ್‌ ಕುಟುಂಬ ತೆರಳಿತು. ಆಗಲೂ ಆಕೆಯನ್ನು ಕರೆದಿರಲಿಲ್ಲ. ಈ ವಿಚಾರ ತಿಳಿದ ಪೂಜಾ, ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. 

ಬೆಳಗ್ಗೆ ತನ್ನ ಸೋದರ ಸಂಬಂಧಿಕರಿಗೆ ತಾನು ಬದುಕುವುದಿಲ್ಲ. ಇವತ್ತೇ ಕೊನೆ ದಿನವಾಗಿದೆ ಎಂದು ಪೂಜಾ ಎಸ್‌ಎಂಸ್‌ ಕಳುಹಿಸಿದ್ದಳು. ಈ ಸಂಗತಿ ತಿಳಿದ ಶಿವರಾಜ್‌, ಕೂಡಲೇ ಪತ್ನಿಗೆ ಮೊಬೈಲ್‌ ಹಲವು ಬಾರಿ ಕರೆ ಮಾಡಿದ್ದಾರೆ. ಆದರೆ, ಆಕೆಯಿಂದ ಪ್ರತಿಕ್ರಿಯೆ ಬಂದಿಲ್ಲ. ಇದರಿಂದ ಅನುಮಾನಗೊಂಡ ಅವರು, ತಕ್ಷಣವೇ ಬೊಮ್ಮನಹಳ್ಳಿ ಸಮೀಪ ನೆಲೆಸಿರುವ ತನ್ನ ಸಂಬಂಧಿಕರಿಗೆ ಕರೆ ಮಾಡಿ ಮನೆಗೆ ಹೋಗಿ ಪತ್ನಿ ಜತೆ ಮಾತನಾಡುವಂತೆ ಹೇಳಿದರು.

Advertisement

ಅದರಂತೆ ಅವರು ಬಂದಾಗ ಆತ್ಮಹತ್ಯೆ ಘಟನೆ ಗೊತ್ತಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ. ಅಲ್ಲದೆ ಮೃತರ ಮನೆಯಲ್ಲಿ ಮರಣಪತ್ರ ಪತ್ತೆಯಾಗಿದ್ದು, ಇದರಲ್ಲಿ ತನ್ನ ಸಾವಿಗೆ ಪತಿ ಮತ್ತು ಮಾವನ ಕುಟುಂಬದವರು ಕಾರಣ ಎಂದು ಆರೋಪಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ವರದಕ್ಷಿಣೆ ಕಿರುಕುಳ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಶಿವರಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ. 

ಖಾಸಗಿ ನೌಕರನ ಕತ್ತು ಕೊಯ್ದು ಕೊಲೆ
ಬೆಂಗಳೂರು:
ಖಾಸಗಿ ಕಂಪನಿ ಉದ್ಯೋಗಿಯೊಬ್ಬರ ಕತ್ತು ಕೊಯ್ದು ಕೊಂದು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಪೀಣ್ಯ ಸಮೀಪ ಎಂಇಐ ಲೇಔಟ್‌ನಲ್ಲಿ ಸೋಮವಾರ ರಾತ್ರಿ ನಡೆದಿದೆ. ಇಲ್ಲಿ ನಿವಾಸಿ ವರದರಾಜು (32) ಕೊಲೆಯಾದ ದುರ್ದೈವಿ.  ವರದರಾಜು ಅವರ ಮನೆಗೆ ಸುಮಾರು ರಾತ್ರಿ 9.30ರಿಂದ 10 ಗಂಟೆಯೊಳಗೆ ಈ ಕೃತ್ಯ ನಡೆದಿದ್ದು, ಈ ಪ್ರಕರಣದಲ್ಲಿ ಮೃತನ ಪರಿಚಿತರು ಪಾಲ್ಗೊಂಡಿರುವ ಶಂಕೆ ಇದೆ ಎಂದು ಪೊಲೀಸರು ಹೇಳಿದ್ದಾರೆ.

ಖಾಸಗಿ ಕಂಪನಿಯ ಉದ್ಯೋಗದಲ್ಲಿದ್ದ ವರದರಾಜು ಅವರು, ಎಂಇಐ ಲೇಔಟ್‌ನಲ್ಲಿ ವಾಸವಾಗಿದ್ದರು. ರಾತ್ರಿ ಮನೆಯಲ್ಲಿದ್ದ ಒಬ್ಬರೇ ಇದ್ದಾಗ ದುಷ್ಕರ್ಮಿಗಳ ಪ್ರವೇಶವಾಗಿದೆ. ಆಗ ಅವರ ಕತ್ತು ಕೊಯ್ದು ಕೊಂದು ಆರೋಪಿಗಳು ಪರಾರಿಯಾಗಿದ್ದು, ಮೃತರ ಸ್ನೇಹಿತರು ಮನೆಗೆ ಬಂದಾಗ ಪ್ರಕರಣಗಳ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಪೀಣ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next