Advertisement

ಬಂದೂಕು ಲಾಬಿಯ ಬಿಗಿ ಹಿಡಿತ

10:20 AM Oct 04, 2017 | Team Udayavani |

ಅಮೆರಿಕದ ಲಾಸ್‌ ವೇಗಾಸ್‌ನಲ್ಲಿ ರವಿವಾರ ರಾತ್ರಿ ಸಂಭವಿಸಿರುವ ಭೀಕರ ಹತ್ಯಾಕಾಂಡ ಆ ದೇಶದ ಬಂದೂಕು ಸಂಸ್ಕೃತಿಯ ಕರಾಳ ದರ್ಶನ ಮಾಡಿದೆ. ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರ ಮೇಲೆ ಮತಿಗೆಟ್ಟ ಮುದುಕನೊಬ್ಬ ಹೊಟೇಲಿನ 32ನೇ ಮಹಡಿಯಲ್ಲಿ ನಿಂತುಕೊಂಡು ಮನಸೋ ಇಚ್ಛೆ ಗುಂಡು ಹಾರಿಸಿದ ಪರಿಣಾಮವಾಗಿ 59 ಮಂದಿ ಮಡಿದು 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಆಧುನಿಕ ಅಮೆರಿಕದ ಇತಿಹಾಸದಲ್ಲಿಯೇ ಅತಿ ಭೀಕರವಾದ ಗುಂಡಿನ ದಾಳಿಯಾದ ಘಟನೆಯಿದು. ಘಟನೆ ಸಂಭವಿಸಿದ ಬೆನ್ನಿಗೆ ಐಸಿಸ್‌ ಉಗ್ರ ಸಂಘಟನೆ ಸಿರಿಯಾದ ಯಾವುದೋ ಒಂದು ಮೂಲೆಯಲ್ಲಿ ಅಡಗಿಕೊಂಡು ಇದು ನಾವೇ ಮಾಡಿದ ಕೃತ್ಯ ಎಂದು ಹೇಳಿರುವುದನ್ನು ನಂಬಲು ಸಾಧ್ಯವಿಲ್ಲ. ಗುಂಡು ಹಾರಿಸಿದ ವ್ಯಕ್ತಿ ಸ್ಟೀಫ‌ನ್‌ ಪೆಡಾಕ್‌ ಎಂಬಾತ ಅಮೆರಿಕನ್‌ ಬಿಳಿಯ. ಈತ ಈಗ ಇಸ್ಲಾಂಗೆ ಮತಾಂತರಗೊಂಡ ಬಳಿಕ ಉಗ್ರನಾಗಿದ್ದಾನೆ ಎಂದು ಐಸಿಸ್‌ ಹೇಳಿಕೊಂಡಿದೆ. ಸದ್ಯ ಅಳಿವಿನಂಚಿಗೆ ತಲುಪಿರುವ ಐಸಿಸ್‌ ಈಗ ಜಗತ್ತಿನ ಯಾವುದೇ ಮೂಲೆಯಲ್ಲಿ ಆಕ್ರಮಣ ನಡೆದರೂ ಇದು ತನ್ನದೇ ಕೃತ್ಯ ಎಂದು ಹೇಳಿಕೊಂಡು ತನ್ನ ಅಸ್ತಿತ್ವವನ್ನು ಸಾಬೀತುಪಡಿಸುವ ಸ್ಥಿತಿಗೆ ತಲುಪಿದೆ. ಹೀಗಾಗಿ ಲಾಸ್‌ ವೇಗಾಸ್‌ನ ಶೂಟೌಟ್‌ನಲ್ಲಿ ಐಸಿಸ್‌ ಪಾತ್ರ ಶಂಕಾಸ್ಪದ. ಆದರೆ ಈ ಘಟನೆ ಅಮೆರಿಕದ ಲಂಗುಲಗಾಮಿಲ್ಲದ ಬಂದೂಕು ಸಂಸ್ಕೃತಿಯ ಕುರಿತು ಮತ್ತೂಮ್ಮೆ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ. 

Advertisement

ಯಾರಿಗೆ ಬೇಕಾದರೂ ಯಾವುದೇ ರೀತಿಯ ಬಂದೂಕು ಖರೀದಿಸುವ ಸ್ವಾತಂತ್ರ್ಯ ಅಮೆರಿಕದಲ್ಲಿದೆ. ಸೈನಿಕರು ಉಪಯೋಗಿಸುವಂತಹ ಅಧಿಕ ಸಾಮರ್ಥ್ಯದ ಬಂದೂಕುಗಳೂ ಜನಸಾಮಾನ್ಯರಿಗೆ ನಿರಾಯಾಸವಾಗಿ ಸಿಗುತ್ತವೆ. ಅದರಲ್ಲೂ ಲಾಸ್‌ ವೇಗಾಸ್‌ನಲ್ಲಿ ಬಂದೂಕು ನಿಯಮಗಳು ಅತ್ಯಂತ ದುರ್ಬಲವಾಗಿವೆ. ರವಿವಾರದ ಘಟನೆಯಲ್ಲಿ 64ರ ಸ್ಟೀಫ‌ನ್‌ ಉಪಯೋಗಿಸಿರುವುದು ಸುಮಾರು 1000 ಮೀಟರ್‌ ದೂರದಿಂದ ಗುರಿಹಿಡಿದು ಗುಂಡು ಹಾರಿಸಬಲ್ಲ ಸಾಮರ್ಥ್ಯವಿರುವ ಬಂದೂಕು. ಅವನ ಮನೆಗೆ ದಾಳಿ ಮಾಡಿದಾಗ ಈ ಮಾದರಿಯ ಇನ್ನೂ 19 ಬಂದೂಕುಗಳು ಮತ್ತು ಧಾರಾಳ ಮದ್ದುಗುಂಡುಗಳು ಪತ್ತೆಯಾಗಿರುವುದು ಆ ದೇಶದಲ್ಲಿ ಬಂದೂಕುಗಳು ಎಷ್ಟು ಸುಲಭವಾಗಿ ಸಿಗುತ್ತದೆ ಎನ್ನುವುದಕ್ಕೊಂದು ಉದಾಹರಣೆ. ದೇಶದ ಸಂವಿಧಾನದಲ್ಲಿಯೇ ಜನರಿಗೆ ಬಂದೂಕು ಇಟ್ಟುಕೊಳ್ಳುವ ಹಕ್ಕನ್ನು ನೀಡಲಾಗಿದೆ. ಆದರೆ ಈ ಬಂದೂಕು ಸಂಸ್ಕೃತಿ ಮಾಡಿರುವ ಹಾನಿಯನ್ನು ನೋಡುವಾಗ ಬೆಚ್ಚಿಬೀಳುವಂತಾಗುತ್ತದೆ. ಅಮೆರಿಕದಲ್ಲಿ ಅತಿ ಹೆಚ್ಚು ಜನರು ಬಲಿಯಾಗಿರುವುದು ಭಯೋತ್ಪಾದನೆ, ಅಥವಾ ಬೇರೆ ಅವಘಡಗಳಿಗೆ ಅಲ್ಲ; ಬಂದೂಕು ಹಿಡಿದುಕೊಂಡು ಯದ್ವಾತದ್ವಾ ಗುಂಡು ಹಾರಿಸುವ ಹುಚ್ಚಾಟಗಳಿಗೆ. 2014ರಲ್ಲಿ 12,571, 2015ರಲ್ಲಿ 13,500, 2016ರಲ್ಲಿ 15,079 ಮತ್ತು ಹಾಲಿ ವರ್ಷ ಇಷ್ಟರತನಕ 11,652 ಮಂದಿ ಇಂತಹ ಹುಚ್ಚು ಶೂಟೌಟ್‌ಗಳಿಗೆ ಬಲಿಯಾಗಿದ್ದಾರೆ. ಪ್ರಸ್ತುತ ವರ್ಷ ಇಷ್ಟರ ತನಕ 273 ಶೂಟೌಟ್‌ಗಳು ಸಂಭವಿಸಿವೆ. ಅಂದರೆ ಸರಾಸರಿ ನಿತ್ಯ ಒಂದರಂತೆ ಗುಂಡು ಹಾರಿಸುವ ಹುಚ್ಚಾಟಗಳು ನಡೆದಿವೆ.  ಸರಿಯಾಗಿ ಎರಡು ವರ್ಷದ ಹಿಂದೆ ಓರ್ಲಾಂಡೊ ನೈಟ್‌ಕ್ಲಬ್‌ನಲ್ಲಿ ಇದೇ ಮಾದರಿಯ ಶೂಟೌಟ್‌ಗೆ 49 ಬಲಿಯಾದ ಸಂದರ್ಭದಲ್ಲಿ ಅಂದಿನ ಅಧ್ಯಕ್ಷ ಒಬಾಮ ಈ ರೀತಿ ವಿವೇಚನಾ ರಹಿತ ಶೂಟೌಟ್‌ ನಡೆಯುತ್ತಿರುವ ಆಧುನಿಕ ರಾಷ್ಟ್ರವೊಂದಿದ್ದರೆ ಅದು ಅಮೆರಿಕ ಮಾತ್ರ; ಸಾಮೂಹಿಕ ಹತ್ಯೆಗಳನ್ನು ತಡೆಯಲು ಬಂದೂಕುಗಳ ಮೇಲೆ ಕಠಿಣ ನಿಯಂತ್ರಣಗಳನ್ನು ಹೇರಬೇಕೆಂಬ ಸಾಮಾನ್ಯ ಜ್ಞಾನವೂ ನಮಗಿಲ್ಲ ಎಂದು ವಿಷಾದದಿಂದ ಹೇಳಿದ್ದರು. ಈ ಮಾತು ಸತ್ಯ ಎಂದು ಸಾಬೀತಾಗುತ್ತಿರುತ್ತದೆ. ಹಾಗೆಂದು ಅಮೆರಿಕದಲ್ಲಿ ಬಂದೂಕು ಸಂಸ್ಕೃತಿಯ ವಿರುದ್ಧ ಧ್ವನಿ ಎತ್ತಿದವರು ಇಲ್ಲ ಎಂದಲ್ಲ. 2015ರಲ್ಲೇ ಬಂದೂಕುಗಳ ಮೇಲೆ ಕಠಿಣ ನಿಯಂತ್ರಣ ಹೇರುವ ಸಲುವಾಗಿ ಕಿಂಗ್‌ ಥಾಮ್ಸನ್‌ ಮಸೂದೆಯನ್ನು ರಚಿಸಲಾಗಿತ್ತು. ಆದರೆ ರಾಜಕೀಯ ವಿರೋಧದಿಂದಾಗಿ ಈ ಮಸೂದೆ ಇನ್ನೂ ಸಂಸತ್ತಿನಲ್ಲಿ ಅಂಗೀಕಾರವಾಗಿಲ್ಲ. ಅದು ಅಂಗೀಕಾರವಾಗದಂತೆ ತಡೆಹಿಡಿದಿರುವುದು ಅಮೆರಿಕದ ಬಂದೂಕು ಉತ್ಪಾದಕರ ಬಲಿಷ್ಠ ಲಾಬಿ. ಸಮಸ್ತ ಬಂದೂಕು ಉತ್ಪಾದಕರ ಸಂಘಟನೆಯಾದ ನ್ಯಾಶನಲ್‌ ರೈಫ‌ಲ್‌ ಅಸೋಸಿಯೇಶನ್‌ ಸರಕಾರದ ಮೇಲೆ ಅದೆಷ್ಟು ಬಿಗಿಹಿಡಿತ ಹೊಂದಿದೆ ಎಂದರೆ, ಬಂದೂಕಿಗೆ ಸಂಬಂಧಪಟ್ಟ ಚಿಕ್ಕ ತಿದ್ದುಪಡಿಯಾಗಬೇಕಾದರೂ ಸರಕಾರ ಏದುಸಿರು ಬಿಡಬೇಕಾಗುತ್ತದೆ. ಹೀಗಾಗಿ ಎಷ್ಟೇ ದೊಡ್ಡ ದುರಂತಗಳು ನಡೆದರೂ ಅಮೆರಿಕದಲ್ಲಿ ಬಂದೂಕುಗಳ ಮೇಲೆ ನಿಯಂತ್ರಣ ಬೀಳಬಹುದು ಎನ್ನುವುದನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ. ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಲಾಸ್‌ ವೇಗಾಸ್‌ ಶೂಟೌಟ್‌ ಬಳಿಕ ನೀಡಿರುವ ಹೇಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ವಿಷಯ ಅರ್ಥವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next