2016ರ ಜೂನ್ ತಿಂಗಳಲ್ಲಿ ನನ್ನ ಅಂತಿಮ ಪದವಿ ಪರೀಕ್ಷೆ ಮುಕ್ತಾಯವಾಯಿತು. ಆಗಸ್ಟ್ ತಿಂಗಳಲ್ಲಿ ನಮ್ಮ ರಿಸಲ್ಟ್ ಕೂಡ ಪ್ರಕಟವಾಯಿತು. ನನ್ನ ಸ್ನೇಹಿತರೆಲ್ಲರೂ ಮುಂದೆ ಹೈಯರ್ ಎಜುಕೇಶನ್ ಮಾಡುವುದಿಲ್ಲ ಎಂಬ ದಿಟ್ಟ ನಿರ್ಧಾರದಲ್ಲಿದ್ದರು. ಆದರೆ ನನಗೆ ಸ್ನಾತಕೋತ್ತರ ಪದವಿ ಮಾಡಬೇಕೆಂಬ ಆಸೆಯಿತ್ತು. ಪದವಿ ಮುಗಿಸಿ ಖಾಸಗಿ ಆಫೀಸಿನಲ್ಲಿ ಗುಮಾಸ್ತ ಅಥವಾ ರಿಸೆಪ್ಷನಿಸ್ಟ್ ಕೆಲಸ ಆಯ್ದುಕೊಂಡು ಕೆಲಸ ಮಾಡಲು ಇಷ್ಟವಿರಲಿಲ್ಲ. ಹಾಗೆಯೇ ನನಗೆ ನಮ್ಮೂರಿನಲ್ಲಿಯೇ ಕೆಲಸ ಮಾಡಬೇಕೆಂಬುದಾಗಿ ಆಸೆ ಇತ್ತು. ಮನೆಯವರನ್ನು ಬಿಟ್ಟು ಎಲ್ಲೋ ದೂರದಲ್ಲಿ ಕೆಲಸ ಮಾಡುವುದು ನನಗೆ ಕಷ್ಟವೆನಿಸಿತು.
ನನ್ನ ಈ ಎಲ್ಲ ಬೇಡಿಕೆಗಳು ಈಡೇರಬೇಕಾದರೆ ನನ್ನ ಪದವಿ ವಿದ್ಯಾಭ್ಯಾಸ ಸಾಲುವುದಿಲ್ಲ ಎಂಬ ವಿಷಯ ನನಗೆ ಅರಿವಿತ್ತು. ಹೀಗಾಗಿ ಸ್ನಾತಕೋತ್ತರ ವಿದ್ಯಾಭ್ಯಾಸ ಮಾಡಬೇಕು ಎಂದು ನಿರ್ಧರಿಸಿದೆ. ಆದರೆ ಮನೆಯಲ್ಲಿ ಎಲ್ಲರೂ ಇದಕ್ಕೆ ಸಮ್ಮತಿ ಸೂಚಿಸಲಿಲ್ಲ. “ಯಾವುದಾದರೂ ಕೆಲಸ ಹುಡುಕು. ಸಂಬಳ ಕಡಿಮೆಯಾದರೂ ಪರವಾಗಿಲ್ಲ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಆದರೆ ನಾನು ನನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳಲಿಲ್ಲ.
ಹೀಗಿರುವಾಗ, ನೀನು ಎಷ್ಟು ಓದಬೇಕು ಎಂದು ಬಯಸುತ್ತೀಯೋ, ಅಷ್ಟು ಓದು. ನನ್ನ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದವರು ನನ್ನ ಅಜ್ಜಿ. ನಮ್ಮ ಮನೆಯಲ್ಲಿ ಹೆಡ್ ಆಫ್ ದ ಫ್ಯಾಮಿಲಿ ಎಂದರೆ ನನ್ನ ಅಜ್ಜ. ಆದ್ದರಿಂದ ಅವರನ್ನು ಸಹ ನನ್ನ ಮುಂದಿನ ಶಿಕ್ಷಣದ ಆಸೆಯ ಕುರಿತು ಹೇಳಿ ನನ್ನ ಅಜ್ಜಿ ಒಪ್ಪಿಸಿಬಿಟ್ಟರು.
ಮುಂದೆ ಉಡುಪಿಯ ಕಾಲೇಜೊಂದರಲ್ಲಿ ನನ್ನ ಅಡ್ಮಿಷನ್ ಕೂಡ ಆಯಿತು. ಚೆನ್ನಾಗಿ ಕಲಿಕೆಯನ್ನು ಆರಂಭಿಸಿದೆ. ಸುಮಾರು ಮೂರು ತಿಂಗಳ ಹಿಂದಿನ ಮಾತಿದು. ನನ್ನ ಫಸ್ಟ್ ಸೆಮ್ ಪರೀಕ್ಷೆಗೆ ಐದು ದಿನಗಳು ಬಾಕಿ ಇತ್ತು. ಅಂದು ಡಿಸೆಂಬರ್ ತಿಂಗಳಿನ 18ನೆಯ ತಾರೀಕು, ನನ್ನ ಅಜ್ಜಿ ನಮ್ಮೆಲ್ಲರನ್ನು ಬಿಟ್ಟು ತನ್ನ ಕೊನೆಯುಸಿರೆಳೆದರು. ಎರಡು ವರ್ಷಗಳಿಂದ ಅವರು ಅಸೌಖ್ಯದಿಂದ ಬಳಲುತ್ತಿದ್ದರು. ಎಷ್ಟು ಪ್ರಯತ್ನಪಟ್ಟರೂ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ.
ಶಾರೀರಿಕವಾಗಿ ಇಂದು ನನ್ನ ಅಜ್ಜಿ ನಮ್ಮೊಂದಿಗೆ ಇಲ್ಲದಿರಬಹುದು. ಆದರೆ ಮಾನಸಿಕವಾಗಿ ಅವರು ನಮ್ಮೊಂದಿಗೇ ಇದ್ದಾರೆ. ಎಲ್ಲೋ ಒಂದು ಕಡೆಯಿಂದ ನಮ್ಮೆಲ್ಲರ ಒಳಿತಿಗಾಗಿ ಹರಸುತ್ತಿದ್ದಾರೆ. ಅವರಿಂದಾಗಿ ನನಗೆ ಉನ್ನತ ಶಿಕ್ಷಣ ಮಾಡುವ ಅವಕಾಶ ಸಿಕ್ಕಿತು. ಈ ಎರಡು ವರ್ಷದ ಶಿಕ್ಷಣವನ್ನು ಉತ್ತಮ ರೀತಿಯಲ್ಲಿ ಮುಗಿಸಿ ಅಜ್ಜಿಯ ಆತ್ಮಕ್ಕೆ ಸಂತೋಷ ದೊರಕುವಂತೆ ಮಾಡುವುದೇ ನನ್ನ ಮುಂದಿನ ಪ್ರಯತ್ನವಾಗಿದೆ.
ಸುಶ್ಮಿತಾ, ಪ್ರಥಮ ಎಂ. ಕಾಂ. ಡಾ| ಜಿ. ಶಂಕರ್ ಸರಕಾರಿ ಮಹಿಳಾ ಕಾಲೇಜು, ಉಡುಪಿ