ಬೆಂಗಳೂರು: ವಿಶ್ವವಿದ್ಯಾಲಯಗಳ ಸಮಗ್ರ ಕಾಯ್ದೆ ತಿದ್ದುಪಡಿ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ಪ್ರಯತ್ನಕ್ಕೆ ರಾಜ್ಯಪಾಲ ವಜುಬಾಯಿ ವಾಲಾ ಬ್ರೇಕ್ ಹಾಕಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ರಾಜ್ಯಪಾಲರು, ವಿಶ್ವವಿದ್ಯಾಲಯಗಳಿಗೆ ಕುಲಪತಿಗಳನ್ನು ನೇಮಕ ಮಾಡುವ ಅಧಿಕಾರ ಯುಜಿಸಿಯಿಂದ ರಾಜ್ಯಪಾಲರಿಗೆ ದೊರೆತಿದೆ. ರಾಜ್ಯ ಸರ್ಕಾರ ರಾಜ್ಯಪಾಲರಿಗಿರುವ ಅಧಿಕಾರವನ್ನು ಮೊಟಕುಗೊಳಿಸುವ ಪ್ರಯತ್ನ ಮಾಡುವುದು ಸರಿಯಲ್ಲ. ಈ ಕುರಿತು ಉನ್ನತ ಶಿಕ್ಷಣ ಸಚಿವರಿಗೆ ಮನವರಿಕೆ ಮಾಡಿಕೊಟ್ಟು, ಸರ್ಕಾರ ತರಲು ಉದ್ದೇಶಿಸಿರುವ ಬದಲಾವಣೆಯನ್ನು ಕೈ ಬಿಡುವಂತೆ ಪತ್ರದಲ್ಲಿ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಉನ್ನತ ಶಿಕ್ಷಣ ಸಚಿವ ಬಸರಾಜ ರಾಯರಡ್ಡಿ ಅವರು ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕ ಹಾಗೂ ಕುಲಪತಿಗಳಿಗಿರುವ ಅಧಿಕಾರವನ್ನು ಮೊಟಕುಗೊಳಿಸಿ ಸರ್ಕಾರವೇ ನೋಡಿಕೊಳ್ಳುವ ಬಗ್ಗೆ ಸಮಗ್ರ ಕಾನೂನು ತಿದ್ದುಪಡಿ ತರಲು ಮುಂದಾಗಿದ್ದರು.
ವಿಶ್ವವಿದ್ಯಾಲಯಗಳಲ್ಲಿ ಕುಲಪತಿಗಳು ಕಟ್ಟಡ ಕಾಮಗಾರಿಗಳಂತಹ ಆಡಳಿತಾತ್ಮಕ ಕಾರ್ಯ ನಿರ್ವಹಿಸುವ ಬದಲು ಬೋಧನಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದಿದ್ದರು. ಅಲ್ಲದೆ, ವಿಸಿಗಳ ನೇಮಕ ಮಾಡಲು ಕೆಪಿಎಸ್ಸಿ ಮಾದರಿಯಲ್ಲಿ ಪ್ರತ್ಯೇಕ ಸಂಸ್ಥೆ ತೆರೆದು, ಆ ಮೂಲಕ ಕುಲಪತಿಗಳ ನೇಮಕ ಮಾಡುವ ಕುರಿತು ಕಾನೂನು ತಿದ್ದುಪಡಿ ಮಾಡಲು ಮುಂದಾಗಿದ್ದರು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ರಾಜ್ಯಪಾಲರಿಗೆ ದೂರು ಬಂದ ಕಾರಣ ಅವರು ಮುಖ್ಯಮಂತ್ರಿಗೆ ಪತ್ರ ಬರೆದು, ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸುವ ಪ್ರಯತ್ನ ಸಮಂಜಸವಲ್ಲ ಎಂದು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.