ಬೆಂಗಳೂರು: “ನಾನು ಬಾಲ್ಯದಲ್ಲಿ ಅಮ್ಮನ ಲಾಲಿ ಕೇಳಿಲ್ಲ, ಅಪ್ಪನ ಸಂಗೀತವನ್ನೇ ಲಾಲಿಯಂತೆ ಕೇಳಿ ಬೆಳೆದೆ. ನನಗೆ ಸಂಗೀತದ ವ್ಯಾಕರಣ ಗೊತ್ತಿಲ್ಲ. ಆದರೆ, ರಾಗ ಹೇಗೆ ಹಾಡಬೇಕು ಎಂದು ಗೊತ್ತಿದೆ’ ಹೀಗೆಂದು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದು ಖ್ಯಾತ ಹಿಂದೂಸ್ತಾನಿ ಸಂಗೀತ ಕಲಾವಿದ ಪಂಡಿತ್ ರಾಜಶೇಖರ್ ಮನ್ಸೂರ್.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಯನ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ “ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, “ನಾನು ಸಂಗೀತಗಾರನಾಗುತ್ತೇನೆ ಎಂದು ಕನಸಿನಲ್ಲೂ ಯೋಚಿಸಿರಲಿಲ್ಲ.
ನಾನು ಡಾಕ್ಟರ್ ಆಗಬೇಕು ಎಂಬುದು ತಂದೆ ಮಲ್ಲಿಕಾರ್ಜುನ ಮನ್ಸೂರ್ ಅವರ ಆಸೆಯಾಗಿತ್ತು. ಆದರೆ, ನಾನು ಇಂಗ್ಲಿಷ್ ಅಧ್ಯಾಪಕನಾದೆ. 25 ವರ್ಷ ಸೇವೆ ಸಲ್ಲಿಸಿದ ಬಳಿಕ ನಿವೃತ್ತನಾಗಿ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದಾಗಿ ತಂದೆಗೆ ಹೇಳಿದ್ದೆ. ವೃತ್ತಿಯ ಜತೆಗೆ ಸಂಗೀತವನ್ನು ಪ್ರವೃತ್ತಿಯನ್ನಾಗಿ ಮಾಡಿಕೊಳ್ಳುವಂತೆ ಅವರು ಹೇಳಿದ್ದರು. ಅದರಂತೆ ನಡೆದುಕೊಂಡೆ,’ ಎಂದರು.
ಸಂಗೀತ ವಿವಿಗಳಿಗೆ ಹಣ ವ್ಯರ್ಥ: “ಸಂಗೀತ ವಿವಿಗಳು, ಕಾಲೇಜುಗಳು ನಿಜವಾದ ಸಂಗೀತಗಾರರನ್ನಲ್ಲ, ಸಂಗೀತ ಕೇಳುಗರನ್ನು ಹುಟ್ಟು ಹಾಕುತ್ತಿವೆ. ಸಂಗೀತ ವಿವಿಯಿಂದ ತಯಾರದ ಒಬ್ಬನೇ ಒಬ್ಬ ಸಂಗೀತಗಾರರನ್ನು ಇಡೀ ದೇಶದಲ್ಲಿ ಕಾಣುವುದು ಕಷ್ಟ. ವಿ.ವಿ.ಗಳಲ್ಲಿ ಒಂದು ಗಂಟೆಯ ಅವಧಿಯಲ್ಲಿ ಸಂಗೀತ ಹೇಳಿಕೊಟ್ಟು, ಮತ್ತೂಂದು ಅವಧಿಯಲ್ಲಿ ಬೇರೆ ವಿಷಯವನ್ನು ಹೇಳಿಕೊಡುವುದರಿಂದ ಸಂಗೀತ ಬರುವುದಿಲ್ಲ.
ಇದಕ್ಕಾಗಿ ಸರ್ಕಾರ ಖರ್ಚು ಮಾಡುತ್ತಿರುವ ಹಣ ವ್ಯರ್ಥವಾಗುತ್ತದೆ ಅಷ್ಟೇ ಎಂದು ಮನ್ಸೂರ್ ಬೇಸರ ವ್ಯಕ್ತಪಡಿಸಿದರು. ಸಂಗೀತಗಾರರು ಬೇರೆಯವರನ್ನು ಅನುಕರಣೆ ಮಾಡಬಾರದು. ತಮ್ಮ ಸ್ವಂತಿಕೆಯನ್ನು ತೋರಿಸಬೇಕು ಎಂದು ಇದೇ ವೇಳೆ ಮನ್ಸೂರ್ ಸಲಹೆ ನೀಡಿದರು.