Advertisement

ಅತಿರಥರ ಮಹಾರಥ

07:56 PM Jan 03, 2020 | Lakshmi GovindaRaj |

ಇದು ಅಪ್ಪಟ ರಾಷ್ಟ್ರಪ್ರೇಮದ ತೇರು. ಗಾಂಧೀಜಿಯಿಂದ ಮೊದಲ್ಗೊಂಡು ರಾಜ್‌ಕುಮಾರ್‌, ವಿಷ್ಣುವರ್ಧನ್‌, ಎಸ್‌.ಎಲ್‌. ಭೈರಪ್ಪ ಅವರ ಉಬ್ಬು ಚಿತ್ರಗಳೂ ಈ ತೇರನ್ನು ಅಲಂಕರಿಸಿವೆ…

Advertisement

ತೇರು ಎಂದರೆ, ಅದೇ ಧಾರ್ಮಿಕ ಕಲ್ಪನೆಯ ರಚನೆ. ತಳಿರು ತೋರಣದ ವಿನ್ಯಾಸ. ದೇವ- ದೇವತೆಯರ ವಿಗ್ರಹಗಳ ಸಾಲು ಸಾಲು ಕೆತ್ತನೆ. ಸಾಮಾನ್ಯವಾಗಿ ಈ ಚೌಕಟ್ಟಿನಲ್ಲಿಯೇ ನಮ್ಮ ಕಲ್ಪನೆಯ ತೇರಿನ ಚಿತ್ರ ಮೂಡುತ್ತದೆ. ಆದರೆ, ಈ ತೇರು ಹಾಗಿಲ್ಲ; ಇದರಲ್ಲಿ ಭಾರತಾಂಬೆ ಇದ್ದಾಳೆ. ಗಾಂಧೀಜಿಯಿಂದ ಮೊದಲ್ಗೊಂಡು ರಾಜ್‌ಕುಮಾರ್‌, ವಿಷ್ಣುವರ್ಧನ್‌, ಎಸ್‌.ಎಲ್‌. ಭೈರಪ್ಪ ಅವರ ಉಬ್ಬು ಚಿತ್ರಗಳೂ ಈ ತೇರನ್ನು ಅಲಂಕರಿಸಿವೆ.

ಹೌದು, ಇದು ಅಪ್ಪಟ ರಾಷ್ಟ್ರಪ್ರೇಮದ ತೇರು. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಬೆಲಗೂರಿನ ವೀರ ಪ್ರತಾಪ ಅಂಜನೇಯ ಸ್ವಾಮಿಯ ಸನ್ನಿಧಿಯ ವಿಶಿಷ್ಟ ಆಕರ್ಷಣೆ. “ಭಾರತಾಂಬೆಯ ತೇರು’ ಅಂತಲೇ ಪ್ರಸಿದ್ಧಿ ಪಡೆಯುತ್ತಿದೆ. ಈ ರಥದಲ್ಲಿ ಅಡಿಯಿಂದ ಮುಡಿಯವರೆಗೆ ದೇಶಕ್ಕಾಗಿ ಜೀವ- ಜೀವನವನ್ನು ಮುಡುಪಾಗಿಟ್ಟವರ ಚಿತ್ರಗಳನ್ನು ಕೆತ್ತಿದ್ದಾರೆ. ಗಾಲಿಗಳ ಮೇಲ್ಭಾಗದಿಂದ ಹಿಡಿದು, ನಡುಭಾಗದ ಸುತ್ತ ಹಾಗೂ ಶಿಖರದವರೆಗೆ ಮಹಾತ್ಮರ ಉಬ್ಬು ಶಿಲ್ಪಗಳು ಮನಸೂರೆಗೊಳ್ಳುತ್ತವೆ.

ಇದು ಮೂಲತಃ ಲಕ್ಷ್ಮಿ ನಾರಾಯಣನ ತೇರು; ಆದರೆ, ದೇವರ ಕಲಾಕೃತಿಗಳು ಬಹಳ ಕಡಿಮೆ. ಸಾಗುವಾನಿ, ಹೊನ್ನೇಮರದಿಂದ ನಿರ್ಮಿತವಾದ ದೇವರಥ. 59 ಅಡಿ ಎತ್ತರ, 21 ಅಡಿ ಅಗಲ, 500 ಕಿಲೋಗೂ ಅಧಿಕ ತೂಗುತ್ತದೆ. 40 ರಥಶಿಲ್ಪಿಗಳು, 8 ತಿಂಗಳ ಶ್ರಮವಹಿಸಿ, ರಾಜಶೇಖರ ಹೆಬ್ಟಾರ್‌ ಅವರ ನೇತೃತ್ವದಲ್ಲಿ ಈ ವಿಸ್ಮಯ ಸೃಷ್ಟಿಯಾಗಿದೆ. ರಾಜಶೇಖರ ಹೆಬ್ಟಾರ್‌ ಪರಿಣತ ಕಾಷ್ಠ ಕಲಾವಿದರು. 58 ದೇಗುಲಗಳು, 13 ಬೃಹತ್‌ ತೇರುಗಳನ್ನು ನಿರ್ಮಿಸಿದ ಅನುಭವ ಅವರಿಗಿದೆ. ಬೆಲಗೂರಿನ ಮಾರುತಿ ಗುರುಪೀಠದ ಅವಧೂತ ಬಿಂದು ಮಾಧವ ಶರ್ಮ ಅವರ ಮಾರ್ಗದರ್ಶನ ಈ ರಥಕ್ಕೆ ಸಿಕ್ಕಿದೆ.

ರಥದಲ್ಲಿನ ಅತಿರಥ ಮಹಾರಥರು: ಮಹಾತ್ಮ ಗಾಂಧೀಜಿ, ಡಾ.ಬಿ.ಆರ್‌. ಅಂಬೇಡ್ಕರ್‌, ಲಾಲ್‌ ಬಹದ್ದೂರ್‌ ಶಾಸ್ತ್ರಿ, ಸರ್ದಾರ್‌ ಪಟೇಲ್, ಚಂದ್ರಶೇಖರ್‌ ಆಜಾದ್‌, ಭಗತ್‌ ಸಿಂಗ್‌, ಛತ್ರಪತಿ ಶಿವಾಜಿ, ಮದಕರಿ ನಾಯಕ, ಝಾನ್ಸಿ ರಾಣಿ, ಚನ್ನಮ್ಮ, ಶ್ರೀ ಕೃಷ್ಣದೇವರಾಯ, ಸರ್‌ ಎಂ. ವಿಶ್ವೇಶ್ವರಯ್ಯ, ಶಂಕರಾಚಾರ್ಯ, ಮಧ್ವಾಚಾರ್ಯ, ರಾಮಾನುಜಾಚಾರ್ಯ, ಜಗಜ್ಯೋತಿ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಪುರಂದರದಾಸ, ಕನಕದಾಸ, ವಾಲ್ಮೀಕಿ, ಕಾಳಿದಾಸ, ಅಗಸ್ತ್ಯ, ಜಮದಗ್ನಿ, ರಾಮಕೃಷ್ಣ ಪರಮಹಂಸ, ಪಂಪ, ರನ್ನ, ಜನ್ನ, ತ.ರಾ.ಸು., ಎಂ.ಕೆ. ಇಂದಿರಾ, ಕುವೆಂಪು, ದ.ರಾ. ಬೇಂದ್ರೆ, ಡಾ. ರಾಜ್‌ಕುಮಾರ್‌, ಜಿ.ಎಸ್‌. ಶಿವರುದ್ರಪ್ಪ, ಎಸ್‌.ಎಲ್‌. ಭೈರಪ್ಪ, ಅಬ್ದುಲ್‌ ಕಲಾಂ, ಸಿ.ಎನ್‌.ಆರ್‌. ರಾವ್‌, ವಿಷ್ಣುವರ್ಧನ್‌, ಲೀಲಾವತಿ, ಎಂ.ಎಸ್‌. ಸುಬ್ಬುಲಕ್ಷ್ಮೀ ಸೇರಿದಂತೆ ಹಲವು ಮಹನೀಯರ ವಿಗ್ರಹಗಳನ್ನು ಕೆತ್ತಲಾಗಿದೆ.

Advertisement

* ಚಿತ್ರ ಲೇಖನ: ಡಾ.ಕರವೀರಪ್ರಭು ಕ್ಯಾಲಕೊಂಡ

Advertisement

Udayavani is now on Telegram. Click here to join our channel and stay updated with the latest news.

Next