Advertisement
ಹಟ್ಟಿಹೊಳೆ ಸೇತುವೆಯಿಂದ ಅರ್ಧ ಕಿಲೋಮೀಟರ್ ದೂರದಲ್ಲಿರುವ ಚಿತ್ರ ಸುಬ್ಬಯ್ಯ ಅವರ ಮನೆಯ ಕೆಳ ಭಾಗದಲ್ಲಿ ಉಮೇಶ್ ಎಂಬುವರು ಮಡದಿ ಮತ್ತು ಇಬ್ಬರು ಹೆಣ್ಣು ಮಕ್ಕಳೊಂದಿಗೆ ವಾಸವಾಗಿದ್ದರು. ಅವರ ದೊಡ್ಡ ಮಗಳಿಗೆ ನಿಶ್ಚಿತಾರ್ಥವಾಗಿ, ಮದುವೆಯ ದಿನಾಂಕ ನಿಗದಿಪಡಿಸಿದ್ದರು. ಆಗಸ್ಟ್ 30ರಂದು ಮಡಿಕೇರಿಯ ಕಲ್ಯಾಣ ಮಂಟಪದಲ್ಲಿ ಮದುವೆ ನಡೆಯಬೇಕಿತ್ತು. ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದರು. ಸಂಬಂಧಿಕರು, ಸ್ನೇಹಿತರು ಸೇರಿದಂತೆ ಬಹುತೇಕರಿಗೆ ಮದುವೆಯ ಆಮಂತ್ರಣ ಪತ್ರಿಕೆ ಹಂಚಿಯಾಗಿದೆ.
Related Articles
‘ಉದಯವಾಣಿ‘ ಜತೆ ನೋವು ಹಂಚಿಕೊಂಡ ಉಮೇಶ್, ಆ.16ರ ರಾತ್ರಿ ಎಡೆಬಿಡದೆ ಮಳೆ ಸುರಿಯುತಿತ್ತು. ಬೆಳಗ್ಗೆ ಎದ್ದು ನೋಡುವಾಗ ಮನೆಯ ಹಿಂಭಾಗದ ಗುಡ್ಡ ಸಂಪೂರ್ಣ ಕುಸಿದಿತ್ತು ಮತ್ತು ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದವು. ತಕ್ಷಣವೇ ಮನೆಯಲ್ಲಿದ್ದ ಇಬ್ಬರು ಮಕ್ಕಳ ಹಾಗೂ ಪತ್ನಿಯ ಸಹಿತವಾಗಿ ನಾವೆಲ್ಲರೂ ಹೊರೆಗೆ ಓಡಿ ಬಂದವು. ನಾವು ಬಂದ ಕೆಲವೇ ಕ್ಷಣದಲ್ಲಿ ಗುಡ್ಡ ಪೂರ್ಣವಾಗಿ ನಮ್ಮ ಮನೆಯ ಮೇಲೆ ಬಿದ್ದಿತು. ನಾವು ಹೊರಗೆ ಬರುವುದು ಸ್ವಲ್ಪ ತಡವಾಗಿದ್ದರೂ, ಯಾರ ಜೀವವೂ ಉಳಿಯುತ್ತಿರಲಿಲ್ಲ ಎಂದು ಅಂದಿನ ಘಟನೆ ವಿವರಿಸಿದರು.
Advertisement
ಮುಂದಿನ ಗುರುವಾರ(ಆ.30) ದೊಡ್ಡ ಮಗಳ ಮದುವೆ ನಿಶ್ಚಯವಾಗಿತ್ತು. ಸಾಲದ ಹಣ ಮತ್ತು ಕೂಲಿ ಮಾಡಿದ ದುಡ್ಡು ಸೇರಿಸಿ 10 ಪವನ್ ಚಿನ್ನ ಮಾಡಿಸಿದ್ದೆ. ಹಾಗೆಯೇ ಮದುವೆ ಖರ್ಚಿಗಾಗಿ ಸುಮಾರು 25 ಸಾವಿರ ರೂ. ತೆಗೆದು ಮನೆಯ ಬೀರು ಒಳಗೆ ಇಟ್ಟಿದ್ದೆ. ಗಾಬರಿಯಲ್ಲಿ ಮನೆ ಬಿಟ್ಟು ಓಡುವಾಗ ಇದ್ಯಾವುದೂ ನೆನಪಿಗೆ ಬರಲೇ ಇಲ್ಲ. ಈಗ ಅನಿವಾರ್ಯವಾಗಿ ಹುಡುಕಬೇಕಾಗಿದೆ. ಕಲ್ಯಾಣ ಮಂಟಪದಲ್ಲಿ ಮದುವೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಯಾವುದಾದರೂ ದೇವಸ್ಥಾನದಲ್ಲಿ ಮದುವೆ ಮಾಡುವ ಬಗ್ಗೆ ಯೋಚಿಸುತ್ತಿದ್ದೇವೆ. ಗಂಡಿನ ಮನೆಯವರೂ ಕೂಡ ಇದಕ್ಕೆ ಒಪ್ಪಿದ್ದಾರೆ. ಚಿನ್ನ ಮತ್ತು ಹಣ ಸಿಗುತ್ತದೋ ಇಲ್ಲವೋ ಎಂದು ಹೇಳುತ್ತಾರೆ.
– ರಾಜು ಖಾರ್ವಿ ಕೊಡೇರಿ