ಕುಂದಾಪುರ: ಯೋಗ ಭಾರತೀಯ ಸಂಸ್ಕೃತಿ ಹಿರಿಮೆ ಗರಿಮೆಗಳ ಸಾಕಾರ ರೂಪವಾಗಿದೆ. ನಮ್ಮ ಸಂಸ್ಕೃತಿ ಪ್ರತಿಬಿಂಬವಾದ ಯೋಗವನ್ನು ನಿತ್ಯ ಜೀವನದಲ್ಲಿ ಅಳವಡಿಸಿ ಸಾತ್ವಿಕ ಮನಸ್ಸನ್ನು ಬೆಳೆಸಿಕೊಂಡು ದೇಶದ ಉನ್ನತಿಗೆ ಶ್ರಮಿಸಬೇಕು. ದೈಹಿಕ – ಮಾನಸಿಕ ಆರೋಗ್ಯದಲ್ಲಿ ಉತ್ತಮ ಸಮತೋಲನ ಕಾಯ್ದುಕೊಳ್ಳಲು ಯೋಗ ಸಹಕಾರಿ.
ಯೋಗವು ಸಮಾಜದ ಉನ್ನತಿಗೆ ಪ್ರೇರಣೆಯಾಗಲಿ ಎಂದು ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಡಾ| ಎಸ್.ಎಸ್. ಮಧುಕೇಶ್ವರ ಹೇಳಿದರು.
ಅವರು ಶುಕ್ರವಾರ ಇಲ್ಲಿನ ಭಂಡಾರ್‌ಕಾರ್ ಕಾಲೇಜಿನಲ್ಲಿ ಭಾರತ ಸರಕಾರ, ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಉಡುಪಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕುಂದಾಪುರ, ಪತಂಜಲಿ ಯೋಗ ಶಿಕ್ಷಣ ಸಮಿತಿ, ಕಾಲೇಜಿನ ಎನ್ನೆಸ್ಸೆಸ್, ಎನ್‌ಸಿಸಿ, ರೇಂಜರ್ ಮತ್ತು ರೋವರ್, ರೆಡ್‌ಕ್ರಾಸ್ ಘಟಕಗಳ ಹಾಗೂ ವಿವಿಧ ಯುವಕ – ಯುವತಿ ಮಂಡಲಗಳ ಸಹಯೋಗದಲ್ಲಿ 5 ನೇ ವಿಶ್ವ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಾಂಶುಪಾಲ ಡಾ| ಎನ್.ಪಿ. ನಾರಾಯಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಯೋಗ ಶಿಕ್ಷಕರಾದ ಪತಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ವಿವೇಕ ಪೈ, ರಾಮದಾಸ್ ಶೆಣೈ, ಗಾಯತ್ರಿ ಹೆಗಡೆ ಮತ್ತು ಸಂಜೀವಣ್ಣ ಅವರನ್ನು ಸಮ್ಮಾನಿಸಲಾಯಿತು. ನೆಹರು ಯುವ ಕೇಂದ್ರದ ಯುವ ಸಮನ್ವಯಾಧಿಕಾರಿ ವಿಲ್ಫೆÅಡ್ ಡಿ’ಸೋಜಾ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿ ಎಸ್.ಜಯಕರ ಶೆಟ್ಟಿ, ತಾಲೂಕಾ ಆಸ್ಪತ್ರೆಯ ಡಾ| ರೇಖಾ ಉಪಸ್ಥಿತರಿದ್ದರು.
ಪತಂಜಲಿ ಯೋಗ ಶಿಕ್ಷಣ ಸಮಿತಿಯ ವಿವೇಕ ಪೈ ಮಾರ್ಗದರ್ಶನದಲ್ಲಿ ಯೋಗ ಪ್ರಾತ್ಯಕ್ಷಿಕೆ ನಡೆಯಿತು. ಕಾಲೇಜಿನ ರೆಡ್‌ಕ್ರಾಸ್ ಘಟಕ ಕಾರ್ಯಕ್ರಮಾಧಿಕಾರಿ ಪ್ರೊ| ಸತ್ಯನಾರಾಯಣ ಕಾರ್ಯಕ್ರಮ ನಿರ್ವಹಿಸಿದರು.