ಬೆಂಗಳೂರು: ಕರ್ನಾಟಕವು ಹಲವಾರು ವಿಶೇಷತೆಗಳನ್ನು ಒಳಗೊಂಡ, ವಿದ್ವಾಂಸರು, ಸಾಧಕರು ಇರುವ ಶ್ರೇಷ್ಠ ರಾಜ್ಯ ಎಂದು ರಾಜ್ಯಪಾಲ ಡಾ.ಥಾವರ್ ಚಂದ್ ಗೆಹ್ಲೋತ್ ಬಣ್ಣಿಸಿದರು.
ಬುಧವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ರಾಜಭವನದ ಬ್ಯಾಂಕ್ವೇಟ್ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾ.ನಂ.ಚಂದ್ರಶೇಖರ ಸಂಪಾದಕತ್ವದ ಕರ್ನಾಟಕ ಸಂಗಾತಿ ಮತ್ತು ಕನ್ನಡ ಪ್ರಜ್ಞೆ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕನ್ನಡ, ಕನ್ನಡಿಗ, ನಾಡಿನ ರಕ್ಷಣೆಗೆ ಕಂಕಣ ಕಟ್ಟಿಕೊಂಡು ಸಾಕಷ್ಟು ಸಂಸ್ಥೆಗಳು, ಕನ್ನಡಪರ ಸಂಘಟನೆಗಳು ದುಡಿಯುತ್ತಿವೆ ಎಂದು ಶ್ಲಾಘಿಸಿದರು.
ಒಡಿಶಾ ಕೇಂದ್ರಿಯ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಪಿ.ವಿ. ಕೃಷ್ಣ ಭಟ್ಟ ಅವರು ಮಾತನಾಡಿ, ಭಾಷಾವಾರು ಪ್ರಾಂತ್ಯಗಳು ರಚನೆಯಾದ ನಂತರ ಕನ್ನಡ ಎಲ್ಲಾ ಕ್ಷೇತ್ರಗಳಲ್ಲಿ ರಾರಾಜಿಸಲಿದೆ ಎಂದು ತಪ್ಪು ಕಲ್ಪನೆಯಲ್ಲಿ ಕನ್ನಡಿಗರು ಇದ್ದಾರೆ. ಆದರೆ, ಪ್ರತಿಯೊಂದು ವಲಯಗಳಲ್ಲೂ ಕನ್ನಡದ ಅನುಷ್ಠಾನಕ್ಕಾಗಿ, ಕನ್ನಡದ ಪ್ರಾಮುಖ್ಯತೆಗಾಗಿ ಹೋರಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಆಂಗ್ಲಭಾಷೆ ವಿಜೃಂಭಿಸುತ್ತಿದೆ. ಇದರಿಂದಾಗಿ ಕನ್ನಡಕ್ಕೆ ಹೊಡೆತ ಬೀಳಲಿದೆ. ಆದ್ದರಿಂದ ಶಿಕ್ಷಣದಲ್ಲಿ ಕನ್ನಡಕ್ಕೆ ಮೊದಲ ಆಧ್ಯತೆ ನೀಡಬೇಕು. ದೈನಂದಿನ ವ್ಯವಹಾರಗಳಲ್ಲಿಯೂ ಕನ್ನಡದ ಬಳಕೆಯಾಗುವಂತೆ ಎಲ್ಲಾ ರಂಗಗಳಲ್ಲಿ ಕನ್ನಡ ವಿಜೃಂಭಿಸುವಂತೆ ಎಲ್ಲಾ ಸಂಸ್ಥೆಗಳು ಪ್ರಯತ್ನಿಸಬೇಕು ಎಂದು ಅಭಿಪ್ರಾಯಪಟ್ಟರು.
ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ, ಕಾರ್ಯದರ್ಶಿ ಡಾ. ಸಂತೋಷ್ ಹಾನಗಲ್ಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಡಾ. ಎನ್. ಮಂಜುಳಾ ಸೇರಿದಂತೆ ಇತರರು ಇದ್ದರು.