Advertisement

ಪೊಲೀಸರಿಗೇ ಪಿಸ್ತೂಲ್‌ ತೋರಿಸಿದವರಿಗೆ ಗುಂಡೇಟು

12:32 PM Apr 02, 2018 | Team Udayavani |

ಬೆಂಗಳೂರು: ನಗರದಲ್ಲಿ ಮತ್ತೆ ಪೊಲೀಸರ ಗುಂಡಿನ ಸದ್ದು ಕೇಳಿ ಬಂದಿದೆ. ಬಂಧಿಸಲು ಹೋದ ಪೊಲೀಸರ ಮೇಲೆಯೇ ಪಿಸ್ತೂಲ್‌ ಮತ್ತು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಇಬ್ಬರು ರೌಡಿಶೀಟರ್‌ಗಳ ಮೇಲೆ ತಲ್ಲಘಟ್ಟಪುರ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.

Advertisement

ಕೆಂಬತ್ತಹಳ್ಳಿ ಪರಮೇಶ್‌ ಅಲಿಯಾಸ್‌ ಪರ್ಮಿ ಹಾಗೂ ಈತನ ಸಹಚರ ಸಂತೋಷ್‌ನನ್ನು ಬಂಧಿಸಲಾಗಿದ್ದು, ಆರೋಪಿಗಳ ಬಲಗಾಲಿಗೆ ಗುಂಡೇಟು ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಂಧಿತರಿಂದ ಪೇದೆಗಳಾದ ಸುರೇಶ್‌ ಮತ್ತು ನೇಮಿನಾಥ್‌ಗ ಬಲಕೈಗಳಿಗೆ ತೀವ್ರ ರೀತಿಯಲ್ಲಿ ಗಾಯವಾಗಿದ್ದು, ಚಿಕಿತ್ಸೆಗೆ ದಾಖಲಾಗಿದ್ದಾರೆ.

2011-12ರಿಂದ ಪರಮೇಶ್‌ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಕೊಲೆ, ಡಕಾಯಿತಿ, ಕೊಲೆ ಯತ್ನ, ರಿಯಲ್‌ ಎಸ್ಟೇಟ್‌ ಹೆಸರಿನಲ್ಲಿ ವಂಚನೆ ಸೇರಿದಂತೆ 9 ಪ್ರಕರಣಗಳು ದಾಖಲಾಗಿವೆ. ಈತನ ವಿರುದ್ಧ ತಲ್ಲಘಟ್ಟಪುರ ಠಾಣೆಯಲ್ಲಿ ರೌಡಿಪಟ್ಟಿ ತೆರೆಯಲಾಗಿದೆ.

ಅಲ್ಲದೇ ಎರಡೂವರೆ ವರ್ಷಗಳಿಂದ ತಲೆಮರೆಸಿಕೊಂಡಿದ್ದು, ನ್ಯಾಯಾಲಯ ವಾರಂಟ್‌ ಜಾರಿ ಮಾಡಿದರೂ ಹಾಜರಾಗದೆ ನಾಪತ್ತೆಯಾಗಿದ್ದ. ಈತನ ಸಹಚರ ಸಂತೋಷ್‌ ವಿರುದ್ಧ 2 ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು.

ಚೆನ್ನೈ, ಆಂಧ್ರಪ್ರದೇಶ, ಮೈಸೂರಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ವಾರಾಂತ್ಯದಲ್ಲಿ ಬೆಂಗಳೂರಿಗೆ ಬಂದು ಹೋಗುತ್ತಿದ್ದ. ಈ ಮಾಹಿತಿ ಪಡೆದು ಐದಾರು ಬಾರಿ ದಾಳಿ ನಡೆಸಿದರೂ ಆರೋಪಿ ನಾಪತ್ತೆಯಾಗಿದ್ದ. ಈ ಮಧ್ಯೆ ಕಳೆದ 20 ದಿನಗಳ ಹಿಂದೆ ಆರೋಪಿ ಬಳಸುವ ಕಾರಿನ ನಂಬರ್‌ ಪತ್ತೆ ಹಚ್ಚಿದ್ದು, ಈತನ ಚಲನವಲನಗಳ ಮೇಲೆ ನಿಗಾವಹಿಸಲಾಗಿತ್ತು. ಅದರಂತೆ ಮೈಸೂರಿನಿಂದ ನಸುಕಿನಲ್ಲಿ ಬೆಂಗಳೂರಿಗೆ ಪ್ರವೇಶಿಸುವಾಗ ಬನಶಂಕರಿಯ 6ನೇ ಹಂತದ ನೈಸ್‌ ರಸ್ತೆಯಲ್ಲಿ ಬಂಧಿಸಲು ಹೋದಾಗ ಹಲ್ಲೆ ನಡೆಸಿದ ರೌಡಿಶೀಟರ್‌ ಮೇಲೆ ಗುಂಡಿನ ದಾಳಿ ನಡೆಸಲಾಯಿತು ಎಂದು ಅಧಿಕಾರಿ ಹೇಳಿದರು.

Advertisement

ಕಾಲಿಗೆ ಗುಂಡೇಟು: ಭಾನುವಾರ ಮುಂಜಾನೆ 5 ಗಂಟೆ ಸುಮಾರಿಗೆ ನೈಸ್‌ ಟೋಲ್‌ ಗೇಟ್‌ನಲ್ಲಿ ಬೆಂಗಳೂರು ಪ್ರವೇಶಿಸುತ್ತಿರುವ ಮಾಹಿತಿ ಪಡೆದು ತಲ್ಲಘಟ್ಟಪುರ ಠಾಣೆ ಇನ್‌ಸ್ಪೆಕ್ಟರ್‌ ಶಿವಸ್ವಾಮಿ ನೇತೃತ್ವದ ಪಿಎಸ್‌ಐ ಶ್ರೀನಿವಾಸ್‌, ಪೇದೆಗಳಾದ ಸುರೇಶ್‌, ಶ್ರೀಧರ್‌, ಗಜೇಂದ್ರ, ನೇಮಿನಾಥ್‌ ತಂಡ ಕಾರ್ಯಾಚರಣೆ ಆರಂಭಿಸಿತು.

ಆರೋಪಿಗಳನ್ನು ಬನಶಂಕರಿಯ 6ನೇ ಹಂತದ ನೈಸ್‌ ರಸ್ತೆಯಲ್ಲಿ ಹಿಂಬಾಲಿಸಿ ಕಾರು ಅಡ್ಡಗಟ್ಟಿ ಶರಣಾಗುವಂತೆ ಸೂಚಿಸಿತು. ಆದರೆ, ಕಾರಿನಿಂದ ಇಳಿದ ಪರಮೇಶ್‌ ಪಿಸ್ತೂಲ್‌ ತೆಗೆದು ಪೊಲೀಸರ ಕಡೆ ಗುರಿಯಾಗಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ.

ಇನ್ನು ಸಂತೋಷ್‌ ಲಾಂಗ್‌ ತೆಗೆದು ಬಂಧಿಸಲು ಹೋದ ಪೇದೆಗಳಾದ ಸುರೇಶ್‌ ಮತ್ತು ನೇಮಿನಾಥ್‌ರ ಬಲಕೈಗೆ ಹಲ್ಲೆ ನಡೆಸಿ, ಗಾಯಗೊಳಿಸಿದ. ಈ ವೇಳೆ ಪಿಐ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ. ಆದರೆ, ಪರಮೇಶ್‌ ಪಿಸ್ತೂಲ್‌ನಿಂದ ಇನ್‌ಸ್ಪೆಕ್ಟರ್‌ ಶಿವಸ್ವಾಮಿ ಮೇಲೆ ಗುಂಡಿನ ದಾಳಿ ನಡೆಸಲು ಮುಂದಾಗಿದ್ದಾನೆ.

ಆಗ ಆತ್ಮರಕ್ಷಣೆಗಾಗಿ ಇನ್‌ಸ್ಪೆಕ್ಟರ್‌ ಶಿವಸ್ವಾಮಿ ಪರಮೇಶ್‌ನ ಬಲತೊಡೆಗೆ ಗುಂಡು ಹಾರಿಸಿದರು. ಇತ್ತ ಆಕ್ರೋಶಗೊಂಡ ಸಂತೋಷ್‌ ಲಾಂಗ್‌ನಿಂದ ಮತ್ತೆ ಪೇದೆಗಳು ಹಾಗೂ ಪಿಎಸ್‌ಐ ಶ್ರೀನಿವಾಸ್‌ ಮೇಲೆ ಹಲ್ಲೆಗೆ ಯತ್ನಿಸಿದ್ದು, ಪಿಎಸ್‌ಐ ಶ್ರೀನಿವಾಸ್‌ ಈತನ ಬಲಗಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ ಎಂದು ಅಧಿಕಾರಿ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next