ಶ್ರೀನಿವಾಸಪುರ: ನಾಡಪ್ರಭು ಕೆಂಪೇಗೌಡರು ಒಂದು ಜಾತಿಗೆ ಸೀಮಿತವಾಗಿ ನಾಡು ಕಟ್ಟಿದವರಲ್ಲ. ನಾಡಿಗಾಗಿ ದುಡಿದ ವ್ಯಕ್ತಿ ಮಹಾನ್ ಚೇತನ. ಆದರೆ, ಇಂದಿನ ಆಚರಣೆಗಳು ಕೇವಲ ಜಾತಿಗೆ ಸೀಮಿತವಾಗುತ್ತಿವೆ ಎಂದು ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‌ಕುಮಾರ್ ವಿಷಾದಿಸಿದರು.
ತಾಲೂಕು ಕಚೇರಿ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದಿಂದ ಬುಧವಾರ ಆಯೋಜಿಸಿದ್ದ 509ನೇ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ಮಹಾನ್ ವ್ಯಕ್ತಿಗಳ ಜಯಂತಿಗಳು ಪ್ರಾರ್ಥನೆ, ಸ್ವಾಗತ, ಉಪನ್ಯಾಸ, ಅಧ್ಯಕ್ಷರ ನುಡಿ ವಂದನಾರ್ಪಣೆಗಳಿಗೆ ಸೀಮಿತವಾಗುತ್ತಿವೆ. ವೇದಿಕೆಗಳಿಗೆ ಮಾತ್ರ ಸೀಮಿತವಾಗಿಸಿ ಮಹಾನ್ ವ್ಯಕ್ತಿಗಳಿಗೆ ಕಳಂಕವನ್ನು ತರುತ್ತಿದ್ದೇವೆ ಎಂದರು.
ಕೆಂಪೇಗೌಡರು ಬೆಂಗಳೂರನ್ನು ಕಟ್ಟುವಾಗ ಕುಂಬಾರಪೇಟೆ, ಬಳೇಪೇಟೆ, ಚಿಕ್ಕಪೇಟೆ ಹೀಗೆ ಮುಂತಾದ ಪೇಟೆಗಳನ್ನು ಕಟ್ಟಿದರೇ ಹೊರತು ಒಕ್ಕಲಿಗ ಸಮುದಾಯಕ್ಕೆ ಮಾತ್ರ ಸೀಮಿತವೆಂದು ಕಟ್ಟಿದವರಲ್ಲ. ವಿಜ್ಞಾನಿ ನ್ಯೂಟನ್, ರಾಷ್ಟ್ರಕವಿ ಕುವೆಂಪು, ಶೇಕ್ಸ್ ಪಿಯರ್, ಮುಂತಾದವರು ಭಾಷೆ, ಜಾತಿ, ಧರ್ಮ, ಊರು, ಕುಲಗಳಿಗೆ ಸೀಮಿತವಾಗಿರುವರಲ್ಲ, ಇಡೀ ಜಗತ್ತಿಗೆ ಬೇಕಾದವರು. ಹೀಗಾಗಿ ಇಂತಹ ಗಣ್ಯರನ್ನು ಗುರುತಿಸಿ ಸ್ಮರಿಸುತ್ತೇವೆ ಎಂದರು.
ಪ್ರಸ್ತುತ ಮಹಾನೀಯರನ್ನು ಸಾರ್ವಜನಿಕರು ಗುತ್ತಿಗೆ ತೆಗೆದುಕೊಂಡಂತೆ ಹಂಚಿಕೊಂಡಿದ್ದೇವೆ. ಆದರೆ, ಅವರು ನಿಸ್ವಾರ್ಥವಾಗಿ ದೇಶವನ್ನು ಕಟ್ಟಿದ್ದಾರೆ. ಅಂಬೇಡ್ಕರ್ ದೇಶದಲ್ಲಿ ಪ್ರತಿಯೊಬ್ಬ ಪ್ರಜೆಗೂ ಅನ್ವಯಿಸುವಂತೆ ಸಂವಿಧಾನ ರಚಿಸಿದ್ದಾರೆ. ಅವರ ಜೀವನ ಕೃತಿಗಳನ್ನು ಎಷ್ಟೋ ಜನರು ಓದಿ ಸರಿಯಾಗಿ ಅರ್ಥೈಯಿಸಿಕೊಳ್ಳದೇ ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಮಾತ್ರ ಸೀಮಿತಗೊಳಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಪೂರ್ವ ಸಿದ್ಧತೆ ಇಲ್ಲ: ರಾಷ್ಟ್ರೀಯ ಹಬ್ಬಗಳ ಸಮಿತಿ ಅಧ್ಯಕ್ಷರು ಪೂರ್ವಸಿದ್ಧತೆ ಇಲ್ಲದ ಕಾರ್ಯಕ್ರಮ ನಡೆಸಿದಂತಿದೆ. ಕಳೆದ 2 ವರ್ಷಗಳಲ್ಲಿ ಆಚರಿಸಿದಂತೆ ಈ ಬಾರಿ ಕಾಣುತ್ತಿಲ್ಲ. ಜಾತಿ, ಮತ, ಪಕ್ಷ ಎನ್ನುವ ಬೇಧವಿಲ್ಲದೇ, ಪೂರ್ವ ತಯಾರಿ ನಡೆಸಿ ಜವಾಬ್ದಾರಿ ವಹಿಸಿಕೊಂಡು ಮಾಡಬೇಕಾಗಿದೆ. ಮುಂದೆ ಹೀಗಾಗದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ವೈ.ರವಿ, ತಾಪಂ ಇಒ ನಾರಾಯಣಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಂಷುನ್ನೀಸಾ, ಒಕ್ಕಲಿಗರ ಸಂಘಧ ಅಧ್ಯಕ್ಷ ನೀಲಟೂರು ಚಿನ್ನಪರೆಡ್ಡಿ, ನಿರ್ದೇಶಕರಾದ ಸತೀಶ್, ಚಂದ್ರಶೇಖರ್, ಕೆ.ಕೆ.ಮಂಜು, ದಿಂಬಾಲ ಅಶೋಕ್, ಪಲ್ಲಾರೆಡ್ಡಿ, ರಾಜೇಂದ್ರ ಪ್ರಸಾದ್ ಇತರರು ಉಪಸ್ಥಿತರಿದ್ದರು.