ಬೆಂಗಳೂರು: ಕೊಲೆ ಯತ್ನ ಪ್ರಕರಣದಲ್ಲಿ ಬಂಧಿಸಲು ತೆರಳಿದ ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ರೌಡಿಶೀಟರ್ ನಕುಲ್(25) ಅಲಿಯಾಸ್ ಕಿರಣ್ ಎಂಬಾತನ ಮೇಲೆ ಪೊಲೀಸರು ಗುಂಡು ಹಾರಿಸಿದ ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಈ ದಾಳಿಯಲ್ಲಿ ನಕುಲ್‌ನ ಬಲಗಾಲಿಗೆ ಗುಂಡು ತಗುಲಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆರೋಪಿ ಕೊಲೆ, ಕೊಲೆ ಯತ್ನ, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿದ್ದಾನೆ. ಈತನ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ರೌಡಿಪಟ್ಟಿ ತೆರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಕುಲ್, ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ. ನಂತರ ಮತ್ತೆ ರೌಡಿ ಚಟುವಟಿಕೆಗಳಲ್ಲಿ ತೊಡಗಿದ್ದು, ಶುಕ್ರವಾರ ಸಂಜೆ ಹಳೆ ದ್ವೇಷದ ಹಿನ್ನೆಲೆಯಲ್ಲಿ ಜೋಸೆಫ್ ಎಂಬಾತನ ಕೊಲೆಗೆ ಯತ್ನಿಸಿದ್ದ. ಈ ಬಗ್ಗೆ ಜೋಸೆಫ್ ಪೊಲೀಸರಿಗೆ ದೂರು ನೀಡಿದ್ದ. ಈ ಸಂಬಂಧ ಶನಿವಾರ ನಸುಕಿನಲ್ಲಿ ಕಾರ್ಯಾಚರಣೆ ನಡೆಸಿದ ವಿದ್ಯಾರಣ್ಯಪುರ ಠಾಣೆ ಇನ್‌ಸ್ಪೆಕ್ಟರ್ ಪುನೀತ್ ತಮ್ಮ ತಂಡದೊಂದಿಗೆ ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದರು.
ವಿದ್ಯಾರಣ್ಯಪುರದ ರೈನ್ ಬೋ ಕಾಲೋನಿ ಬಳಿ ದರೋಡೆಗೆ ಸಂಚು ರೂಪಿಸಿದ್ದ. ಈ ಮಾಹಿತಿ ಪಡೆದ ಪೊಲೀಸರು ಆರೋಪಿ ಬಂಧಿಸಲು ಮುಂದಾದರು. ಆಗ ನಕುಲ್ ಪೊಲೀಸ್ ತಂಡದಲ್ಲಿದ್ದ ಗೃಹ ರಕ್ಷಕ ದಳದ ಸಿಬ್ಬಂದಿ ಸಿದ್ದರಾಜು ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ.
ಈ ವೇಳೆ ಇನ್‌ಸ್ಪೆಕ್ಟರ್ ಪುನೀತ್, ಎರಡು ಸುತ್ತು ಗುಂಡು ಹಾರಿಸಿದ್ದು, ನಕುಲ್‌ನ ಬಲಗಾಲಿಗೆ ಗುಂಡು ತಗುಲಿ ಕುಸಿದು ಬಿದ್ದಿದ್ದಾನೆ. ಆತನ ಇಬ್ಬರು ಸಹಚರರು ನಾಪತ್ತೆಯಾಗಿದ್ದಾರೆ. ಆರೋಪಿಯ ಹಲ್ಲೆಯಿಂದ ಗಾಯಗೊಂಡಿದ್ದ ಸಿದ್ದರಾಜು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2016ರ ಡಿಸೆಂಬರ್‌ನಲ್ಲಿ ಯಲಹಂಕ ಉಪನಗರದಲ್ಲಿ ನಡೆದಿದ್ದ ಪುರುಷೋತ್ತಮ್ ಎಂಬಾತನ ಕೊಲೆ ಪ್ರಕರಣದಲ್ಲಿ ನಕುಲ್ ಪ್ರಮುಖ ಆರೋಪಿ ಆಗಿದ್ದು, ಜೈಲು ಸೇರಿದ್ದ. ಕೆಲ ತಿಂಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದು, ಮತ್ತೆ ಅದೇ ರೌಡಿಚಟುವಟಿಕೆಗಳನ್ನು ಮುಂದುವರಿಸಿದ್ದ. ಈತನ ವಿರುದ್ಧ ಯಲಹಂಕ, ಯಲಹಂಕ ಉಪನಗರ, ವಿದ್ಯಾರಣ್ಯಪುರ ಠಾಣೆ ಸೇರಿದಂತೆ ಹಲವು ದೂರುಗಳು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.