Advertisement

ಗನ್‌ ತೆಗೆದು ಗುರಿಯಿಟ್ಟಿದ್ದಕ್ಕೆ ಗುಂಡು ಹಾರಿಸಿದೆ

09:40 PM May 17, 2019 | Lakshmi GovindaRaj |

ಮೈಸೂರು: ನಗರದಲ್ಲಿ ಗುರುವಾರ ನಡೆದ ಪೊಲೀಸರ ಶೂಟೌಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯನಗರ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ. ಶೂಟೌಟ್‌ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲಾಗಿದೆ.

Advertisement

ಶೂಟೌಟ್‌ನಲ್ಲಿ ಮೃತಪಟ್ಟ ಪಂಜಾಬ್‌ ಮೂಲದ ಸುಕ್ವಿಂದ್‌ ಸಿಂಗ್‌ ಮೇಲೆ ಫೈರಿಂಗ್‌ ಮಾಡಿದ ಇನ್ಸ್‌ಪೆಕ್ಟರ್‌ ಬಿ.ಜಿ.ಕುಮಾರ್‌ ನೀಡಿರುವ ದೂರಿನ ಆಧಾರದ ಮೇಲೆ ಎಫ್ಐಆರ್‌ ದಾಖಲಾಗಿದ್ದು, ಅದರಲ್ಲಿ 500 ಕೋಟಿ ರೂ. ಮೌಲ್ಯದ ರದ್ದುಗೊಂಡಿರುವ ನೋಟುಗಳ ಬದಲಾವಣೆ ದಂಧೆ ನಡೆಯುತ್ತಿತ್ತು ಎನ್ನುವ ಮಾಹಿತಿಯನ್ನು ದಾಖಲಿಸಲಾಗಿದೆ.

ಎಫ್ಐಅರ್‌ನಲ್ಲಿರುವಂತೆ, ನಾನು ಪೊಲೀಸ್‌ ನಿರೀಕ್ಷಕನಾಗಿ ವಿಜಯನಗರ ಪೊಲೀಸ್‌ ಠಾಣೆಯಲ್ಲಿ 6 ತಿಂಗಳಿನಿಂದ ಕರ್ತವ್ಯ ನಿರ್ವಹಿಸುತ್ತಿದ್ದು, 3 ವಾರಗಳಿಂದ ನಗರದಲ್ಲಿ ಹೆಚ್ಚಿನ ಸರಗಳ್ಳತನಗಳು ವರದಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಪ್ರತಿದಿನ ಬೆಳಗಿನ ಜಾವ ನಗರದ ಎಲ್ಲಾ ಅಧಿಕಾರಿ ವತ್ತು ಸಿಬ್ಬಂದಿ ಜತೆ ಗಸ್ತು ನಿರ್ವಹಿಸುತ್ತಿದ್ದೆ.

ಮೇ 16 ರಂದು ಬೆಳಗ್ಗೆ 8 ಗಂಟೆಗೆ ನಮ್ಮ ಬಾತ್ಮೀದಾರರೊಬ್ಬರು ದೂರವಾಣಿ ಕರೆ ಮಾಡಿ, ನಗರದಲ್ಲಿ ಅಮಾನ್ಯಿಕರಣಗೊಂಡ ನೋಟುಗಳ ಬದಲಾವಣೆ ದಂಧೆ ನಡೆಯುತ್ತಿದೆ. ಅಮಾನ್ಯಿಕರಣಗೊಂಡ ನೋಟು ಪಡೆದು ಚಲಾವಣೆಯಲ್ಲಿರುವ ನೋಟು ನೀಡುವುದಾಗಿ ಒಬ್ಬ ವ್ಯಕ್ತಿ ಹೇಳುತ್ತಿದ್ದಾನೆ. ನನ್ನಿಂದ 10 ಲಕ್ಷ ರೂ. ಪಡೆದು ವಾಪಸ್‌ ನೀಡದೆ ಮೋಸ ಮಾಡಿದ್ದಾನೆ.

ಈಗ ಈತ 500 ಕೋಟಿ ರೂ. ಅಮಾನ್ಯಿಕರಣಗೊಂಡ ನೋಟು ಬದಲಾಯಿಸಿ ಕೊಡುವುದಾಗಿ ತಿಳಿಸಿದ್ದ. ಆತ ವಿಜಯನಗರದ ಎಸ್‌.ವಿ.ಅಪಾರ್ಟ್‌ಮೆಂಟ್‌ ಕಡೆ ಬರುವುದಾಗಿ ತಿಳಿಸಿದ್ದಾನೆಂದು ನನಗೆ ಮಾಹಿತಿ ನೀಡಿದರು. ಕೆಎ 09 ಸಿ 6031 ಸಂಖ್ಯೆಯ ಕಾರಿನಲ್ಲಿ ಅಲ್ಲಿಗೆ ಬರುತ್ತಾನೆ ಎಂದು ನನ್ನ ಮೊಬೈಲ್‌ಗೆ ಮೆಸೇಜ್‌ ಮಾಡಿದ್ದರು.

Advertisement

ತಕ್ಷಣ ನಮ್ಮ ಸಿಬ್ಬಂದಿ ಎಎಸ್‌ಐ ವೆಂಕಟೇಶ್‌ಗೌಡ , ಸಿಸಿ ಮಹೇಶ್‌, ಪಿಸಿ ವೀರಭದ್ರ ರವರೊಂದಿಗೆ ಬೆಳಗ್ಗೆ 9.15 ಗಂಟೆಗೆ ವೇಳೆಗೆ ಎಸ್‌.ಎ. ಅಪಾರ್ಟ್‌ಮೆಂಟ್‌ ಸ್ಥಳಕ್ಕೆ ಹೋದ ಕೂಡಲೇ ಆ ಕಾರು ನಮಗೆ ಎದುರಾಯಿತು. ನಮ್ಮನ್ನು ನೋಡಿದ ಕೂಡಲೇ ಕಾರಿನಲ್ಲಿದ್ದಾತ ಕೆಳಗಿಳಿದು ನನಗೆ ಕಾಲಿನಿಂದ ಒದ್ದು ನನ್ನ ಪಿಸ್ತೂಲನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದನು.

ಜತೆಗೆ ನಮ್ಮ ಸಿಬ್ಬಂದಿಯನ್ನು ಬಿಗಿಯಾಗಿ ಹಿಡಿದುಕೊಂಡ. ಆ ಸಮಯದಲ್ಲಿ ನಾನು ನಮ್ಮ ಸಿಬ್ಬಂದಿಯನ್ನು ಬಿಡುವಂತೆ ವಿನಂತಿ ಮಾಡಿದೆ. ಆದರೂ ಅವರನ್ನು ಬಿಡದಂತೆ ಬಿಗಿಯಾಗಿ ಹಿಡಿದುಕೊಂಡಿದ್ದನು. ನಾನು ಕೂಡಲೇ ನನ್ನ ಪಿಸ್ತೂಲಿನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದೆ.

ಆದರೂ, ಅವರನ್ನು ಬಿಡದೆ ತನ್ನ ಬಳಿಯಿದ್ದ ಗನ್‌ ತೆಗೆದು ನಮ್ಮ ಮೇಲೆ ಗುರಿಯಿಟ್ಟು ಗುಂಡು ಹಾರಿಸಲು ಪ್ರಯತ್ನಿಸಿದ. ಕಾರಣ ನಾನು ನನ್ನ ಸಿಬ್ಬಂದಿ ಮತ್ತು ನನ್ನ ಪ್ರಾಣಕ್ಕೆ ತೊಂದರೆಯಾಗುತ್ತದೆ ಎಂದು ತಿಳಿದು ಅಂತಿಮವಾಗಿ ಸಿಬ್ಬಂದಿ ಪ್ರಾಣ ರಕ್ಷಣೆ ಮತ್ತು ಆತ್ಮರಕ್ಷಣೆಗಾಗಿ ನನ್ನ ಸರ್ವೀಸ್‌ ಪಿಸ್ತೂಲ್‌ನಿಂದ ದಂಧೆಕೋರನಿಗೆ ಗುಂಡು ಹಾರಿಸಿದೆ ಎಂದು ಇನ್ಸ್‌ಪೆಕ್ಟರ್‌ ಬಿ.ಜಿ.ಕುಮಾರ್‌ ದೂರಿನಲ್ಲಿ ತಿಳಿಸಿದ್ದಾರೆ.

ಶೂಟೌಟ್‌ ಪ್ರಕರಣ ಸಿಐಡಿಗೆ ಹಸ್ತಾಂತರ
ಮೈಸೂರು: ನಗರದಲ್ಲಿ ಗುರುವಾರ ನಡೆದ ಪೊಲೀಸರ ಶೂಟೌಟ್‌ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲಾಗಿದೆ. ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸುವಂತೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕರು ಆದೇಶ ಹೊರಡಿಸಿದ್ದು, ಈ ಸಂಬಂಧ ಡಿವೈಎಸ್‌ಪಿ ಚಂದ್ರಶೇಖರ್‌ ನೇತೃತ್ವದ ನಾಲ್ವರು ಪೊಲೀಸ್‌ ಅಧಿಕಾರಿಗಳ ತಂಡ ಶುಕ್ರವಾರ ಸಂಜೆ ಮೈಸೂರಿಗೆ ಆಗಮಿಸಿ ತನಿಖೆ ಆರಂಭಿಸಿದೆ.

ಶೂಟೌಟ್‌ ಪ್ರಕರಣ ನಡೆದ ಸ್ಥಳಕ್ಕೆ ಭೇಟಿ ನೀಡಿದ ತನಿಖಾ ತಂಡ, ಸ್ಥಳ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದೆ. ಇನ್ನು ದಂಧೆ ಕೋರರು ಉಳಿದುಕೊಂಡಿದ್ದ ಖಾಸಗಿ ಹೋಟೆಲ್‌, ಬಾತ್ಮೀದಾರ ಸೇರಿದಂತೆ ಅನೇಕರನ್ನು ವಿಚಾರಣೆ ನಡೆಸಲಿದ್ದಾರೆ.

ಶವಗಾರದಲ್ಲಿ ಮೃತದೇಹ: ಪೊಲೀಸರ ಗುಂಡೇಟಿಗೆ ಮೃತಪಟ್ಟ ಪಂಜಾಬ್‌ ಮೂಲದ ಸುಕ್ವಿಂದ್‌ ಸಿಂಗ್‌ (40) ಮೃತದೇಹವನ್ನು ಕೆ.ಆರ್‌.ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿ, ಅಗತ್ಯ ಭದ್ರತೆ ಕಲ್ಪಿಸಲಾಗಿದೆ. ಮೃತದೇಹವನ್ನು ಫ್ರೀಜರ್‌ನಲ್ಲಿರಿಸಿದ್ದು, ಶವಾಗಾರದ ಬಳಿ ಸಿಎಆರ್‌ ಪೊಲೀಸರ ತಂಡ ನಿಯೋಜನೆ ಮಾಡಲಾಗಿದೆ.ಮೃತನ ಕುಟುಂಬಸ್ಥರು ಪಂಜಾಬ್‌ನಿಂದ ಆಗಮಿಸಿದ ನಂತರ ಮರಣೋತ್ತರ ಪರೀಕ್ಷೆ ನಡೆಯಲಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next