Advertisement

ನಗರದಲ್ಲಿ ಅದ್ದೂರಿ ಕೃಷ್ಣ ಜನ್ಮಾಷ್ಟಮಿ ಆಚರಣೆ

12:14 PM Sep 03, 2018 | |

ಬೆಂಗಳೂರು: ರಾಜಧಾನಿಯಾದ್ಯಂತ ಭಾನುವಾರ ಶ್ರೀಕೃಷ್ಣ ಜನ್ಮಾಷ್ಟಮಿ ಅದ್ಧೂರಿಯಾಗಿ ನೆರವೇರಿತು. ಇಸ್ಕಾನ್‌ ಸೇರಿದಂತೆ ಇತರೆ ದೇವಸ್ಥಾನಗಳು, ಸಂಘ ಸಂಸ್ಥೆಗಳಿಂದ ಮೊಸರು ಕುಡಿಕೆ, ಮಕ್ಕಳಿಗಾಗಿ ಕೃಷ್ಣ ವೇಷಧಾರಿ ಸ್ಪರ್ಧೆಯು ಆಚರಣೆಗೆ ರಂಗು ತಂದಿತ್ತು.

Advertisement

ನಗರದ ಅರಮನೆ ಮೈದಾನದ ತ್ರಿಪುರ ವಾಸಿನಿಯ ಬೃಹತ್‌ ವೇದಿಕೆಯಲ್ಲಿ ಇಸ್ಕಾನ್‌ ವತಿಯಿಂದ ವಿಶೇಷ ಪೂಜೆಗಳು ನಡೆದವು. ರಾಧಾಕೃಷ್ಣಚಂದ್ರ ಉತ್ಸವ ಮೂರ್ತಿಯನ್ನು ಚಿನ್ನ, ವಜ್ರಾಭರಣ, ನೇಯ್ಗೆಯುಳ್ಳ ಚಿತ್ತಾಕರ್ಷಕ ವಸ್ತುಗಳಿಂದ ಅಲಂಕರಿಸಲಾಗಿತ್ತು. ಜತೆಗೆ ಕೃಷ್ಣನಿಗೆ ಉಯ್ನಾಲೆ ಸೇವೆ, ಅಭಿಷೇಕ, ವಿಶೇಷ ಪೂಜಾ ಕಾರ್ಯಕ್ರಮಗಳು ದಿನವಿಡಿ ನಡೆದವು.

ಬೆಳಗ್ಗೆ 8 ಗಂಟೆಗೆ ಗೋ ಸೇವೆ, ಅರ್ಚನೆ, ಪುಷ್ಪಾಂಜಲಿ ಮೂಲಕ ಕಾರ್ಯಕ್ರಮಗಳು ಆರಂಭವಾಗಿ ಸಂಜೆ ಐದು ಗಂಟೆಯವರೆಗೆ ಸಂಗೀತ ಸೇವೆ ಮತ್ತು ವಿಷ್ಣು ಸಹಸ್ರನಾಮ ಕಾರ್ಯಕ್ರಮಗಳನ್ನು ಜರುಗಿದವು. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರತ್ಯೇಕ ವೇದಿಕೆಗಳನ್ನು ಕಲ್ಪಿಸಲಾಗಿತ್ತು.

ಇನ್ನು ಅರಮನೆ ಮೈದಾನಕ್ಕೆ ಭಕ್ತ ಸಾಗರವೇ ಹರಿದು ಬಂದಿತ್ತು. ಸರತಿ ಸಾಲಿನಲ್ಲಿ ನಿಂತು ಸಾವಿರಾರು ಮಂದಿ ಕೃಷ್ಣನ ದರ್ಶನ ಪಡೆದರು. ಇದರ ಜತೆಗೆ ರಾಜಾಜಿನಗರದ ಇಸ್ಕಾನ್‌ ದೇವಸ್ಥಾನದಲ್ಲಿಯೂ ವಿಶಿಷ್ಟ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲಾಯಿತು.

ಮಕ್ಕಳ ಕಲರವ: ನಗರದ ನಾನಾ ಭಾಗಗಳಿಂದ ಬಂದ ಮಕ್ಕಳು ಕೃಷ್ಣ ರಾಧೆಯ ವೇಷ ಭೂಷಣ ತೊಟ್ಟು ಇಸ್ಕಾನ್‌ ಉತ್ಸವದ ಮೆರಗು ಹೆಚ್ಚಿಸಿದ್ದರು. ಮಕ್ಕಳಿಗಾಗಿಯೇ ಹಮ್ಮಿಕೊಂಡಿದ್ದ ಪದ್ಯ, ಕಥೆ, ಆಶು ಭಾಷಣ ಸ್ಪರ್ಧೆಗಳ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಖುಷಿಪಟ್ಟರು. ಕೆಲ ಚಿಣ್ಣರು ಭಗವದ್ಗೀತೆ ಮತ್ತು ಭಗವಂತನ ಕೊಂಡಾಡುವ ಆಯ್ದ ವೈದಿಕ ಮಂತ್ರಗಳನ್ನು ಪಠಿಸಿ ಎಲ್ಲರ ಗಮನ ಸೆಳೆದರು. 

Advertisement

ಪ್ರಸಾದ ವ್ಯವಸ್ಥೆ: ಇಸ್ಕಾನ್‌ ವತಿಯಿಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. 25 ಟನ್‌ ಸಿಹಿ ಪೊಂಗಲ್‌, 1 ಲಕ್ಷ ಕೆಜಿ ಲಡ್ಡು, 15 ಟನ್‌ ಬಿಸಿಬೇಳೆ ಬಾತ್‌, 60 ಕಿಲೋ ಪುಳಿಯೋಗರೆ, 400 ಕೆಜಿ ನಿಂಬೆ ಚಿತ್ರನ್ನ, 3 ಸಾವಿರ ಬರ್ಫಿ, 2 ಟನ್‌ ಖಾರ ಪೊಂಗಲ್‌ ಮತ್ತು 15 ಸಾವಿರ ಮೈಸೂರು ಪಾಕ್‌ಗಳನ್ನು ಪ್ರಸಾದ ರೂಪದಲ್ಲಿ ವಿತರಿಸಲಾಯಿತು ಎಂದು ಪ್ರಕಟಣೆ ತಿಳಿಸಿದೆ. 

ಪೂರ್ಣಪ್ರಜ್ಞ ವಿದ್ಯಾಪೀಠ: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕತ್ತರಗುಪ್ಪೆ ಮುಖ್ಯರಸ್ತೆ ಬಳಿಯ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ವಿಶೇಷ ಕಾರ್ಯಕ್ರಮಗಳು ನಡೆದವು. ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಯವರು ವಿಶೇಷ ಪೂಜೆ ಸಲ್ಲಿಸಿದರು. ಆನಂತರ ಕೃಷ್ಣನ ಸಂದೇಶ ಸಾರಿದರು. ಮೈಸೂರು ರಾಮಚಂದ್ರಾಚಾರ್ಯರಿಂದ ದಾಸವಾಣಿ ಕಾರ್ಯಕ್ರಮ ನಡೆಯಿತು.
 
ಸೋಮವಾರವೂ ವಿಶೇಷ ಕಾರ್ಯಕ್ರಮ: ಇಸ್ಕಾನ್‌ನಲ್ಲಿ ಸೋಮವಾರವೂ ದಿನವಿಡೀ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆಯಲಿದೆ. ರಾತ್ರಿ 10 ಗಂಟೆಗೆ ವಿಶೇಷ ಅಭಿಷೇಕ, 11.30ಕ್ಕೆ ವಿಡಿಯೋ ಪ್ರದರ್ಶನ ಹಾಗೂ ರಾತ್ರಿ 12ಕ್ಕೆ ಮಹಾಮಂಗಳಾರತಿ ನಡೆಯಲಿದೆ. 12.30ಕ್ಕೆ ಉತ್ಸವಕ್ಕೆ ತೆರೆಬೀಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next