Advertisement
ಇದಕ್ಕೊಂದು ಪೂರ್ಣವಿರಾಮವೀಯಲು ಸಂಕಲ್ಪ ಮಾಡಿದವರು ಕಲ್ಲಾಡಿ ಕೊರಗ ಶೆಟ್ಟರು. ಅನ್ಯರ ಮುಂದೆ ಕೈಚಾಚದೆ ಕಲಾವಿದರು ಮತ್ತು ಮೇಳಗಳು ಸ್ವಾಭಿಮಾನದಿಂದ ಬಾಳುವಂತೆ ಆಗಬೇಕೆಂದು ಅವರು ಆರಂಭಿಸಿದ್ದು ಡೇರೆ ಮೇಳ. ದೇಶ ಸ್ವತಂತ್ರವಾಗುತ್ತಿದ್ದಂತೆಯೇ ಕಲಾವಿದರೂ ಸ್ವಾತಂತ್ರ್ಯ ಮತ್ತು ಸ್ವಾಭಿಮಾನದಿಂದ ಬಾಳಲು ಬುನಾದಿ ಹಾಕಿದರು. ಇರಾ ಶ್ರೀ ಸೋಮನಾಥೇಶ್ವರ ಯಕ್ಷಗಾನ ನಾಟಕ ಮಂಡಳಿ ಕುಂಡಾವು 1947ರಲ್ಲಿ ಜೈತ್ರಯಾತ್ರೆಯನ್ನು ಆರಂಭಿಸಿತು.
Related Articles
Advertisement
ಮುಂದೆ ಬಯಲಾಟ ಮೇಳವಾಗಿದ್ದ ಧರ್ಮಸ್ಥಳ ಮೇಳ 1962ರಲ್ಲಿ ಡೇರೆಮೇಳವಾಯಿತು. ಜಟಾಧಾರಿ ಮೇಳ, ಮಂತ್ರಾಲಯ ಮೇಳ, ಹಂಪನಕಟ್ಟೆ ಮೇಳ…ಹೀಗೆ ಅನೇಕ ಡೇರೆಮೇಳಗಳು ತಲೆಯೆತ್ತಿದವು. ಹಾಗೆಯೇ ಮಲಗಿದವು.ಬಡಗುತಿಟ್ಟಿನಲ್ಲಿ ಮೊತ್ತಮೊದಲಿಗೆ ಡೇರೆ ಮೇಳವನ್ನು ಸ್ಥಾಪಿಸುವ ಧೈರ್ಯ ತೋರಿದವರು ಯಜಮಾನ ಶ್ರೀಧರ ಹಂದೆಯವರು. 1968ರಲ್ಲಿ ಸಾಲಿಗ್ರಾಮ ಮೇಳವನ್ನು ಕಟ್ಟಿ ಆದಾಯಕ್ಕಿಂತ ಖರ್ಚು ಹೆಚ್ಚಾಗಿ ಕೈ ಸುಟ್ಟುಕೊಂಡು ಆ ಮೇಳವನ್ನು ಪಳ್ಳಿ ಸೋಮನಾಥ ಹೆಗ್ಡೆಯವರಿಗೆ ನೀಡಿದರು. ಅಷ್ಟಕ್ಕೇ ಹಿಮ್ಮುಖರಾಗದೆ ಮುಂದೆ ಕೋಟ ಅಮೃತೇಶ್ವರೀ ಮೇಳವನ್ನು ಸ್ಥಾಪಿಸಿ, 1970ರಿಂದ 1984ರ ತನಕ ವ್ಯವಸ್ಥಿತವಾಗಿ ನಡೆಸಿದರು. ಉತ್ತರ ಕನ್ನಡದ ಕಲಾವಿದರನ್ನು ದಕ್ಷಿಣ ಕನ್ನಡಕ್ಕೆ ಪರಿಚಯಿಸಿ ಹೊಸ ಸ್ಥಿತ್ಯಂತರಕ್ಕೆ ಕಾರಣರಾದರು. ಉತ್ತರ ಕನ್ನಡದಲ್ಲಿ 1952ರಲ್ಲಿ ಕೆರೆಮನೆ ಶಿವರಾಮ ಹೆಗಡೆಯವರು ಸ್ಥಾಪಿಸಿದ ಇಡಗುಂಜಿ ಮೇಳವೇ ಉತ್ತರ ಕನ್ನಡದ ಮೊದಲ ಡೇರೆಮೇಳ. ಅನಂತರ ಪುರ್ಲೆ, ಬಚ್ಚಗಾರು, ಶಿರಸಿ ಮೇಳಗಳು ತಿರುಗಾಟಕ್ಕೆ ಹೊರಟರೂ ಬಹುಕಾಲ ಬಾಳಲಿಲ್ಲ. 1980ರ ದಶಕದಲ್ಲಿ ತೆಂಕು ಮತ್ತು ಬಡಗು, ಬಡಾಬಡಗುತಿಟ್ಟುಗಳಲ್ಲಿ ಅನೇಕ ಮೇಳಗಳು ಆರಂಭವಾದುದು. ತೆಂಕಿನಲ್ಲಿ ತುಳು ಪ್ರಸಂಗಗಳು, ಬಡಗಿನಲ್ಲಿ ಸಾಮಾಜಿಕ ಪ್ರಸಂಗಗಳು ಜನಾಕರ್ಷಣೆಯ ಕೇಂದ್ರಬಿಂದುಗಳಾಗಿದ್ದವು. ದಿ.ಜಿ.ಆರ್.ಕಾಳಿಂಗ ನಾವಡರ ಕ್ರಾಂತಿಕಂಠ ಭಾಗವತಿಕೆಯ ಸ್ವರೂಪವನ್ನೇ ಬದಲಿಸಿತು. ಧರ್ಮಸ್ಥಳ ಮೇಳ, ಇಡಗುಂಜಿ ಮೇಳಗಳು ಸಂಪ್ರದಾಯನಿಷ್ಠ ಮೇಳಗಳಾಗಿ ಪ್ರಜ್ಞಾವಂತ ಪ್ರೇಕ್ಷಕರನ್ನು ಉಳಿಸಿಕೊಂಡವು. ವರ್ಷಕ್ಕೊಂದರಂತೆ ಹುಟ್ಟಿದ ಡೇರೆಮೇಳಗಳು ವರ್ಷಕ್ಕೊಂದರಂತೆ ವಿಶ್ರಾಂತಿ ಪಡೆಯತೊಡಗಿದವು. 1985-86ರ ಹೊತ್ತಿಗೆ ತೆಂಕಿನ ಡೇರೆಮೇಳಗಳು ಸೊರಗತೊಡಗಿದವು. ಅದಕ್ಕೆ ಕಾರಣ ಆ ಕಾಲದ ಕುಖ್ಯಾತ ದರೋಡೆಕೋರ ಚಂದ್ರನ್ ಎಂದು ಜನರ ಅಭಿಮತ. ಏನಿದ್ದರೂ ಆ ಕಾಲದಲ್ಲಿ ಬಿದ್ದ ಮೇಳಗಳು ಮತ್ತೆ ಏಳಲೇ ಇಲ್ಲ. ತೆಂಕಿನಲ್ಲಿ ಡೇರೆಮೇಳಗಳ ಮಹಾಪರ್ವ ಈಗ ಇತಿಹಾಸ. ಬಡಗಿನಲ್ಲಿ ಸಾಲಿಗ್ರಾಮ ಮತ್ತು ಪೆರ್ಡೂರು ಮೇಳಗಳು ಅಸ್ತಿತ್ವದಲ್ಲಿವೆ. ಬಡಾಬಡಗಿನಲ್ಲಿ ಕಲಾವಿದ ವಿದ್ಯಾಧರ ಜಲವಳ್ಳಿಯವರು ಡೇರೆಮೇಳವನ್ನು ತಿರುಗಾಟಕ್ಕೆ ಸಜ್ಜುಗೊಳಿಸುವ ಪ್ರಯತ್ನ ನಡೆಸಿದರೂ ಆಟಗಳ ಕೊರತೆ ಆ ಮೇಳವನ್ನು ಕಾಡಿತು. ಪ್ರಸಿದ್ಧ ಕಲಾವಿದರ ಮಿತಿಮೀರಿದ ಸಂಬಳ, ಸಾಮಾನು-ಸರಂಜಾಮುಗಳ ಸಾಗಾಟದ ಖರ್ಚು, ಹತ್ತಿಪ್ಪತ್ತು ಮಂದಿಗಳಾದರೂ ಡೇರೆ ಕೆಲಸದ ಕಾರ್ಮಿಕರು ಇರಬೇಕಾದ ಅನಿವಾರ್ಯತೆ. ಆಟಗಳ ಸಂಖ್ಯೆ ಹೆಚ್ಚಾಗಿರುವುದು. ಪ್ರಸಂಗಗಳು ಆಕರ್ಷಣೆ ಕಳೆದುಕೊಂಡಿರುವುದು. ಡೇರೆ ಹಾಕಲು ಇರುವ ಮೈದಾನಗಳ ಕೊರತೆ. ಹಣ ಕೊಟ್ಟು ಆಟ ನೋಡುವವರ ಸಂಖ್ಯೆ ಕಡಿಮೆಯಾಗಿರುವುದು…ಹೀಗೆ ಡೇರೆಮೇಳದ ಅವನತಿಗೆ ನೂರಾರು ಕಾರಣಗಳು. ಆದುದರಿಂದ ಹೆಚ್ಚಿನ ಮೇಳಗಳು ಬಯಲಾಟದೆಡೆಗೆ ಹೊರಳುತ್ತಿವೆ. ಇದೀಗ 30-40 ಮೇಳಗಳು ಸಂಚಾರದಲ್ಲಿವೆ. ಹೆಚ್ಚಿನ ಎಲ್ಲಾ ಮೇಳಗಳು ಕಾಲನಿಗೆ ತಲೆಬಾಗಿ ಬಯಲಾಟದ ಮೇಳಗಳಾಗಿಯೇ ತಿರುಗಾಟ ನಡೆಸುತ್ತಿವೆ. ಸಾಲಿಗ್ರಾಮ ಮತ್ತು ಪೆರ್ಡೂರು ಮೇಳಗಳು ಪ್ರವಾಹದ ವಿರುದ್ಧ ಧೈರ್ಯದಿಂದ ಈಜುತ್ತಿವೆ. -ತಾರಾನಾಥ ವರ್ಕಾಡಿ