ಗ್ರಾಫಿಕ್‌ನಲ್ಲಿ ಸಿನಿಮಾದವರು ಏನೇನನ್ನೋ ತೋರಿಸಿಬಿಡುತ್ತಾರೆ. “ಬಾಹುಬಲಿ’ ಎಂಬ ಸಿನಿಮಾ ಸಿಂಗಾರಗೊಂಡಿದ್ದೇ ಗ್ರಾಫಿಕ್‌ನಿಂದ. ಈಗಂತೂ ಗ್ರಾಫಿಕ್ ಸ್ಪರ್ಶವಿಲ್ಲದೇ ಸಿನಿಮಾ ಮುಗಿಯುವುದೇ ಇಲ್ಲ ಎಂಬಂತಾಗಿದೆ. ಈಗಾಗಲೇ ಗ್ರಾಫಿಕ್‌ನಲ್ಲಿ ಏನೇನ್ನನೋ ಸೃಷ್ಟಿಸಿದ್ದಾರೆ. ಈಗ ಇಲ್ಲೊಂದು ತಂಡ ಮಗುವನ್ನೇ ಸೃಷ್ಟಿಸಿದೆ. ಅದು “ಕೆಲವು ದಿನಗಳ ನಂತರ’ ಚಿತ್ರತಂಡ.
ಹೌದು, “ಕೆಲವು ದಿನಗಳ ನಂತರ’ ಎಂಬ ಸಿನಿಮಾವೊಂದು ತಯಾರಾಗಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಇದೇ 22 ರಂದು ತೆರೆಕಾಣುತ್ತಿದೆ. ಇದು ಹಾರರ್ ಚಿತ್ರವಾಗಿದ್ದು, ಈ ಚಿತ್ರದಲ್ಲಿ ಆರು ತಿಂಗಳ ಮಗುವಿನ ಪಾತ್ರ ಕೂಡಾ ಪ್ರಮುಖವಾಗಿದೆ. ಚಿತ್ರತಂಡ ಅದನ್ನು ಗ್ರಾಫಿಕ್‌ನಲ್ಲಿ ಮಾಡಿದ್ದು, ಟ್ರೇಲರ್ ನೋಡಿದವರು ಇಷ್ಟಪಟಿದ್ದಾರೆಂಬ ಖುಷಿಯಲ್ಲಿದೆ ಚಿತ್ರತಂಡ.
ಈ ಗ್ರಾಫಿಕ್ ಮಗು ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆಯಂತೆ. ನಿರ್ದೇಶಕ ಶ್ರೀನಿ ಹೇಳುವಂತೆ, ಕನ್ನಡ ಚಿತ್ರಗಳಲ್ಲಿ ಇದೇ ಮೊದಲ ಬಾರಿಗೆ ಗ್ರಾಫಿಕ್‌ನಲ್ಲಿ ಮಗು ಸೃಷ್ಟಿಸಲಾಗಿದೆ. ಇದಕ್ಕಾಗಿ ಗ್ರಾಫಿಕ್ ತಂಡ ಒಂದು ವರ್ಷಕ್ಕೂ ಹೆಚ್ಚು ಕಾಲ ಕೆಲಸ ಮಾಡಿದೆಯಂತೆ. ಜೊತೆಗೆ ನಿರ್ಮಾಪಕರು ಸಾಕಷ್ಟು ಹಣವನ್ನು “ಗ್ರಾಫಿಕ್ ಮಗು’ವಿಗೆ ಖರ್ಚು ಮಾಡಿದ್ದಾರೆ.
ಮೊದಲೇ ಹೇಳಿದಂತೆ “ಕೆಲವು ದಿನಗಳ ನಂತರ’ ಚಿತ್ರ ಹಾರರ್ ಸಿನಿಮಾವಾಗಿದ್ದು, ಪ್ರೇಕ್ಷಕರಿಗೆ ಭಯಾನಕವಾಗಿ ಹಾರರ್ ಫೀಲ್ ಕೊಡಲು ಸಾಕಷ್ಟು ತಾಂತ್ರಿಕ ಅಂಶಗಳನ್ನು ಬಳಸಿಕೊಳ್ಳಲಾಗಿದೆಯಂತೆ. ನಿರ್ದೇಶಕ ಶ್ರೀನಿ ಹೇಳುವಂತೆ, “ಕೆಲವು ದಿನಗಳ ನಂತರ’ ಕನ್ನಡ ಪ್ರೇಕ್ಷಕರಿಗೆ ಹೊಸ ಬಗೆಯ ಹಾರರ್ ಫೀಲ್ ನೀಡಲಿದೆ. ಒಂದು ಗುಂಪು ಕಾರಿನಲ್ಲಿ ಹೊರಗಡೆ ಹೋಗುವಾಗ ಎದುರಾಗುವ ಸನ್ನಿವೇಶಗಳನ್ನಿಟ್ಟುಕೊಂಡು ಈ ಸಿನಿಮಾದ ಕಥೆ ಸಾಗುತ್ತದೆಯಂತೆ.
ಇತ್ತೀಚೆಗೆ ಚಿತ್ರತಂಡದ ನೂರಕ್ಕೂ ಹೆಚ್ಚು ಸದಸ್ಯರು ಚಿತ್ರದ ಆಡಿಯೋ ಬಿಡುಗಡೆ ದಿನ ನೇತ್ರದಾನ ಮಾಡಿ ಸುದ್ದಿಯಾಗಿದ್ದರು. ಇನ್ನು, ಚಿತ್ರದಲ್ಲಿ ಶುಭಾ ಪೂಂಜಾ ಪ್ರಮುಖ ಪಾತ್ರ ಮಾಡಿದ್ದಾರೆ. ಉಳಿದಂತೆ ಚಿತ್ರದಲ್ಲಿ ಪವನ್, ಲೋಕೇಶ್ ನಟಿಸಿದ್ದಾರೆ. ಚಿತ್ರಕ್ಕೆ ರಾಕಿ ಸೋನು ಸಂಗೀತವಿದೆ. ಚಿತ್ರವನ್ನು ಮುತ್ತುರಾಜ್, ವಸಂತ್‌ಕುಮಾರ್ ಹಾಗೂ ಚಂದ್ರಕುಮಾರ್ ಸೇರಿ ನಿರ್ಮಿಸಿದ್ದಾರೆ.