ಶ್ರೀ ಭಗವಾನ್ ಬಾಹುಬಲಿಯ ಮಹಾಮಸ್ತಕಾಭಿಷೇಕದ ಹಿನ್ನೆಲೆ ಯಲ್ಲಿ ಶ್ರೀಕ್ಷೇತ್ರದಲ್ಲಿ ದಿಗಂಬರ ಮುನಿಶ್ರೇಷ್ಠರ ಮಹಾದರ್ಶನ ವಾಗುತ್ತಿದೆ. ಐಹಿಕ ವ್ಯಾಮೋಹಗಳನ್ನು ಜಯಿಸಿದ ದಿಗಂಬರ ಮುನಿಗಳು ಶ್ರೀ ಕ್ಷೇತ್ರ ಪ್ರವೇಶಿಸಿದ್ದಾರೆ. ಮಸ್ತಕಾಭಿಷೇಕ ಮುಗಿಯುವ ವರೆಗೂ ಅವರು ಇಲ್ಲೇ ಇದ್ದು, ಮಂಗಲ ಕಾರ್ಯದಲ್ಲಿ ಪಾಲ್ಗೊಂಡು ಅನಂತರ ಪ್ರಯಾಣ ಮುಂದು ವರಿಸಲಿದ್ದಾರೆ.
Advertisement
ಪ್ರಸ್ತುತ ನಾಲ್ವರು ಆಚಾರ್ಯರು, ಇಬ್ಬರು ಬಾಲಾಚಾರ್ಯರ ಸಹಿತ ಒಟ್ಟು 98 ಮಂದಿಯ ತ್ಯಾಗಿವೃಂದ ಶ್ರೀ ಕ್ಷೇತ್ರದಲ್ಲಿದೆ. ಇದರಲ್ಲಿ 28 ಮಂದಿ ಮಾತಾಜಿಯವರಿದ್ದಾರೆ. ಮುನಿಗಳು ದಿಗಂಬರರಾಗಿದ್ದರೆ, ಕ್ಷುಲ್ಲಕ ಮುನಿಗಳು ದ್ವಿವಸ್ತ್ರದಲ್ಲಿ, ಐಲಕ ಮುನಿಗಳು ಏಕವಸ್ತ್ರಧಾರಿ ಗಳಾಗಿದ್ದಾರೆ. ಮಾತಾಜಿಯವರು ಶ್ವೇತಾಂಬರಧಾರಿಗಳು.
ಸೂರ್ಯೋದಯದ ಬಳಿಕ ವಿವಿಧ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ತ್ಯಾಗಿಗಳು ಸೂರ್ಯಾಸ್ತ ವಾಗುತ್ತಿದ್ದಂತೆ ಮೌನಕ್ಕೆ ಜಾರುತ್ತಾರೆ. ಈ ಮೌನವ್ರತ ರಾತ್ರಿಯಿಡೀ ನಡೆಯುತ್ತದೆ. ಅವರು ನಿದ್ರಿಸುವುದು ಮರದ ಹಲಗೆಯ ಮೇಲೆ.
Related Articles
ತ್ಯಾಗಿಗಳು ಆಹಾರ ಸೇವನೆಯಲ್ಲಿ ಕಠಿನ ನಿಯಮಗಳನ್ನು ಅನುಸರಿಸು ತ್ತಾರೆ. ಬೆಳಗ್ಗೆ ಸುಮಾರು 9 ಗಂಟೆಯ ಆಸುಪಾಸಿನಲ್ಲಿ ತ್ಯಾಗಿಗಳು ತಮ್ಮ ಬಲಗೈಯ ಬೆರಳುಗಳನ್ನು ಬಲ ಭುಜದ ಮೇಲಿರಿಸಿ “ಆಹಾರ ಮುದ್ರಾ’ ನಿಯಮದಂತೆ ಆಹಾರ ಸೇವನೆಗೆ ಮುಂದಾಗುತ್ತಾರೆ. ಆಹಾರ ನೀಡುವ ಶ್ರಾವಕರು ಶುದ್ಧಾಚಾರದಲ್ಲಿದ್ದು, ಮಂಗಳ ಕಲಶ ಹಾಗೂ ತೆಂಗಿನಕಾಯಿಯನ್ನು ಕೈಯಲ್ಲಿ ಹಿಡಿದು ಮುನಿಗಳನ್ನು ಆಹ್ವಾನಿಸುತ್ತಾರೆ. “ಓಂ ಸ್ವಾಮಿ ನಮೋಸ್ತು… ಮನ ಶುದ್ಧಿ, ವಚನ ಶುದ್ಧಿ, ಕಾಯ ಶುದ್ಧಿ, ಆಹಾರ ಜಲ ಶುದ್ಧಿ… ನಾವು ನವದಾ ಭಕ್ತಿಯಿಂದ ಆಹಾರ ನೀಡುತ್ತೇವೆ, ಸ್ವೀಕರಿಸಿ’ ಎಂದು ಬಿನ್ನವಿಸುತ್ತಾರೆ. ಮುನಿಗಳು ಅಷ್ಟವಿಧಾರ್ಚನೆ ನಡೆಸಿದ ಬಳಿಕ ಆಹಾರ ಸೇವನೆಗೆ ಮುಂದಾಗುತ್ತಾರೆ.
Advertisement
ವಿಘ್ನ ಎದುರಾದರೆ “ಅಂತರಾಯ’ಆಹಾರ ಸೇವಿಸುವ ಸಂದರ್ಭದಲ್ಲಿ ಇರುವೆ, ಕಸ ಕಡ್ಡಿ, ಕೂದಲು ಸಹಿತ ಯಾವುದೇ ಅನ್ಯವಸ್ತುಗಳು ದೊರಕಿದರೆ ಮುನಿಗಳು “ಅಂತ ರಾಯ’ಕ್ಕೆ ಮುಂದಾಗುತ್ತಾರೆ. ಅಂದರೆ, ಆಹಾರ ಸೇವನೆಯನ್ನು ಕೈಬಿಡುತ್ತಾರೆ. ಹೀಗಾಗಿ ಆಹಾರವನ್ನು ಅತ್ಯಂತ ಸೂಕ್ಷ್ಮವಾಗಿ ಪರಿಶೀಲಿಸಿದ ಬಳಿಕವಷ್ಟೇ ಸೇವನೆ. “ಅಂತರಾಯ’ವಾದರೆ ಮತ್ತೆ ಮರುದಿನದ ವರೆಗೆ ಆಹಾರ ಸೇವಿಸುವಂತಿಲ್ಲ. ವಿಶೇಷವೆಂದರೆ, ಎರಡು-ಮೂರು ದಿನಕ್ಕೊಮ್ಮೆ ಆಹಾರ ಸೇವಿಸುವ ಮುನಿಗಳಿದ್ದಾರೆ! ಕೈಗಳೇ ಬಟ್ಟಲು!
ಆಹಾರ ಸ್ವೀಕರಿಸುವಾಗ ಮುನಿಗಳು ಪಾತ್ರೆಗಳನ್ನು ಬಳಸುವಂತಿಲ್ಲ ಎಂಬುದು ನಿಯಮ. ಹೀಗಾಗಿ ಜೋಡಿಸಿ ಒಡ್ಡಿದ ಅಂಗೈಗಳೇ ಬಟ್ಟಲು. ಶ್ರಾವಕರು ಮುನಿಗಳ ಕೈಗೆ ಆಹಾರ ನೀಡಬೇಕು. ಅದರಲ್ಲಿ ಫಲವಸ್ತುಗಳು, ಹಾಲು, ಸೀಯಾಳ ಇತ್ಯಾದಿ ಸಾತ್ವಿಕ ಆಹಾರವಸ್ತುಗಳಿರುತ್ತವೆ. ಮುನಿಗಳು ನಿಂತೇ ಆಹಾರ ಸೇವಿಸಿದರೆ, ಮಾತಾಜಿಯವರಿಗೆ ಮಾತ್ರ ಕುಳಿತುಕೊಳ್ಳಲು ಅವಕಾಶವಿದೆ. ದಿನಕ್ಕೆ ಒಂದು ಬಾರಿ ಮಾತ್ರ ನೀರು- ಆಹಾರ ಸೇವನೆ. ಮತ್ತೆ ಮರುದಿನ! ದಿನಪೂರ್ತಿ ಕಾಲ್ನಡಿಗೆ
ದಿಗಂಬರ ಮುನಿಗಳಿಗೆ ನಿತ್ಯ ನೆಲೆ ಎಂಬುದಿಲ್ಲ. ಮಳೆಗಾಲದ ಸುಮಾರು 4 ತಿಂಗಳು ಚಾತುರ್ಮಾಸ (ವರ್ಷಾಯೋಗ) ಹೊರತುಪಡಿಸಿದರೆ ನಿತ್ಯವೂ ಧರ್ಮಪ್ರಚಾರ ಮಾಡುತ್ತಾ ಪಾದಚಾರಿಗಳಾಗಿ ಮಂಗಳ ವಿಹಾರ ಮಾಡುತ್ತಾರೆ. ಹಗಲು ಪೂರ್ಣ ಕಾಲ್ನಡಿಗೆಯಲ್ಲಿಯೇ ಸಂಚರಿಸುವ ಮುನಿಗಳು ಸಂಜೆಯಾಗುತ್ತಲೇ ಕಾಲ್ನಡಿಗೆ ನಿಲ್ಲಿಸಿ ವಾಸ್ತವ್ಯ ಹೂಡುತ್ತಾರೆ. ದಿನಕ್ಕೆ ಕಡಿಮೆ ಅಂದರೂ 30ರಿಂದ 40 ಕಿ.ಮೀ. ನಡೆಯುತ್ತಾರೆ. ವಿಹಾರ ಹೊರಡುವ ಮುನಿಗಳು ನವಿಲುಗರಿಯಿಂದ ತಯಾರಿಸಿದ “ಪಿಂಛಿ’ಯನ್ನು ಹಿಡಿದಿರುತ್ತಾರೆ. ಶ್ರೀಕ್ಷೇತ್ರದಲ್ಲಿರುವ ಮುನಿಗಳ ದಿನಚರಿ
ಮುಂಜಾನೆ 4: ಏಳುತ್ತಾರೆ. ಬಳಿಕ ಸಾಮೂಹಿಕ ಧ್ಯಾನ, ಜಪ ತಪ
6.00: ಪ್ರತಿಕ್ರಮಣ- ಮಂತ್ರಪಠಣ. ಇದು ತಿಳಿಯದೆ ಜೀವಹಿಂಸೆ ಆಗಿದ್ದರೆ ಪ್ರಾಯಶ್ಚಿತ್ತ.
7.00: ಜಿನಮಂದಿರ ದರ್ಶನ
9.00: ಆಹಾರ ಚರ್ಯೆ.
ಮಧ್ಯಾಹ್ನ 12.00: ಕಣ್ಣು ಮುಚ್ಚಿ ಸಾಮೂಹಿಕ ಧ್ಯಾನ, ಜಪ-ತಪ.
ಮಧ್ಯಾಹ್ನ 3.00: ಸ್ವಅಧ್ಯಯನ.
ಸಂಜೆ 5.00: ಪ್ರತಿಕ್ರಮಣ.
ಸಂಜೆ 6.00: ಗುರುಪೂಜೆ
7.00: ನಿದ್ದೆ